ದನಿಗೂಡಿಸಿ, ನಶೆಮುಕ್ತ ಮಂಗಳೂರನ್ನು ಹತ್ತಿರದಲ್ಲೇ ಕಾಣಬಹುದು : ಆಮಿರ್ ಅಶ್ಅರೀ ಬನ್ನೂರು


ಮಂಗಳೂರು: ಮಂಗಳೂರಿನ ಪ್ರತಿಷ್ಠಿತ ಟಿ ಎಂ ಎ ಪೈ ಸಭಾಂಗಣದಲ್ಲಿ ಕಾರ್ಯಕ್ರಮವಿತ್ತು.‌ MANGALORU CITY POLICE ಹಾಗೂ MAKE A CHANGE FOUNDATION ಪ್ರಸ್ತುತ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಒಳ್ಳೆಯ ಶಿಸ್ತು ಮತ್ತು ಅಚ್ಚುಕಟ್ಟಾಗಿ ಹಾಗೂ ವ್ಯವಸ್ಥಿತವಾಗಿ ರೂಪುಗೊಳಿಸಿದ್ದರು.‌ 

ಅನಗತ್ಯವಾದ ಭಾಷಣ ಅಥವಾ ಇನ್ನುಳಿದ ಯಾವುದೇ ಕಾರ್ಯಕ್ರಮವಿರಲಿಲ್ಲ. ಕಾರ್ಯಕ್ರಮದ ಕೇಂದ್ರಬಿಂದುವಾಗಿ ವಿವಿಧ ಸಂಸ್ಥೆಗಳ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಭಾಗವಹಿಸಿದ್ದರು. ಬಿಳಿ ವಸ್ತ್ರಧಾರಿಗಳಾದ ಉಲಮಾ ವಿದ್ಯಾರ್ಥಿಗಳ ಭಾಗವಹಿಸುವಿಕೆ, ಕಾರ್ಯಕ್ರಮದ ಮೆರುಗನ್ನು ಮತ್ತಷ್ಟು ಹೆಚ್ಚಿಸಿತ್ತು. 

ಧರ್ಮಗಳ ಅಫೀಮು ತುಂಬಿರುವ ಕರಾವಳಿಯ ವಿದ್ಯಾರ್ಥಿಗಳ ನಡುವೆ, ಜಾತಿ ಧರ್ಮಗಳ ಬೇಲಿ ಕಿತ್ತೆಸೆದು, ಕರಾವಳಿಯ ಒಳಿತು ಮತ್ತು ಅಭಿವೃದ್ಧಿಯ ದನಿಯಾಗಲು ಹೊರಟಿರುವ ವಿದ್ಯಾರ್ಥಿ ಪಡೆವೊಂದು ತಯಾರಾದ ಬಗೆಯನ್ನು ಕಾರ್ಯಕ್ರಮ ಸೂಚಿಸುತ್ತಿದ್ದವು. ಮುಖ್ಯ ವೇದಿಕೆಯ ಮೂಲಕ ಸಭೀಕರೊಂದಿಗೆ ಮುಖಾಮುಖಿಯಾದ ಧಾರ್ಮಿಕ ವಿದ್ವಾಂಸರ, ಪೋಲಿಸ್ ಅಧಿಕಾರಿಗಳ, ಶಿಕ್ಷಣ ಕ್ಷೇತ್ರದ ಮುಖ್ಯಸ್ಥರ ಹಾಗೂ ಇತರ ಪ್ರಮುಖರ ಮಾತುಗಳು ಕರಾವಳಿಗೆ ಬಾಧಿಸಿರುವ "ನಶೆಯ" ನಿರ್ಮೂಲನೆಗೆ ಪಣತೊಟ್ಟಂತ್ತಿದ್ದವು. 

ಉನ್ನತ ಶಿಕ್ಷಣ ಮತ್ತು ಕೇಂದ್ರಗಳಿಗೆ ಹೆಸರಾದ ಕರಾವಳಿಯು, ಇತ್ತೀಚಿನ ದಿನಗಳಲ್ಲಿ ಮಾದಕ ದ್ರವ್ಯಗಳ ತಾಣವಾಗುತ್ತಿದೆ‌ ಎಂಬ ಸತ್ಯ ಸಮಸ್ತ ಕರಾವಳಿಗರಲ್ಲಿ ಆತಂಕವನ್ನು ಹೆಚ್ಚಿಸುತ್ತಿವೆ. ಶಿಕ್ಷಣದ ಹೆಸರಿನಲ್ಲಿ ಮನೆಯಿಂದ ಬರುವ ಮಗ ಅಥವಾ ಮಗಳು ಸಂಜೆ ಹಿಂತಿರುಗುವಾಗ ಮಾದಕ ದ್ರವ್ಯಗಳೊಂದಿಗೆ ಮನೆ ಸೇರುತ್ತಿದ್ದಾರೆಂದರೆ, ಯಾವ ಪೋಷಕರು ಭಯಪಡಲ್ಲ ಹೇಳಿ?. ಕರಾವಳಿಯ ಆರೋಗ್ಯ, ಪೋಷಕರ ಬೇಗುದಿ ತಣಿಸಲು "ನಶೆಮುಕ್ತ ಮಂಗಳೂರು" ಅಭಿಯಾನ ಒಂದು ಮುಲಾಮಾಗಿದೆ. ಈ ನಾಡು ಕಾಲಂತರಗಳಿಂದ ಮಾದಕ ದ್ರವ್ಯಗಳ ವಿರುದ್ಧವಾಗಿ ಸಾಕಷ್ಟು ಅಭಿಯಾನ, ಜಾಗೃತಿ, ಹೋರಾಟಗಳನ್ನು ಕಂಡಿವೆ. 

ಆದರೆ, ಪ್ರಾಯೋಗಿಕ ಹೋರಾಟದ ಕೊರತೆಯಿಂದ ಅವುಗಳನ್ನು ವಿಫಲವೆಂದು ಹೇಳುವೆ. ಕಳೆದು ಹೋದ ಒಟ್ಟು ಕಾರ್ಯಕ್ರಮಗಳ ಜೊತೆಗೆ ಪ್ರಸ್ತುತ ಕಾರ್ಯಕ್ರಮವು ಹಲವು ಕಾರಣಗಳಿಗೆ ಭಿನ್ನವಾಗಿತ್ತು. "ಮಾದಕ ದ್ರವ್ಯಗಳು ಮಾರಕವಾಗಿದೆ" ಎಂಬ ಆಶ್ರಯವನ್ನು ವಿದ್ಯಾರ್ಥಿಗಳ ಎದೆಗಿಳಿಸಿದಾಗ, ಅವರು ಅದನ್ನು ಸ್ವೀಕರಿಸಿದ ಪರಿ ಗಮನಾರ್ಹವಾಗಿದೆ. ಸರ್ಕಾರಗಳು ಕೋಟಿಗಟ್ಟಲೆ ಹಣ ವ್ಯಯಿಸಿ, ಮಾದಕ ದ್ರವ್ಯದ ಜಾಗೃತಿ ಅಭಿಯಾನಗಳ ಕಾರ್ಯಕ್ರಮಗಳಲ್ಲಿ ಪ್ರೇಕ್ಷಕರಾಗಿ ಎಷ್ಟು ವಿದ್ಯಾರ್ಥಿಗಳು ಭಾಗವಹಿಸುತ್ತಾರೆ?! ಎಷ್ಟು ಶಾಲಾ ಕಾಲೇಜುಗಳಿಗೆ ತೆರಳಿ ವಿದ್ಯಾರ್ಥಿಗಳಿಗೆ ಆಹ್ವಾನ ನೀಡುತ್ತಾರೆ?. ಕಡ್ಡಾಯವಾಗಿ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಎಷ್ಟು ಒತ್ತಾಯ ಹೇರುತ್ತಾರೆ?. ಇವೆಲ್ಲವನ್ನೂ ಚರ್ಚೆಗೆ ಗುರಿಪಡಿಸುವಾಗ, ಪ್ರಸ್ತುತ ಕಾರ್ಯಕ್ರಮವು ಐತಿಹಾಸಿಕ ಮತ್ತು ನಶೆಮುಕ್ತ ಮಂಗಳೂರು ನಿರ್ಮಾಣದ ಮೊಟ್ಟ ಮೊದಲ ಹೆಜ್ಜೆಯೆಂದು ಕಾಣಬಯಸುತ್ತೇನೆ. 

ಕಾರಣ, ವಿದ್ಯಾರ್ಥಿಗಳ ನಡುವಿನ ವ್ಯಾಪಕ ಸಮಸ್ಯೆಯನ್ನು ಅವರ ಮೂಲಕವೇ ಜಾಗೃತಿ ಮೂಡಿಸಿ ಪರಿಹರಿಸುವುದು ಸಮಂಜಸ ನಡೆ. ಈ ಕಾರ್ಯಕ್ರಮದಲ್ಲಿ ವಿವಿಧ ಸಂಸ್ಥೆಗಳ ವಿದ್ಯಾರ್ಥಿಗಳನ್ನು ಹೊರತುಪಡಿಸಿದರೆ, ಬೆರಳೆಣಿಕೆಯ ಅತಿಥಿಗಳು, ಮಾಧ್ಯಮ ಮಿತ್ರರು ಹಾಗೂ ಆಯೋಜಕರನ್ನು ಹೊರತುಪಡಿಸಿದರೆ, ಬೇರೆ ಯಾರೂ ಪ್ರೇಕ್ಷಕರಾಗಿ ಭಾಗವಹಿಸಿದ್ದನ್ನು ಗಮನಿಸಲು ಸಾಧ್ಯವಾಗಿಲ್ಲ. ಸಭಾಂಗಣ ತುಂಬಾ ವಿದ್ಯಾರ್ಥಿಗಳಿಂದಲೇ ತುಂಬಿದ್ದವು. 

ವಿದ್ಯಾರ್ಥಿಗಳಿಗೆ ಮೊದಲ ಆದ್ಯತೆಯನ್ನು ಕೊಡಬೇಕು, ಕೊಟ್ಟಿದ್ದಾರೆ. ಇದುವೇ ಕಾರ್ಯಕ್ರಮದ ಮೊದಲ ಯಶಸ್ಸು. ಅತಿಥಿ ಮಹನೀಯರ ಮೌಲ್ಯಾಧಾರಿತ ಮಾತುಗಳನ್ನು ಕೇಳಿಸಿಕೊಂಡ ವಿದ್ಯಾರ್ಥಿಗಳನ್ನು ನಾನು ಗಮನಿಸಿಕೊಂಡಂತೆ, ವಿದ್ಯಾರ್ಥಿ ವಲಯದ ಈ ಪಿಡುಗನ್ನು ನಿರ್ನಾಮಗೊಳಿಸಲು, ವಿದ್ಯಾರ್ಥಿಗಳೇ ತೋರಿದ ಸನ್ನದ್ಧತೆ ಕರಾವಳಿಯ ಆರೋಗ್ಯವನ್ನು ಕಾಪಾಡುವಂತಿದೆ.

ಆಯೋಜಕರ ಬಗ್ಗೆ...
ವರದಿವೊಂದು, ಮಾದಕ ದ್ರವ್ಯವು ವ್ಯಾಪಕವಾಗಿರುವ ರಾಜ್ಯದ ಎರಡನೆಯ ಜಿಲ್ಲೆಯಾಗಿ ನಮ್ಮ ದಕ್ಷಿಣ ಕನ್ನಡವನ್ನು ಎಣಿಸಿದೆ. ಕಾರಣ ಹುಡುಕಬೇಕಾಗಿಲ್ಲ. ಜಿಲ್ಲೆ ಅಷ್ಟು ಬಳಕೆದಾರರನ್ನು ಹೊಂದಿದೆಯಂತೆ. ನನ್ನ ಪ್ರಶ್ನೆ, ಈ ಕರಾವಳಿಯ ತೆರೆಯಲ್ಲಿ ಅದೆಷ್ಟು ವ್ಯಾಪಾರಸ್ಥರಿರಬಹುದು?!. ನಾಳೆಯ ಬದುಕಿನ ಬಣ್ಣ ಬಣ್ಣದ ಕನಸು ಕಾಣುತ್ತಿರುವ ಯುವ ಪೀಳಿಗೆಯ ಕೈಗಳಿಗೆ ಅವುಗಳನ್ನು ತಲುಪಿಸುವವರಾದರು ಯಾರು?. ವ್ಯಸನದ ಮೊರೆಹೋದ ವಿದ್ಯಾರ್ಥಿಗಳು ಹೆಣವಾಗುತ್ತಿದ್ದಾರೆ. ಬದುಕು ಕಳೆದುಕೊಂಡು, ಬೀದಿ ಅಥವಾ ಜೈಲು ಪಾಲಾಗುತ್ತಿದ್ದಾರೆ. ಆದರೆ, ರಫ್ತುದಾರರು ಕೋಟಿ, ಕೋಟಿ ಹಣ ಮಾಡುತ್ತಲೇ ನಿರ್ಭೀತಿಯಿಂದ ನಡೆಯುತ್ತಿದ್ದಾರೆ. ನೆನಪಿರಲಿ ಕರಾವಳಿಯನ್ನು ಆಳುವ ದೊರೆಗಳೇ ಇವರುಗಳ ಬೆನ್ನೆಲುಬು. ಈ ನಗ್ನ ಸತ್ಯವನ್ನು ತಿಳಿದು, ನಶೆ ಮುಕ್ತ ಮಂಗಳೂರಿನ ಗುರಿ ಹೊಂದಿರುವ ಆಯೋಜಕರ ಧೈರ್ಯ ಶ್ಲಾಘನೀಯ. ಮುಂದಿನ ದಿನಗಳಲ್ಲಿ ಪ್ರಸ್ತುತ ಕಾರ್ಯಕ್ರಮಕ್ಕೆ ಸಮಸ್ತ ಕರಾವಳಿಗರು ಧ್ವನಿಗೂಡಿಸಿದರೆ "ನಶೆಮುಕ್ತ ಮಂಗಳೂರು" ಎಂಬ ಪರಿಕಲ್ಪನೆಯ ಸಾಕ್ಷಾತ್ಕಾರದ ದಿನವನ್ನು ಹತ್ತಿರದಿಂದ ಕಾಣಬಹುದು. 
ಸುಹೈಲ್ ಕಂದಕ್ ಸಾರ್ ತಮ್ಮ ಮೇಲೆ ಅಪಾರ ಅಭಿಮಾನ‌ ಮೂಡಿತು. ತಮ್ಮ ಪ್ರಾಮಾಣಿಕ ಬಳಗಕ್ಕೂ ಕೋಟಿ ಸಲಾಂ... ಮುನ್ನುಗ್ಗಿ, ಗುರಿ ಮುಟ್ಟುವ ತನಕ ನಿಲ್ಲದಿರಿ...
Next Post Previous Post