ಸರಕಾರಿ ಶಾಲೆಗಳಿಗೆ ಉಚಿತ ನೋಟ್‌ಬುಕ್‌: ಸಿಎಂ ಸಿದ್ದರಾಮಯ್ಯ


ಬೆಂಗಳೂರು: ಮುಂದಿನ ವರ್ಷದಿಂದ ಸರಕಾರಿ ಶಾಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್‌ಬುಕ್‌ ವಿತರಣೆ ಯೋಜನೆ ಜಾರಿಗೆ ಬರಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಈಗಾಗಲೇ ಉಚಿತವಾಗಿ ಪಠ್ಯ ಪುಸ್ತಕ ವಿತರಿಸಲಾಗುತ್ತಿದ್ದು, ಮುಂದಿನ ವರ್ಷದಿಂದ ನೋಟ್‌ಬುಕ್‌ ಕೂಡ ಸಿಗಲಿದೆ.


ಶುಕ್ರವಾರ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರು, ಇದಕ್ಕೆ ಅಗತ್ಯ ಅನುದಾನ ನಮ್ಮ ಬಳಿಯಿದೆ ಎಂದು ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ್‌ ತಿಳಿಸಿದ್ದಾರೆ ಎಂದರು.

ವೃಂದ ಮತ್ತು ನೇಮಕಾತಿ ತಿದ್ದುಪಡಿಗೆ ಸಿದ್ಧ
1ರಿಂದ 7ನೇ ತರಗತಿಗೆ ನೇಮಕಗೊಂಡಿದ್ದ ಶಿಕ್ಷಕರನ್ನು 1ರಿಂದ 5ನೇ ತರಗತಿಗೆ ಸೀಮಿತಗೊಳಿಸಿ 2017ರಲ್ಲಿ ವೃಂದ ಮತ್ತು ನೇಮಕಾತಿಗೆ ತಿದ್ದುಪಡಿ ಮಾಡಲಾಗಿತ್ತು. ಈಗ ಈ ತಿದ್ದುಪಡಿಯನ್ನು ರದ್ದುಪಡಿಸಿ ಈ ಹಿಂದಿನಂತೆ 1ರಿಂದ 7ನೇ ತರಗತಿಯ ವೃಂದ ಮತ್ತು ನೇಮಕಾತಿಯನ್ನು ಮರುಸ್ಥಾಪಿಸಿದ್ದೇವೆ. ಇದರಿಂದ ಎಲ್ಲ ಶಿಕ್ಷಕರಿಗೆ ಅನುಕೂಲವಾಗಲಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಸರಕಾರಿ ಶಾಲೆಗಳ ವಿದ್ಯುತ್‌ ಶುಲ್ಕವನ್ನು ನಾವೇ ಭರಿಸುತ್ತಿದ್ದೇವೆ. ಇದಕ್ಕಾಗಿ ಸರಕಾರ 27 ಕೋ.ರೂ. ವೆಚ್ಚ ಮಾಡಿದೆ ಎಂದು ಹೇಳಿದರು. ನಮ್ಮ ಸರಕಾರ ಶಿಕ್ಷಣವನ್ನು ಆದ್ಯತಾ ವಲಯವನ್ನಾಗಿ ಪರಿಗಣಿಸಿದೆ. ನಮ್ಮ 4.09 ಲಕ್ಷ ಕೋಟಿ ರೂ.ಗಳ ಬಜೆಟ್‌ನಲ್ಲಿ 65 ಸಾವಿರ ಕೋಟಿ ರೂ.ಗಳನ್ನು ಶಿಕ್ಷಣಕ್ಕೆ ಮೀಸಲಿಟ್ಟಿದ್ದೇವೆ. ನನ್ನ ವಿದ್ಯಾರ್ಥಿ ಜೀವನದ ಅನುಭವದ ಆಧಾರದಲ್ಲಿ ಶಿಕ್ಷಣ ಇಲಾಖೆಯ ಕಾರ್ಯಕ್ರಮಗಳನ್ನು ರೂಪಿಸಿದ್ದೇನೆ ಎಂದು ಮುಖ್ಯಮಂತ್ರಿಗಳು ಹೇಳಿದರು.

ಮೊಬೈಲ್‌ ಬಿಡಿ, ಪುಸ್ತಕ ಹಿಡಿ, ಓದು...
ಮೊಬೈಲ್‌ ಬಳಕೆಯ ಗೀಳು ಮಕ್ಕಳ ಆರೋಗ್ಯ, ಸಾಮಾಜಿಕ ನಡವಳಿಕೆ ಮತ್ತು ಶೈಕ್ಷಣಿಕ ಚಟುವಟಿಕೆಗಳ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂಬ ತಜ್ಞರು ಎಚ್ಚರಿಕೆ ಮಾತುಗಳಿಂದ ಎಚ್ಚೆತ್ತುಕೊಂಡಿರುವ ಸರಕಾರವು "ಮೊಬೈಲ್‌ ಬಿಡಿ, ಪುಸ್ತಕ ಹಿಡಿ, ಓದು...' ಎಂಬ ದಿಸೆಯಲ್ಲಿ ಕಾರ್ಯಪ್ರವೃತ್ತವಾಗಲು ಮುಂದಾಗಿದೆ. ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಕ್ಕಳ ಮೊಬೈಲ್‌ ಚಟದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದು, ಮಕ್ಕಳ ಮೊಬೈಲ್‌ ಬಳಕೆಗೆ ಲಗಾಮು ಹಾಕುವಂತೆ ಶಿಕ್ಷಕರಿಗೆ ಕರೆ ನೀಡಿದ್ದಾರೆ.

ಸದ್ಯಕ್ಕೆ ಮೊಬೈಲ್‌ ಬಳಕೆಯನ್ನು ಮಕ್ಕಳಲ್ಲಿ ಕಡಿಮೆ ಮಾಡುವುದನ್ನು ಗುರಿಯಾಗಿರಿಸಿಕೊಂಡು ಯಾವುದೇ ನಿರ್ದಿಷ್ಟ ಯೋಜನೆ ನಮ್ಮ ಬಳಿಯಿಲ್ಲ. ಆದರೆ ಸಿಎಂ ಸಲಹೆಯ ಮೇರೆಗೆ ಕಾರ್ಯಕ್ರಮ ರೂಪಿಸುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ಶಾಲಾ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಾರ್ಪೋರೇಟ್‌ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್‌) ಅನುದಾನದಲ್ಲಿ 2 ಸಾವಿರ ಶಾಲೆ ನಿರ್ಮಾಣ ಗುರಿ ಇದೆ. ಈ ಬಗ್ಗೆ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಿದ್ದು, ಹೀಗೆ ನಿರ್ಮಿಸಲಾಗುವ ಶಾಲೆಗಳಿಗೆ ಆಯಾ ಕಂಪೆನಿಗಳ ಹೆಸರಿಡಲಾಗುವುದು.
- ಡಿ.ಕೆ. ಶಿವಕುಮಾರ್‌, ಡಿಸಿಎಂ
Next Post Previous Post