PRAJWAL REVANNA: ಪರಪ್ಪನ ಅಗ್ರಹಾರ ಜೈಲಲ್ಲಿ ಪ್ರಜ್ವಲ್ ರೇವಣ್ಣಗೆ ಲೈಬ್ರರಿ ಕ್ಲರ್ಕ್ ಆಗಿ ನೇಮಕ - ಸಂಬಳ ಎಷ್ಟು ಗೊತ್ತಾ!?
ಬೆಂಗಳೂರು: ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಅವರು ಈಗ ಪರಪ್ಪನ ಅಗ್ರಹಾರ (Parappana Agrahara) ಕೇಂದ್ರ ಕಾರಾಗೃಹದಲ್ಲಿ ಸಾಮಾನ್ಯ ಕೈದಿಯಂತೆ ತಮ್ಮ ಶಿಕ್ಷೆಯನ್ನು ಅನುಭವಿಸುತ್ತಿದ್ದಾರೆ.
ಈಗ ಅವರಿಗೆ ಜೈಲಿನಲ್ಲಿ (Jail) ಕೆಲಸವನ್ನೂ ಹಂಚಿಕೆ ಮಾಡಲಾಗಿದ್ದು, ಇಂತಿಷ್ಟು ಸಂಬಳಕ್ಕಾಗಿ ಅವರು ಇನ್ನು ಮುಂದೆ ದುಡಿಯಲಿದ್ದಾರೆ.
ಹೌದು, ಪ್ರಜ್ವಲ್ ರೇವಣ್ಣ ಅವರನ್ನು ಜೈಲು ಅಧಿಕಾರಿಗಳು ಲೈಬ್ರರಿಯ ಕ್ಲರ್ಕ್ ಆಗಿ ನೇಮಿಸಿದ್ದಾರೆ. ಹೀಗಾಗಿ ಪ್ರಜ್ವಲ್ ಇನ್ನು ಜೈಲಿನ ಗ್ರಂಥಾಲಯದಲ್ಲಿ ಪುಸ್ತಕಗಳನ್ನು ವಿತರಿಸುವುದು, ನೋಂದಣಿ ಮಾಡುವುದು ಸೇರಿದಂತೆ ಇನ್ನಿತರ ಕೆಲಸಗಳನ್ನು ನಿರ್ವಹಿಸಲಿದ್ದಾರೆ. ಸದ್ಯ ಪ್ರಜ್ವಲ್ ರೇವಣ್ಣ ಅವರು ಒಂದು ದಿನದ ಮಟ್ಟಿಗೆ ಕೆಲಸ ಮಾಡಿದ್ದು, ದಿನಗೂಲಿಯಾಗಿ 522 ರೂ. ಸಂಬಳವನ್ನು ಪಡೆಯುತ್ತಿದ್ದಾರೆ.
ಇನ್ನು ಅವರು ಕೆಲಸಕ್ಕೆ ಹಾಜರಾಗದೇ ಹೋದರೆ ಸಂಬಳ ನೀಡಲಾಗುವುದಿಲ್ಲ. ಆದರೂ ನ್ಯಾಯಾಲಯದ ವಿಚಾರಣೆಗಾಗಿ ಆಗಾಗ ಅವರು ಬರಬೇಕಾಗಿರುವುದರಿಂದ ಮತ್ತು ವಕೀಲರೊಂದಿಗೆ ಇತರ ಪ್ರಕರಣಗಳ ಚರ್ಚೆಯನ್ನೂ ನಡೆಸಬೇಕಾಗಿ ಇರುವುದರಿಂದ ಅವರನ್ನು ಪೂರ್ಣ ಸಮಯದ ಕೆಲಸಕ್ಕೆ ನಿಯೋಜಿಸಲಾಗಿಲ್ಲ.
ಪ್ರಜ್ವಲ್ ರೇವಣ್ಣ ಅವರ ಜೈಲು ಜೀವನವು ಸಾಮಾನ್ಯ ಕೈದಿಗಳಂತೆಯೇ ಇದ್ದು, ಕಾರಾಗೃಹದ ನಿಯಮಗಳನ್ನು ಪಾಲಿಸುತ್ತಿದ್ದಾರೆ. ಈ ಪ್ರಕರಣದಲ್ಲಿ ಅವರಿಗೆ ಜೀವಾವಧಿ ಶಿಕ್ಷೆಯಾಗಿದ್ದರೂ, ಜೈಲಿನಲ್ಲಿ ಕೆಲಸ ಮಾಡುವ ಮೂಲಕ ಸಮಯ ಕಳೆಯುತ್ತಿದ್ದಾರೆ ಎನ್ನಲಾಗಿದೆ.
ಕಳೆದ ತಿಂಗಳು ಪ್ರಜ್ವಲ್ ರೇವಣ್ಣ ಅವರು ಕೆಆರ್ ನಗರ ಅತ್ಯಾಚಾರ ಪ್ರಕರಣದಲ್ಲಿ ದೋಷಿ ಎಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಮಹತ್ವದ ತೀರ್ಪು ನೀಡಿತು. ಈ ಮೂಲಕ ಮನೆಕೆಲಸದ ಮಹಿಳೆ ಮೇಲೆ ಅತ್ಯಾಚಾರ ನಡೆಸಿದ ಆರೋಪ ಸಾಬೀತಾಗಿತ್ತು. ಪ್ರಕರಣದಲ್ಲಿ ಪ್ರಜ್ವಲ್ ದೋಷಿ ಎಂದು ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ತೀರ್ಪು ನೀಡಿದ್ದು, ನಂತರ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ.
ಮನೆಕೆಲಸ ಮಾಡುತ್ತಿದ್ದ 47 ವರ್ಷದ ಮಹಿಳೆ ಮೇಲೆ ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿರುವ ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣಗೆ ಸೇರಿದ ಗನ್ನಿಗಡ ತೋಟದ ಮನೆಯಲ್ಲಿ ಪ್ರಜ್ವಲ್ ಮೊದಲ ಬಾರಿಗೆ ಅತ್ಯಾಚಾರ ಎಸಗಿದ್ದ. ಆನಂತರ ಬೆಂಗಳೂರಿನ ಬಸವನಗುಡಿಯಲ್ಲಿರುವ ರೇವಣ್ಣ ಅವರ ನಿವಾಸದಲ್ಲಿ ಮತ್ತೊಮ್ಮೆ ಅತ್ಯಾಚಾರ ಎಸಗಿ, ಅದನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡಿದ್ದ ಎಂದು ಆರೋಪಿಸಲಾಗಿತ್ತು.
ಈ ಸಂಬಂಧ 2024ರ ಏಪ್ರಿಲ್ 28ರಂದು ಹೊಳೆನರಸೀಪುರ ಠಾಣೆಯಲ್ಲಿ ಮೊದಲ ಪ್ರಕರಣ ದಾಖಲಾಗಿತ್ತು. ಮೈಸೂರಿನ ಕೆ ಆರ್ ನಗರದ ಸಂತ್ರಸ್ತ ಮಹಿಳೆ ಈ ಸಂಬಂಧ ದೂರು ನೀಡಿದ್ದರು. ಅವರು ನೀಡಿದ ದೂರಿನ ಮೇರೆಗೆ ಸೈಬರ್ ಅಪರಾಧ ಠಾಣೆಯಲ್ಲಿ ಐಪಿಸಿ ಸೆಕ್ಷನ್‌ಗಳಾದ 376(2)(ಎನ್), 376(2)(ಕೆ), 506, 354-ಎ, 354(ಎ), 354(ಬಿ), 354(ಸಿ) ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆ ಸೆಕ್ಷನ್ 66ಇ ಅಡಿ ಪ್ರಕರಣ ಪ್ರಜ್ವಲ್ ರೇವಣ್ಣ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.