India Post Recruitment 2026: ಬರೋಬ್ಬರಿ 30,000 ಖಾಲಿ ಹುದ್ದೆಗಳ ನೇಮಕಾತಿ, ಅರ್ಹತೆ ವಿವರ


ಬೆಂಗಳೂರು: ಕೇಂದ್ರ ಸರ್ಕಾರಿ ಮಟ್ಟದಲ್ಲಿ ಅದರಲ್ಲೂ ಭಾರತೀಯ ಅಂಚೆ ಇಲಾಖೆ ವ್ಯಾಪ್ತಿಯಲ್ಲಿ ಕೆಲಸ ಮಾಡುವುದು ಅದೆಷ್ಟೋ ಜನರ ಕನಸಾಗಿರುತ್ತದೆ. ಅಂತಹ ಕನಸು ನನಸಾಗುವ ದಿನಗಳು ದೂರವಿಲ್ಲ. ಅಂಚೆ ಇಲಾಖೆಯು ಬಹೃತ್ ನೇಮಕಾತಿಗೆ ಸಜ್ಜಾಗುತ್ತಿದೆ. ಖಾಲಿ ಇರುವ 30,000 ಕ್ಕೂ ಅಧಿಕ ಹುದ್ದೆಗಳ ನೇಮಕಾತಿಗೆ (India Post Recruitment 2026) ನಿರ್ಧರಿಸಿದೆ.

ಉದ್ಯೋಗಾಕಾಂಕ್ಷಿಗಳು ಇಲ್ಲಿನ ಮಾಹಿತಿ ತಿಳಿದು ಅರ್ಜಿ ಸಲ್ಲಿಸಬಹುದಾಗಿದೆ.



ದೇಶದ ಅತಿದೊಡ್ಡ ಸರ್ಕಾರಿ ಇಲಾಖೆಗಳಲ್ಲಿ ಅಂಚೆ ಇಲಾಖೆಯು ಒಂದು. ಕೇಂದ್ರ ಸರ್ಕಾರದ ಅಧೀನದಲ್ಲಿರುವ ಬರುವ ಈ ಇಲಾಖೆಯಡಿ ಕೆಲಸಕ್ಕೆ ಸೇರಿದರೆ ಹೆಚ್ಚಿನ ವೇತನ, ಉತ್ತಮ ಭತ್ಯೆ ಸೌಲಭ್ಯಗಳು ಸಿಗುತ್ತವೆ ಎಂಬುದು ಅನೇಕರ ಲೆಕ್ಕಾಚಾರ ವಾಗಿರುತ್ತದೆ. ಈ ಕಾರಣಕ್ಕೆ ನೇಮಕಾತಿಗೆ ಕಾಯುವವರ ಸಂಖ್ಯೆ ಅಧಿಕವಾಗಿದ್ದು, ಅಂಚೆ ಇಲಾಖೆ ನೇಮಕಾತಿ ಈ ಬಾರಿಯ ಹೆಚ್ಚು ಗಮನ ಸಳೆಯಲಿದೆ. ಒಟ್ಟಾರೆ ಕೇಂದ್ರ ಸರ್ಕಾರಿ ಉದ್ಯೋಗಕ್ಕೆ ಕಾಯುವವರಿಗೆ ಇದೇ ಜನವರಿ 15ರಂದು ಶುಭ ಸುದ್ದಿ ಸಿಗಲಿದೆ.



2026ರ ಜನವರಿ 15ರಂದು ಅಂಚೆ ಇಲಾಖೆ ನೇಮಕಾತಿಗೆ ಸಂಬಂಧಿಸಿದ ಅಧಿಕೃತ ಅಧಿಸೂಚನೆ ಬಿಡುಗಡೆ ಆಗುವ ಬಗ್ಗೆ ಘೋಷಣೆ ಆಗಿದೆ. ಈ ಹುದ್ದೆಗಳು ಅಂಚೆ ಇಲಾಖೆಯ ಶಾಖೆಯೇತರ ಅಂಚೆ ಕಚೇರಿಗಳಲ್ಲಿರುವ ಖಾಲಿ ಹುದ್ದೆಗಳಾಗಿವೆ. ಇದರಲ್ಲಿ ಗ್ರಾಮ ಮಟ್ಟದ ನೌಕರರು ಮತ್ತು ಶಾಖಾ ಪೋಸ್ಟ್‌ಮಾಸ್ಟರ್‌ಗಳಂತಹ ಹುದ್ದೆಗಳು ಸೇರಿವೆ. ಒಟ್ಟು 30,000ಕ್ಕೂ ಅಧಿಕ ಹುದ್ದೆಗಳ ಭರ್ತಿಗೆ ಬೃಹತ್ ನೇಮಕಾತಿ ಪ್ರಕ್ರಿಯೆ ಇದೇ ತಿಂಗಳಲ್ಲಿ ಶುರುವಾಗಲಿದೆ.




ವಿದ್ಯಾರ್ಹತೆ ಏನಿರಬೇಕು?

ಈ ಅಂಚೆ ಇಲಾಖೆ ನೇಮಕಾತಿ 2026ರ ಹುದ್ದೆಗಳಿಗೆ ಕನಿಷ್ಠ ಎಸ್‌ಎಸ್‌ಎಲ್‌ಸಿ ಉತ್ತೀರ್ಣ ಆದವರು ಸಹಿತ ಅರ್ಜಿ ಸಲ್ಲಿಸಬಹುದು. 10 ನೇ ತರಗತಿಯಲ್ಲಿ ಪಡೆದ ಅಂಕಗಳ ಮೆರಿಟ್ ಪಟ್ಟಿಯ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.



ಹುದ್ದೆಗಳ ವಿವರ

ಗ್ರಾಮೀಣ ಡಾಕ್ ಸೇವಕ್ (ಜಿಡಿಎಸ್) ಹುದ್ದೆಗಳ ಭರ್ತಿಗೆ ಜಾಹೀರಾತು ಬಿಡುಗಡೆಯಾಗಿದೆ. ಶಾಖೆ ಪೋಸ್ಟ್ ಮಾಸ್ಟರ್ (ಬಿಪಿಎಂ), ಸಹಾಯಕ ಶಾಖೆ ಪೋಸ್ಟ್ ಮಾಸ್ಟರ್ (ಎಬಿಪಿಎಂ), ಪೋಸ್ಟ್‌ಮ್ಯಾನ್ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಇದರಲ್ಲಿ ಒಟ್ಟು 30,000 ಹುದ್ದೆಗಳನ್ನು ಭರ್ತಿ ಮಾಡುವ ನಿರೀಕ್ಷೆ ಇದೆ.



ಅಭ್ಯರ್ಥಿಗಳಿಗೆ ವಯೋಮಿತಿ

ಸದರಿ ಅಂಚೆ ಇಲಾಖೆ ಖಾಲಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಹಾಗೂ ಗರಿಷ್ಠ 40 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಆಗಿರಬೇಕು. ಜಾತಿ ಮೀಸಲಾತಿ ಆಧಾರದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 5 ವರ್ಷ ಇತರ ಹಿಂದುಳಿದ ವರ್ಗಗಳಿಗೆ 3 ವರ್ಷ ಹಾಗೂ ಅಂಗವಿಕಲರಿಗೆ 10 ವರ್ಷಗಳ ವಯೋಸಡಿಲಿಕೆ ಸಿಗಲಿದೆ.



ಅರ್ಜಿ ಸಲ್ಲಿಕೆ ಹೇಗೆ?

ಅಧಿಸೂಚನೆ ಬಿಡುಗಡೆ ಬಳಿಕ ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳು ಮೊದಲು indiapostgdsonline.gov.in ವೆಬ್‌ಸೈಟ್ ಗೆ ಭೇಟಿ ನೀಡಬೇಕು. ಅಗತ್ಯ ದಾಖಲೆಗಳ ಸಹಿತ ಶೈಕ್ಷಣಿಕ ಅರ್ಹತೆ, ಜಾತಿ ಪ್ರಮಾಣಪತ್ರ, ಭಾವಚಿತ್ರ ಸೇರಿದಂತೆ ಮೊಬೈಲ್ ಸಂಖ್ಯೆ ಸಹಿತ ನೋಂದಾಯಿಸಿಕೊಳ್ಳಬೇಕು. ಅರ್ಜಿ ಶುಲ್ಕದಿಂದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಂಗವಿಕಲರು, ಟ್ರಾನ್ಸ್‌ಜೆಂಡರ್ ಗಳಿಗೆ ವಿನಾಯಿತಿ ನೀಡಲಾಗಿದ್ದು, ಇತರ ವರ್ಗದ ಅಭ್ಯರ್ಥಿಗಳಿಗೆ 100 ರೂಪಾಯಿ ಶುಲ್ಕ ವಿಧಿಸಲಾಗಿದೆ. ಈ ಹಣವನ್ನು ಆನ್‌ಲೈನ್ ಮೂಲಕವೇ ನಿಗದಿ ದಿನಾಂಕದೊಳಗೆ ಪಾವತಿಸಬೇಕಿದೆ.

Next Post Previous Post