ಪುತ್ತೂರು - ಮಂಗಳೂರು ತಡೆರಹಿತ ಬಸ್ ಸಂಚಾರ ಇಂದಿನಿಂದ ಆರಂಭ PUTTUR TO STATE BANK EXPRESS BUS
ಪುತ್ತೂರು-ಸ್ಟೇಟ್ ಬ್ಯಾಂಕ್ ನಡುವೆ ಬಹುನಿರೀಕ್ಷಿತ ತಡೆರಹಿತ ಕೆಎಸ್‌ಆರ್‌ಟಿಸಿ ಎಕ್ಸ್‌ಪ್ರೆಸ್ ಬಸ್ ಸಂಚಾರ ಜು.14ರಿಂದ ಆರಂಭವಾಗಲಿದೆ. ಈ ತಡೆರಹಿತ ಬಸ್‌ಗಳು ಕಲ್ಲಡ್ಕ, ಮೆಲ್ಕಾರ್ ಹಾಗೂ ಬಿ.ಸಿ.ರೋಡ್ ಮೇಲೇತುವೆ ಮೂಲಕ ಸಂಚರಿಸಿ 52 ಕಿ.ಮೀ. ದೂರವನ್ನು ಕೇವಲ ಒಂದು ಗಂಟೆ ಅವಧಿಯಲ್ಲಿ ಕ್ರಮಿಸಿ ಗಮ್ಯಸ್ಥಾನ ತಲುಪಲಿವೆ. ಈ ತಡೆರಹಿತ ಸಂಚಾರಕ್ಕೆ 'ಪುತ್ತೂರು ಎಕ್ಸ್ ಪ್ರೆಸ್' ಎಂದು ನಾಮಕರಣ ಮಾಡಲಾಗಿದೆ.
ಪುತ್ತೂರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಬೆಳಗ್ಗೆ 11 ಗಂಟೆಗೆ ಶಾಸಕ ಅಶೋಕ್ ಕುಮಾರ್ ರೈ ಅವರು ಪುತ್ತೂರು ಎಕ್ಸ್‌ಪ್ರೆಸ್ ಸಂಚಾರಕ್ಕೆ ಚಾಲನೆ ನೀಡುವರು. ಪ್ರತಿದಿನ ಬೆಳಗ್ಗೆ 7 ಗಂಟೆಯಿಂದ ಪ್ರತಿ 20 ನಿಮಿಷಕ್ಕೊಮ್ಮೆ ಪುತ್ತೂರು ಹಾಗೂ ಸ್ಟೇಟ್ ಬ್ಯಾಂಕ್‌ನಿಂದ ಪುತ್ತೂರು ಎಕ್ಸ್‌ಪ್ರೆಸ್ ಸಂಚಾರ ನಡೆಸಲಿದೆ. ಸ್ಟೇಟ್ ಬ್ಯಾಂಕ್‌ನಿಂದ ಪುತ್ತೂರಿಗೆ ಸಂಜೆ 6.20ಕ್ಕೆ ಕೊನೆ ಸಂಚಾರ ಇರಲಿದೆ.
ಪುತ್ತೂರು ನಿಲ್ದಾಣದಿಂದ ಹೊರಡುವ ಬಸ್‌ಗೆ
ಕೋರ್ಟ್ ರಸ್ತೆ, ಪೊಲೀಸ್ ಸ್ಟೇಷನ್, ಬೊಳುವಾರು ಹಾಗೂ ನಗರದಲ್ಲಿ ಮಾತ್ರ ನಿಲುಗಡೆ ಇರುತ್ತದೆ. ಬಳಿಕ ಪಡೀಲ್, ಪಂಪ್‌ವೆಲ್, ಕಂಕನಾಡಿ, ಜ್ಯೋತಿ ಅಂಬೇಡ್ಕರ್ ಸರ್ಕಲ್, ಆರ್‌ಟಿಒ ಬಳಿಕ ಸ್ಟೇಟ್ ಬ್ಯಾಂಕ್‌ನಲ್ಲಿ ನಿಲುಗಡೆ ಇರುತ್ತದೆ. ಟಿಕೆಟ್ ಪ್ರಯಾಣ ದರ 71 ರೂ. ಆಗಿದ್ದು, ಚಾಲಕ ಕಂ ನಿರ್ವಾಹಕ(ಡಿಕಂಸಿ)ಒಬ್ಬರೇ ಕರ್ತವ್ಯ ನಿರ್ವಹಿಸಲಿದ್ದಾರೆ. ಈ ಬಸ್‌ಗೆ ಎಲ್ಲ ಬಗೆಯ ಪಾಸುಗಳು ಅನ್ವಯವಾಗುತ್ತದೆ ಎಂದು ವಿಭಾಗೀಯ ಸಂಚಾರ ನಿಯಂತ್ರಕ ಜೈಶಾಂತ್ ತಿಳಿಸಿದ್ದಾರೆ.
ಪ್ರಯಾಣಿಕರ ಬೇಡಿಕೆಯ ಹಿನ್ನೆಲೆಯಲ್ಲಿ ಗಮ್ಯಸ್ಥಾನ ಬೇಗನೆ ತಲುಪಲು ಪುತ್ತೂರು ಎಕ್ಸ್ ಪ್ರೆಸ್ ಬಸ್ ಏರ್ಪಡಿಸಲಾಗಿದೆ. ಪ್ರಯಾಣಿಕರು ಇದರ ಪ್ರಯೋಜನ ಪಡೆದುಕೊಳ್ಳಬಹುದು.
ಅಮಲಿಂಗಯ್ಯ ಬಿ.ಹೊಸ ಪೂಜಾರಿ | ವಿಭಾಗೀಯ ನಿಯಂತ್ರಣಾಧಿಕಾರಿ
/ ಉದ್ಯೋಗಿಗಳಿಗೆ, ವಿದ್ಯಾರ್ಥಿಗಳಿಗೆ ಸೇರಿದಂತೆ ಎಲ್ಲರಿಗೆ ಬೇಗನೆ ತೆರಳಲು ಅನುಕೂಲವಾಗಲು ಪುತ್ತೂರು ಎಕ್ಸ್ಪ್ರೆಸ್‌ನ್ನು ಆರಂಭಿಸಲಾಗುತ್ತಿದೆ. ವಿದೇಶ ಸೇರಿದಂತೆ ಇಲ್ಲಿ ಕೂಡ ಜನತೆ ಕಾರು ಮುಂತಾದ ಸ್ವಂತ ವಾಹನ ಬದಲು ಬಸ್‌ನಲ್ಲೇ ಪ್ರಯಾಣಿಸುವ ಮೂಲಕ ಸಮಯ ಉಳಿತಾಯವಲ್ಲದೆ, ಮಾಲಿನ್ಯಮುಕ್ತ ಪರಿಸರಕ್ಕೆ ಕೊಡುಗೆ ನೀಡಲು ಮುಂದಾಗಬೇಕು. ಜನತೆ ಈ ಸೌಲಭ್ಯದ ಸದ್ಬಳಕೆ ಮಾಡಬೇಕು.
ಅಶೋಕ್ ಕುಮಾರ್ ರೈ | ಶಾಸಕರು ಪುತ್ತೂರು ವಿಧಾನಸಭಾ ಕ್ಷೇತ್ರ