ಯೆಮೆನ್: ಮರಣದಂಡನೆಗೆ ಕೇವಲ 2 ದಿನಗಳು ಬಾಕಿ- ನಿಮಿಷಾಪ್ರಿಯ ಬಿಡುಗಡೆಗೆ ಇಂಡಿಯನ್ ಗ್ರ್ಯಾಂಡ್ ಮುಫ್ತಿ ಎ. ಪಿ ಅಬೂಬಕ್ಕರ್ ಮುಸ್ಲಿಯಾರ್ ಮಧ್ಯಪ್ರವೇಶ
ಕೋಝಿಕ್ಕೋಡ್: ಮರಣದಂಡನೆ ಶಿಕ್ಷೆಗೆ ಗುರಿಯಾಗಿ ಯೆಮೆನ್ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ಮಲಯಾಳಿ ನರ್ಸ್ ನಿಮಿಷಪ್ರಿಯಾ ಅವರ ಬಿಡುಗಡೆಗಾಗಿ ಇಂಡಿಯನ್ ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎಪಿ ಅಬೂಬಕರ್ ಮುಸ್ಲಿಯಾರ್ ಮಧ್ಯಪ್ರವೇಶಿಸಿದ್ದಾರೆ.
ಅವರು, ಯೆಮೆನ್‌ನ ಪ್ರಮುಖ ಸೂಫಿ ವಿದ್ವಾಂಸರ ಮೂಲಕ ಯೆಮೆನ್ ಸರ್ಕಾರದೊಂದಿಗೆ ಮಾತುಕತೆ ನಡೆಸಿದ್ದಾರೆ ಎಂದು ವರದಿಯಾಗಿದೆ. ಹತ್ಯೆಗೊಳಗಾದ ಯೆಮೆನ್ ಪ್ರಜೆ ತಲಾಲ್ ಸಹೋದರನೊಂದಿಗೂ ಸಂವಹನ ನಡೆಸಲಾಗಿದೆ ಎಂದು ತಿಳಿದುಬಂದಿದೆ. ಆಶಾದಾಯಕ ಪ್ರತಿಕ್ರಿಯೆ ಲಭಿಸಿರುವುದಾಗಿ ಕಾಂತಪುರಂ ಉಸ್ತಾದರಿಗೆ ಸಂಬಂಧಿಸಿದಂತೆ ಮರ್ಕಝ್ ನಿಂದ ಮಾಹಿತಿ ಲಭಿಸಿದೆ. ಶಾಸಕ ಚಾಂಡಿ ಉಮ್ಮನ್ ಕೂಡ ಈ ವಿಷಯದಲ್ಲಿ ಕಾಂತಪುರಂ ಉಸ್ತಾದರ ಮಧ್ಯಪ್ರವೇಶವನ್ನು ಕೋರಿದ್ದರು.
ನಿಮಿಷಪ್ರಿಯ ಬಿಡುಗಡೆ ನೆರವು ಸಮಿತಿಗೆ ಯೆಮೆನ್ ಸುನ್ನಿ ವಿದ್ವಾಂಸ ಶೈಖ್ ಹಬೀಬ್ ಉಮರ್ ಬಿನ್ ಹಾಫಿಝ್ ಮೂಲಕ ಹತ್ಯೆಗೊಳಗಾದ ತಲಾಲ್ ಅಬ್ದುಲ್ ಮಹ್ದಿ ಅವರ ಸಂಬಂಧಿಕರೊಂದಿಗೆ ಮಾತನಾಡಲು ಅವಕಾಶ ಕಲ್ಪಿಸಲಾಯಿತು. ಮುಂದಿನ ದಿನಗಳಲ್ಲಿ ಹೆಚ್ಚಿನ ಚರ್ಚೆಗಳು ನಡೆಯುತ್ತವೆ ಎಂದು ಕಾಂತಪುರಂ ಎಪಿ ಅಬುಬಕರ್ ಮುಸ್ಲಿಯಾರ್ ಅವರ ಸಹಾಯಕರು ತಿಳಿಸಿದ್ದಾರೆ. ತಲಾಲ್ ಅವರ ಕುಟುಂಬವನ್ನು ಈ ಮೊದಲು ಸಂಪರ್ಕಿಸಲು ಕಾನೂನು ನೆರವು ಸಮಿತಿಗೆ ಸಾಧ್ಯವಾಗಿರಲಿಲ್ಲ. ಇದೀಗ ತಲಾಲ್ ಅವರ ಸಹೋದರನೊಂದಿಗೆ ಮಾತನಾಡಲು ಸಾಧ್ಯವಾಗಿರುವುದರಿಂದ ಶುಭ ನಿರೀಕ್ಷೆಯಿದೆ ಮತ್ತು ಚರ್ಚೆಗಳು ಮುಂದುವರಿದಿದೆ ಎಂದು ಕಾಂತಪುರಂ ಉಸ್ತಾದ್ ಸಂಬಂಧಿಸಿದ ಕೇಂದ್ರಗಳಿಂದ ತಿಳಿದು ಬಂದಿದೆ.
ಏತನ್ಮಧ್ಯೆ, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ನಿಮಿಷಪ್ರಿಯ ಬಿಡುಗಡೆಗೆ ಸಂಬಂಧಿಸಿದಂತೆ ಪ್ರಧಾನಿಗೆ ಮತ್ತೊಮ್ಮೆ ಪತ್ರ ಬರೆದಿದ್ದಾರೆ. ಪತ್ರದಲ್ಲಿ, ಅವರು ಈ ವಿಷಯದಲ್ಲಿ ತಕ್ಷಣದ ಹಸ್ತಕ್ಷೇಪವನ್ನು ಕೋರಿದ್ದಾರೆ. ಈ ತಿಂಗಳ 16 ರಂದು ಮರಣದಂಡನೆ ವಿಧಿಸಲಾಗುವುದು ಎಂದು ತಿಳಿದುಬಂದಿರುವ ಬಗ್ಗೆ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ನಿಮಿಷಪ್ರಿಯ ಅವರ ಮರಣದಂಡನೆ ಶಿಕ್ಷೆಯನ್ನು ಈ ತಿಂಗಳ 16 ರಂದು ಜಾರಿಗೆ ತರಲಾಗುವುದು ಎಂದು ಜೈಲು ಅಧಿಕಾರಿಗಳಿಗೆ ಮಾಹಿತಿ ಬಂದಿದೆ. ಏತನ್ಮಧ್ಯೆ, ನಿಮಿಷಪ್ರಿಯ ಅವರ ಮರಣದಂಡನೆಯನ್ನು ನಿಲ್ಲಿಸಲು ಸಕ್ರಿಯ ಪ್ರಯತ್ನಗಳು ನಡೆಯುತ್ತಿವೆ. ಚರ್ಚೆಗಾಗಿ ಸನಾಗೆ ಬಂದಿದ್ದ ನಿಮಿಷಪ್ರಿಯ ಅವರ ತಾಯಿ ಮತ್ತು ಸಾಮಾಜಿಕ ಕಾರ್ಯಕರ್ತೆ ಸ್ಯಾಮ್ಯುಯೆಲ್ ಜೆರಾನ್ ಇನ್ನೂ ಯೆಮೆನ್ ನಲ್ಲೇ ಇದ್ದಾರೆ. ಭಾರತೀಯ ರಾಯಭಾರ ಕಚೇರಿಯ ಅಧಿಕಾರಿಗಳು ಸಹ ಮಧ್ಯಪ್ರವೇಶಿಸುತ್ತಿರುವ ಸೂಚನೆಗಳಿವೆ.
ಪಾಲಕ್ಕಾಡ್ ಜಿಲ್ಲೆಯ ಕೊಲ್ಲಂಗೋಡ್ ಮೂಲದ ನಿಮಿಷಪ್ರಿಯಾ 2017 ರಿಂದ ಯೆಮೆನ್ ಜೈಲಿನಲ್ಲಿ ಬಂಧಿತರಾಗಿದ್ದಾರೆ. ಯೆಮೆನ್ ಪ್ರಜೆ ತಲಾಲ್ ಅಬ್ದುಲ್ ಮಹ್ದಿ ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಅವರು ತಪ್ಪಿತಸ್ಥರೆಂದು ಮರಣದಂಡನೆ ವಿಧಿಸಲಾಗಿದೆ. ಈ ತೀರ್ಪು ಜುಲೈ 16 ರಂದು ಜಾರಿಗೊಳಿಸಲಾಗುವುದು ಎಂದು ಯೆಮೆನ್ ಸುಪ್ರೀಂ ಕೋರ್ಟ್ ಈಗಾಗಲೇ ತಿಳಿಸಿದೆ.
ಇದೀಗ ಕಾಂತಪುರಂ ಎ ಪಿ ಅಬೂಬಕರ್ ಮುಸ್ಲಿಯಾರ್ ಅವರ ನೇರ ಮಾತುಕತೆ ನಡೆಸಲು ಮುಂದಾಗಿದ್ದಾರೆ. ಅವರು, ಯೆಮೆನ್ ನಾಗರಿಕರ ಸಂಬಂಧಿಕರೊಂದಿಗೆ ನಡೆದ ಸಂವಾದದಿಂದ ಪ್ರಕರಣದಲ್ಲಿ ಭರವಸೆ ಮೂಡಿದ್ದು, ಈ ಬೆಳವಣಿಗೆಗಳು ನಿಮಿಷಪ್ರಿಯ ಬಿಡುಗಡೆಯ ಆಶಾಭಾವನೆ ಮೂಡಿಸಿದೆ.