ದುಬೈ: ಕೆಐಸಿ (KIC) ಯುಎಇ ನ್ಯಾಷನಲ್ ಕಮಿಟಿ ಸಭೆ - ಇಬ್ರಾಹಿಂ ಗೋಳಿಕಟ್ಟೆ ಭಾಗಿ
ದುಬೈ: ಕರ್ನಾಟಕ ಇಸ್ಲಾಮಿಕ್ ಸೆಂಟರ್ (ಕೆಐಸಿ) ಯುಎಇ ನ್ಯಾಷನಲ್ ಕಮಿಟಿಯ ಮಾಸಿಕ ಸಭೆಯು ಡಿಸೆಂಬರ್ 28 ರಂದು ಸಂಜೆ ದುಬೈ ನೈಫ್ ರಸ್ತೆಯಲ್ಲಿರುವ ಹೋಟೆಲ್ ಗಲ್ಫ್ ಸ್ಟಾರ್ ಸಭಾಂಗಣದಲ್ಲಿ ನಡೆಯಿತು. ಯುಎಇ ನ್ಯಾಷನಲ್ ಕಮಿಟಿ ಅಧ್ಯಕ್ಷರಾದ ಮೋಹಿದ್ದೀನ್ ಕುಟ್ಟಿ ಹಾಜಿ ದಿಬ್ಬ ಅವರ ಅಧ್ಯಕ್ಷತೆಯಲ್ಲಿ ಈ ಸಭೆ ಜರುಗಿತು.
ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಪುತ್ತೂರು ಅನ್ಸಾರುದ್ದೀನ್ ಜಮಾತ್ ಕಮಿಟಿಯ ಉಪಾಧ್ಯಕ್ಷರಾದ ಜನಾಬ್ ಇಬ್ರಾಹಿಂ ಗೋಳಿಕಟ್ಟೆ ಅವರು ಮಾತನಾಡಿ, "ಕೆಐಸಿ ಸಂಸ್ಥೆಯು ಕಳೆದ 26 ವರ್ಷಗಳಿಂದ ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡುತ್ತಿದೆ. ತಮ್ಮ ಅಮೂಲ್ಯವಾದ ಸಮಯವನ್ನು ಮೀಸಲಿಟ್ಟು, ಈ ಸಂಸ್ಥೆಯನ್ನು ಪ್ರೋತ್ಸಾಹಿಸುತ್ತಿರುವ ನಿಮ್ಮ ಸೇವೆ ಶ್ಲಾಘನೀಯ. ಕೆಐಸಿ ಮೂಲಕ ಅದೆಷ್ಟೋ ಬಡ ವಿದ್ಯಾರ್ಥಿಗಳು ಉನ್ನತ ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ. ಮಕ್ಕಳನ್ನು ಉತ್ತಮ ಮಟ್ಟಕ್ಕೆ ತರುವಲ್ಲಿ ಯುಎಇ ಸಂಘಟನೆಯ ಪಾತ್ರ ಹಿರಿದು. ನಿಮ್ಮ ಈ ನಿಸ್ವಾರ್ಥ ಸೇವೆ ಖಂಡಿತವಾಗಿಯೂ ಸಾರ್ಥಕವಾಗಲಿದೆ," ಎಂದು ಮೆಚ್ಚುಗೆ ವ್ಯಕ್ತಪಡಿಸಿ ಶುಭ ಹಾರೈಸಿದರು.
ನೂರುದ್ದೀನ್ ಅವರಿಗೆ ಸನ್ಮಾನ:
ಇದೇ ಸಂದರ್ಭದಲ್ಲಿ, ಪವಿತ್ರ ಮಕ್ಕಾ ಯಾತ್ರೆಗೆ ತೆರಳಲಿರುವ ಜಿಸಿಸಿ ಸಂಘಟನಾ ಕಾರ್ಯದರ್ಶಿ ನೂರುದ್ದೀನ್ ಅವರನ್ನು ಸಮಿತಿಯ ವತಿಯಿಂದ ಶಾಲು ಹೊದಿಸಿ, ಗೌರವಿಸಿ ಬೀಳ್ಕೊಡಲಾಯಿತು.
ಸಭೆಯಲ್ಲಿ ಜಿಸಿಸಿ ಕಮಿಟಿ ಅಧ್ಯಕ್ಷರಾದ ಹಾಜಿ ಅಶ್ರಫ್ ಷಾ ಮಾಂತೂರು, ಯುಎಇ ಗೌರವ ಅಧ್ಯಕ್ಷರಾದ ಅಸ್ಕರ್ ಅಲಿ ತಂಙಳ್, ಕೆಐಸಿ ಉಪಾಧ್ಯಕ್ಷರಾದ ಅಬ್ದುಲ್ ಸಲಾಂ ಬಪ್ಪಳಿಗೆ, ಕೆಐಸಿ ಯೂತ್ ವಿಂಗ್ ಅಧ್ಯಕ್ಷರಾದ ಆಶಿಫ್ ಮರೀಲ್, ಕೆಐಸಿ ನಾಯಕರಾದ ಅನ್ವರ್ ಮಣಿಲ, ಸಲಹೆಗಾರರಾದ ಅಬ್ದುಲ್ ಖಾದರ್ ಪಿ.ಬಿ., ದುಬೈ ಕೆಐಸಿ ಕಮಿಟಿ ಅಧ್ಯಕ್ಷರಾದ ಅಶ್ರಫ್ ಆರ್ತಿಕೆರೆ, ಪ್ರಮುಖರಾದ ಶರೀಫ್ ಕಾವು, ಯೂಸುಫ್ ಉಪ್ಪಳ, ಜುನೈದ್, ತನ್ಸಿಫ್ ಸೇರಿದಂತೆ ಹಲವು ಸದಸ್ಯರು ಉಪಸ್ಥಿತರಿದ್ದರು.
ಅಂತ್ಯದಲ್ಲಿ ಪ್ರಧಾನ ಕಾರ್ಯದರ್ಶಿ ಶರೀಫ್ ಕೊಡಿನೀರ್ ಸ್ವಾಗತಿಸಿ, ನೆರೆದಿದ್ದ ಎಲ್ಲರಿಗೂ ಧನ್ಯವಾದ ಸಮರ್ಪಿಸಿದರು.