ಕರಾವಳಿಯಲ್ಲಿ ಚಳಿ ಹೆಚ್ಚಳ: ಹೆಚ್ಚಾಗುತ್ತಿದೆ ವೈರಲ್ ಜ್ವರ, ಅಸ್ತಮಾ, ಶೀತ ►ಚಳಿಗಾಲದಲ್ಲಿ ಕೈಗೊಳ್ಳಬೇಕಾದ ಕ್ರಮ
ಮಂಗಳೂರು: ಕರಾವಳಿ ಭಾಗದಲ್ಲಿ ಬೆಳಗ್ಗಿನ ಜಾವ ಚಳಿಯ ಪ್ರಮಾಣದಲ್ಲಿ ಏರಿಕೆ ಉಂಟಾಗುತ್ತಿದೆ. ಇದರಿಂದ ವಾತಾವರಣ ತಂಪಾಗಿದ್ದು, ಸಾಂಕ್ರಾಮಿಕ ರೋಗಬಾಧೆ ಬಗ್ಗೆ ಎಚ್ಚರದಿಂದ ಇರಬೇಕಾದ ಅನಿವಾರ್ಯತೆ ಇದೆ.
ಕರಾವಳಿಯಲ್ಲಿ ಇತ್ತೀಚೆಗೆ ಕಾಣಿಸಿಕೊಂಡ ಮಳೆ, ಆಗಾಗ ಉರಿ ಬಿಸಿಲು, ಮುಂಜಾನೆಯಲ್ಲಿ ಕಾಣಿಸಿಕೊಳ್ಳುತ್ತಿರುವ ಚಳಿಯಿಂದಾಗಿ ಜನರ ಆರೋಗ್ಯದಲ್ಲಿ ಏರುಪೇರಾಗುತ್ತಿದೆ. ವೈರಲ್ ಜ್ವರ, ಅಸ್ತಮಾ ಸೇರಿದಂತೆ ಚರ್ಮದ ಕಾಯಿಲೆಗಳ ಪ್ರಮಾಣದಲ್ಲೂ ಏರಿಕೆಯಾಗುತ್ತಿದೆ.
ಕಳೆದ ಕೆಲವು ದಿನಗಳ ಹಿಂದೆ ಸುರಿದ ಅಕಾಲಿಕ ಮಳೆಯ ಬಳಿಕ ಚಳಿ ಏರಿಕೆಯಾಗಿದ್ದು, ಗರಿಷ್ಠ ಮತ್ತು ಕನಿಷ್ಠ ಉಷ್ಣಾಂಶದಲ್ಲಿ ಸಾಕಷ್ಟು ಏರಿಳಿತ ಉಂಟಾಗುತ್ತಿದೆ. ಬೆಳಗ್ಗಿನ ಹೊತ್ತು ಬಿಸಿಲು ಕಾಣಿಸಿದ್ದರೂ ಕೂಡ ಮಧ್ಯಾಹ್ನದವರೆಗೆ ವಾತಾವರಣ ಸ್ವಲ್ಪ ಮಟ್ಟಿಗೆ ತಂಪಾಗಿರುತ್ತದೆ. ಬಳಿಕ ತುಸು ಸೆಕೆ, ಮಧ್ಯ ರಾತ್ರಿ ವೇಳೆ ಮತ್ತೆ ಚಳಿ ಪ್ರಾರಂಭವಾಗುತ್ತದೆ. ಇನ್ನು ಚಳಿಯ ತೀವ್ರತೆಯಿಂದಾಗಿ ಇಬ್ಬನಿ ಬೀಳಲು ಆರಂಭವಾಗಿದ್ದು, ಜ್ವರ, ಶೀತ-ಕೆಮ್ಮು, ಚಿಕನ್ ಪಾಕ್ಸ್ ನಂತಹ ಸಾಂಕ್ರಾಮಿಕ ರೋಗಬಾಧೆಯು ಅಲ್ಲಲ್ಲಿ ಕಾಣಿಸಿಕೊಳ್ಳುತ್ತಿದೆ.
ಕಳೆದ ಎರಡು ದಿನಗಳಿಂದ ಬಂಟ್ವಾಳ, ಬೆಳ್ತಂಗಡಿ, ಸುಳ್ಯ ಸಹಿತ ಹಲವು ಕಡೆಗಳಲ್ಲಿ ರಾತ್ರಿ ವೇಳೆ ಅತೀ ಹೆಚ್ಚು ಮಂಜು ಆವರಿಸಿತ್ತು. ಈ ಮಧ್ಯೆ ಶಿರಾಡಿ ಹಾಗೂ ಚಾರ್ಮಾಡಿ ಘಾಟಿ ಪ್ರದೇಶಗಳಲ್ಲಿ ತಗ್ಗು ಪ್ರದೇಶಕ್ಕಿಂತಲೂ ಅಧಿಕ ಪ್ರಮಾಣದಲ್ಲಿ ಮಂಜು ಆವರಿಸಿಕೊಳ್ಳುತ್ತಿದೆ. ಹಗಲಿನಲ್ಲಿ ಜಾಸ್ತಿ ಬಿಸಿಯಾಗಿರದೆ ಉತ್ತಮ ವಾತಾವರಣವಿದ್ದರೂ ಮಧ್ಯಾಹ್ನ 12ರಿಂದ 2ರವರೆಗೆ ಸೆಖೆಯ ಅನುಭವವಾಗುತ್ತಿದೆ ಎಂದು ಹೇಳಲಾಗುತ್ತಿದೆ.
ಹವಾಮಾನ ವೈಪರೀತ್ಯದಿಂದಾಗಿ ಜನರಲ್ಲಿ ಪದೇ ಪದೇ ಶೀತ, ಜ್ವರ, ಕೆಮ್ಮು ಲಕ್ಷಣಗಳಿಂದ ವೈರಲ್ ಫೀವರ್‌ಗಾಗಿ ವೈದ್ಯರ ಬಳಿಗೆ ಬರುವ ರೋಗಿಗಳ ಸಂಖ್ಯೆಯಲ್ಲಿ ಹೆಚ್ಚಾಗಿದೆ. ನವೆಂಬರ್ ಕೊನೆಯಾದಂತೆ ಡಿಸೆಂಬರ್ ತಿಂಗಳ ಆರಂಭದಲ್ಲಿಯೇ ಚಳಿಯ ಪ್ರಮಾಣದಲ್ಲಿ ಏರಿಕೆ ಕಾಣಿಸಿಕೊಂಡಿದೆ. ಮುಂದೆ ಇನ್ನಷ್ಟು ಚಳಿ ಕಾಣಿಸಿಕೊಳ್ಳುವ ಸಾಧ್ಯತೆಯೂ ಇದೆ.
ಮಕ್ಕಳಲ್ಲಿ ವೈರಾಣು ಜ್ವರ ಕಾಣಿಸಿಕೊಂ ಡರೆ ಶಾಲೆಗೆ ಕಳುಹಿಸುವುದನ್ನು ನಿಲ್ಲಿಸಬೇಕು. ಜ್ವರ ಇದ್ದವರು ಕರವಸ್ತ್ರ, ಟವೆಲ್ ಬಳಸಿ ರೋಗಾಣು ಇತರರಿಗೆ ಹರಡದಂತೆ ಎಚ್ಚರಿಕೆ ವಹಿಸಬೇಕು ಎಂಬುದು ವೈದ್ಯರ ಸಲಹೆಯಾಗಿದೆ.
ಚಳಿಗಾಲದಲ್ಲಿ ಕೈಗೊಳ್ಳಬೇಕಾದ ಕ್ರಮ:
ಕೈಕಾಲುಗಳನ್ನು ಚೆನ್ನಾಗಿ ತೊಳೆದುಕೊಳ್ಳಿ, ಹೆಚ್ಚಾಗಿ ಬೆಚ್ಚಗಿನ ಉಡುಪು ಧರಿಸಿ
ಮನೆಯಿಂದ ಹೊರಗಡೆ ಹೋಗುವಾಗ ಮಾಸ್ಕ್ ಧರಿಸಿ
ಕುದಿಸಿ ಆರಿಸಿದ ನೀರನ್ನು ಉಪಯೋಗಿಸಿ
ಚಳಿಗಾಲದಲ್ಲಿ ಸಂಧಿವಾತವನ್ನು ತಪ್ಪಿಸಲು ದೇಹ ಬೆಚ್ಚಗಿರುವಂತೆ ನೋಡಿಕೊಳ್ಳಿ
ದಿನನಿತ್ಯ ವ್ಯಾಯಾಮ ಮಾಡಿ
ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಹಾರಗಳನ್ನು ಸೇವನೆ ಮಾಡಿ