Nimisha Priya: ಕಾಂತಪುರಂ ಉಸ್ತಾದ್, ಮಧ್ಯಸ್ಥಿಕೆ ನರ್ಸ್‌ ನಿಮಿಷಾಪ್ರಿಯಾ ಮರಣದಂಡನೆ ಸಂಪೂರ್ಣ ರದ್ದು ಮಾಡುವ ಸಾಧ್ಯತೆ!?


ನವದೆಹಲಿ: ಯೆಮೆನ್‌ನಲ್ಲಿ 2017 ರಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಕೇರಳದ ನರ್ಸ್ ನಿಮಿಷಾ ಪ್ರಿಯಾ ಅವರ ಮರಣದಂಡನೆಯನ್ನು ಯೆಮೆನ್ ಅಧಿಕಾರಿಗಳು ಸಂಪೂರ್ಣವಾಗಿ ರದ್ದುಗೊಳಿಸಿದ್ದಾರೆ ಎಂದು ಭಾರತದ ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎಪಿ ಅಬುಬಕರ್ ಮುಸ್ಲಿಯಾರ್ ಅವರ ಕಚೇರಿ ಸೋಮವಾರ (ಜು.28) ತಿಳಿಸಿದೆ.
.ತಿಂಗಳುಗಳ ಕಾಲ ಉನ್ನತ ಮಟ್ಟದ ರಾಜತಾಂತ್ರಿಕ ಮಧ್ಯಸ್ಥಿಕೆ ಮತ್ತು ಯೆಮೆನ್‌ನ ರಾಜಧಾನಿ ಸನಾದಲ್ಲಿ ನಡೆದ ಕೊನೆಯ ಕ್ಷಣದ ಸಭೆಯ ನಂತರ ಈ ಘೋಷಣೆ ಹೊರಬಿದ್ದಿದ್ದು, ಈ ಹಿಂದೆ ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿದ್ದ ಮರಣದಂಡನೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಲು ನಿರ್ಧರಿಸಲಾಗಿದೆ ಎಂದು ಹೇಳಲಾಗಿದೆ.

'ಈ ಹಿಂದೆ ಅಮಾನತುಗೊಳಿಸಲಾಗಿದ್ದ ನಿಮಿಷಾ ಪ್ರಿಯಾ ಅವರ ಮರಣದಂಡನೆಯನ್ನು ರದ್ದುಗೊಳಿಸಲಾಗಿದೆ. ಸನಾದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿದ್ದ ಮರಣದಂಡನೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಲು ನಿರ್ಧರಿಸಲಾಯಿತು' ಎಂದು ಗ್ರ್ಯಾಂಡ್ ಮುಫ್ತಿ ಕಚೇರಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಲಾಗಿದೆ. ಸುದ್ದಿ ಸಂಸ್ಥೆ ಎಎನ್‌ಐ ಇದನ್ನು ಉಲ್ಲೇಖಿಸಿ ವರದಿ ಮಾಡಿದೆ.



ಆದಾಗ್ಯೂ, ಯೆಮೆನ್ ಸರ್ಕಾರದಿಂದ ಅಧಿಕೃತ ಲಿಖಿತ ದೃಢೀಕರಣ ಇನ್ನೂ ಬಂದಿಲ್ಲ ಎಂದು ಕಚೇರಿ ಸ್ಪಷ್ಟಪಡಿಸಿದೆ. ಭಾರತದ ವಿದೇಶಾಂಗ ಸಚಿವಾಲಯವು ಈ ಬೆಳವಣಿಗೆಯನ್ನು ಇನ್ನೂ ಪರಿಶೀಲಿಸಿಲ್ಲ.

ನಿಮಿಷಾ ಅವರ ಮರಣದಂಡನೆಯನ್ನು ಮೊದಲು ಜುಲೈ 16 ರಂದು ನಿಗದಿಪಡಿಸಲಾಗಿತ್ತು ಆದರೆ ಗ್ರ್ಯಾಂಡ್ ಮುಫ್ತಿ ಮುಸ್ಲಿಯಾರ್ ಅವರು ಯೆಮೆನ್ ಅಧಿಕಾರಿಗಳಿಗೆ ಕ್ಷಮಾದಾನ ನೀಡುವಂತೆ ಒತ್ತಾಯಿಸಿ ನೇರ ಮನವಿ ಮಾಡಿದ ನಂತರ ಕೇವಲ ಒಂದು ದಿನದ ಮೊದಲು ತಾತ್ಕಾಲಿಕವಾಗಿ ತಡೆ ಹಿಡಿಯಲಾಗಿತ್ತು.

ಏನಿದು ನಿಮಿಷಾ ಪ್ರಿಯಾ ಪ್ರಕರಣ

38 ವರ್ಷದ ನಿಮಿಷಾ ಪ್ರಿಯಾ, ಕೇರಳದ ಪಾಲಕ್ಕಾಡ್ ಜಿಲ್ಲೆಯವರಾಗಿದ್ದು, ಉತ್ತಮ ಉದ್ಯೋಗಾವಕಾಶಗಳಿಗಾಗಿ 2008 ರಲ್ಲಿ ಯೆಮೆನ್‌ಗೆ ತೆರಳಿದ್ದರು. ತರಬೇತಿ ಪಡೆದ ನರ್ಸ್ ಆಗಿದ್ದ ಅವರು ನಂತರ ಯೆಮೆನ್ ಪ್ರಜೆ ತಲಾಲ್ ಅಬ್ದೋ ಮೆಹದಿ ಅವರೊಂದಿಗೆ ವ್ಯಾಪಾರ ಪಾಲುದಾರಿಕೆ ಮಾಡಿಕೊಂಡಿದ್ದರು. ಯೆಮೆನ್‌ ರಾಜಧಾನಿ ಸನಾದಲ್ಲಿ ಜಂಟಿಯಾಗಿ ಕ್ಲಿನಿಕ್ ನಡೆಸುತ್ತಿದ್ದರು.

ಭಾರತದ್ಲಿ ಮದುವೆಯಾಗಿದ್ದ ನಿಮಿಷಾ ಪ್ರಿಯಾ ಯೆಮೆನ್‌ ನಲ್ಲಿ ವ್ಯಾಪಾರ ಲೈಸೆನ್ಸ್‌ ಗಾಗಿ ಮೆಹದಿ ಅವರನ್ನು ಅಗ್ರಿಮೆಂಟ್‌ ವಿವಾಹವಾಗಿದ್ದರು. ಆದರೆ ಬಳಿಕ ಮೆಹದಿ ಕಿರುಕುಳ ನೀಡಲು ಪ್ರಾರಂಭಿಸಿದಾಗ ಸಂಬಂಧ ಹದಗೆಟ್ಟಿತ್ತು.

ಮಹದಿ ಆಕೆಗೆ ಕಿರುಕುಳ ನೀಡಲು ಪ್ರಾರಂಭಿಸಿದ್ದ. ಆಕೆ ತಪ್ಪಿಸಿಕೊಳ್ಳು ಯತ್ನಿಸಿದಾಗ ಆಕೆಯ ಪಾಸ್‌ಪೋರ್ಟ್ ವಶಪಡಿಸಿಕೊಂಡು ಭಾರತಕ್ಕೆ ಮರಳದಂತೆ ಮಾಡಿದ್ದ.

ತನ್ನ ದಾಖಲೆಗಳನ್ನು ಮರಳಿ ಪಡೆಯುವ ಪ್ರಯತ್ನದಲ್ಲಿ, ಪ್ರಿಯಾ 2017 ರಲ್ಲಿ ಮೆಹದಿಗೆ ನಿದ್ರಾಜನಕ ಔಷಧವನ್ನು ನೀಡಿದ್ದಾಳೆ ಎಂದು ವರದಿಯಾಗಿದೆ. ಮೆಹದಿ ಶಂಕಿತ ಮಾದಕವಸ್ತು ಮಿತಿಮೀರಿದ ಸೇವನೆಯಿಂದ ಸಾವನ್ನಪ್ಪಿದ್ದ. ಆಕೆಯನ್ನು 2018 ರಲ್ಲಿ ಬಂಧಿಸಿ ಕೊಲೆ ಆರೋಪ ಹೊರಿಸಲಾಯಿತು. 2020 ರಲ್ಲಿ ಯೆಮೆನ್ ನ್ಯಾಯಾಲಯವು ಮರಣದಂಡನೆ ವಿಧಿಸಿತು.

Next Post Previous Post