ಪಾಣಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರ ವಿರುದ್ಧದ ಆರೋಪ| ಪಿಡಿಒ ಅವರ ಕರ್ತವ್ಯ ಲೋಪವೇ ಎಲ್ಲ ಗೊಂದಲಗಳಿಗೆ ಕಾರಣ: ಪಾಣಾಜೆ ಗ್ರಾ.ಪಂ.ಅಧ್ಯಕ್ಷೆ ಮೈಮುನತ್ತುಲ್ ಮೆಹ್ರಾ ಸ್ಪಷ್ಟನೆ
ಪುತ್ತೂರು: ಪಾಣಾಜೆ ಗ್ರಾಮ ಪಂಚಾಯತ್ ಹಾಗೂ ಬದ್ರಿಯಾ ಮಸೀದಿಯ ವಿವಾದಿತ ಜಾಗದ ವಿಷಯದ ಬಗ್ಗೆ 03.09.2024ರ ಸಾಮಾನ್ಯ ಸಭೆಯಲ್ಲಿ ಸರ್ವ ಸದಸ್ಯರ ಒಮ್ಮತದ ಅಭಿಪ್ರಾಯದಂತೆ, ಸೌಹಾರ್ದಯುತವಾಗಿ ಹಾಗೂ ನ್ಯಾಯಯುತವಾದ ವಿಧದಲ್ಲಿ ಒಂದು ತೀರ್ಮಾನವನ್ನು ಪಂಚಾಯತ್ ಅಧ್ಯಕ್ಷರೇ ತೆಗೆದುಕೊಂಡು ಜಾಗದ ವಿವಾದವನ್ನು ಬಗೆ ಹರಿಸುವಂತೆ ನಿರ್ಣಯಿಸಲಾಗಿತ್ತು.
ಹಾಗಾಗಿ 18.11.2025ರ ಸಾಮಾನ್ಯ ಸಭೆಯಲ್ಲಿ ಪ್ರಸ್ತುತ ಜಾಗದ ವಿಷಯ ಚರ್ಚಿಸಲ್ಪಟ್ಟು ಒಟ್ಟು 1.15 ಎಕ್ರೆ ಜಾಗದಿಂದ 70 ಸೆಂಟ್ಸ್ ಜಾಗ ಪಂಚಾಯತ್ ಪಾಲಿಗೂ, ಉಳಿದ 45 ಸೆಂಟ್ಸ್ ಜಾಗವನ್ನು ಮಸೀದಿ ಪಾಲಿಗೂ ಬರುವಂತೆ ವಿಂಗಡಿಸಿ ಗಡಿ ಗುರುತು ಮಾಡಲು ಕಂದಾಯ ಇಲಾಖೆಗೆ ಬರೆಯುವ ನಿರ್ಣಯವನ್ನು ನಾನು ಸಭೆಯಲ್ಲಿ ಮಂಡಿಸಿದ್ದೆ.
ಆದರೆ ನಮ್ಮ ಪಿಡಿಒ ಸದ್ರಿ ನಿರ್ಣಯವನ್ನು ನಿರ್ಣಯ ಪುಸ್ತಕದಲ್ಲಿ ಒಂದು ರೀತಿ ಹಾಗೂ ಆನ್ ಲೈನ್‌ನಲ್ಲಿ ಮತ್ತೊಂದು ರೀತಿ ತಿರುಚಿ ಬರೆದು ಅದರ ಪ್ರತಿಗಳನ್ನು ಸಾರ್ವಜನಿಕ ವಲಯಕ್ಕೆ ರವಾನಿಸಿದ್ದೇ ಇಷ್ಟೊಂದು ಗೊಂದಲಗಳಿಗೆ ಕಾರಣವಾಯ್ತು.ಸಾಮಾನ್ಯ ಸಭೆಯಲ್ಲಿ ಮಾಡಿದ ನಿರ್ಣಯವನ್ನು ಉದ್ದೇಶ ಪೂರ್ವಕವಾಗಿಯೇ ಆನ್ ಲೈನ್‌ನಲ್ಲಿ ಸರಿಯಾದ ರೀತಿಯಲ್ಲಿ ಅಪ್‌ಲೋಡ್ ಮಾಡದೇ ಜನರಲ್ಲಿ ಗೊಂದಲ ಉಂಟು ಮಾಡುವ ದುರುದ್ದೇಶದಿಂದ ಕರ್ತವ್ಯ ಲೋಪವೆಸಗಿ ಈ ಸಮಸ್ಯೆಯನ್ನು ನಿರ್ಮಾಣ ಮಾಡಿದ್ದಾರೆ ಎಂದು ಪಾಣಾಜೆ ಗ್ರಾ.ಪಂ.ಅಧ್ಯಕ್ಷೆ ಮೈಮುನತ್ತುಲ್ ಮೆಹ್ರಾ ಸ್ಪಷ್ಟನೆ ನೀಡಿದ್ದಾರೆ.
ಪಂಚಾಯತ್ ಕಚೇರಿಯ ಪಕ್ಕದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಕಟ್ಟಡವಿರುವ ಜಾಗವೂ ವಿವಾದದಲ್ಲಿದ್ದು ಅದನ್ನು ಕೂಡ ಬಗೆಹರಿಸಿ ಗಡಿ ಗುರುತು ಮಾಡಲು ಕಂದಾಯ ಇಲಾಖೆಗೆ ಬರೆಯಲಾಗಿದೆ.
ಇದೆಲ್ಲವೂ ನಮ್ಮ ಆಡಳಿತ ಅವಧಿ ಇನ್ನೇನು ಮುಗಿಯುವ ಹಂತದಲ್ಲಿ ಇರುವುದರಿಂದ ಅದೆಕ್ಕೆಲ್ಲ ಒಂದು ಪರಿಹಾರ ಕಂಡುಕೊಳ್ಳುವ ಒಂದೇ ಒಂದು ಉದ್ದೇಶದಿಂದ ಹಾಗೂ ಗ್ರಾಮದ ಅಭಿವೃದ್ಧಿಯ ಹಿತದೃಷ್ಟಿಯಿಂದ ಈ ರೀತಿಯ ನಿರ್ಣಯ ಮಾಡಿರುವುದೇ ಹೊರತು ಇದರಲ್ಲಿ ರಾಜಕೀಯ ಪ್ರೇರಿತ, ಪಕ್ಷಾತೀತ,ಧಾರ್ಮಿಕವಾದ ಅಥವಾ ವೈಯಕ್ತಿಕವಾದ ಯಾವುದೇ ಉದ್ದೇಶಗಳು ಇರುವುದಿಲ್ಲ ಎಂದು ಅವರು ' ಪ್ರತಿಕ್ರಿಯೆ ನೀಡಿದ್ದಾರೆ.