ಯುವ ಸಂಗೀತ ನಿರ್ದೇಶಕ ಪ್ರತಿಭೆ ಪ್ರಸಾದ್.ಕೆ.ಶೆಟ್ಟಿ . ✍️ ನಾರಾಯಣ ರೈ ಕುಕ್ಕುವಳ್ಳಿ.
ಮಂಗಳೂರು: ಇಂದು ನಮ್ಮ ಯುವಕರು ನಾಡುನುಡಿ ಸಂಸ್ಕೃತಿ,ಕಲೆ ಸಾಹಿತ್ಯ, ಸಮಾಜಸೇವೆ, ದೇಶಸೇವೆ, ಉದ್ಯಮ... ಹೀಗೇ ಅನೇಕ ಕ್ಷೇತ್ರಗಳಲ್ಲಿ ನಮ್ಮ ದೇಶದಲ್ಲಿದ್ದುಕೊಂಡೇ ಸೇವೆ ಸಲ್ಲಿಸಿ ಎಲ್ಲರ ಅಭಿಮಾನಕ್ಕೆ ಪಾತ್ರರಾಗುತ್ತಿರುವುದು ಹೆಮ್ಮೆಯ ವಿಚಾರವಾಗಿದೆ
ಮೂಲತಃ ನಮ್ಮ ಜಿಲ್ಲೆಯವರೇ ಆಗಿರುವ, ಪ್ರಸಾದ್ ಕೆ.ಶೆಟ್ಟಿ, ಈಗ ದೇಶ-ವಿದೇಶಗಳ ತುಂಬಾ ಹೆಸರು ಮಾಡುತ್ತಿರುವ ಭರವಸೆಯ ಯುವ ಸಂಗೀತ ನಿರ್ದೇಶಕರು.ಇವರು ಬೆಳ್ತಂಗಡಿ ಪುತ್ತಿಲದವರಾಗಿರುವ, ನಿವೃತ್ತ ಗ್ರಾಮ ಲೆಕ್ಕಿಗ ವಿಠಲ ಶೆಟ್ಟಿ, ಮತ್ತು ಶ್ರೀಮತಿ ರತ್ನ ವಿ ಶೆಟ್ಟಿ ಇವರ ಸುಪುತ್ರ.ತನ್ನ ಪ್ರಾಥಮಿಕ -ಪ್ರೌಢಶಿಕ್ಷಣವನ್ನು ಉಪ್ಪಿನಂಗಡಿ ಇಂದ್ರಪ್ರಸ್ಥ ವಿದ್ಯಾಲಯದಲ್ಲಿ ಪೂರ್ಣಗೊಳಿಸಿ,ಮುಂದೆ ಪದವಿಪೂರ್ವ ಶಿಕ್ಷಣವನ್ನು ಸವಣೂರು ವಿದ್ಯಾರಶ್ಮಿಯಲ್ಲಿ ಮುಗಿಸಿ, ಕಲಾಸಕ್ತಿ ಬೆಳೆಸಿಕೊಂಡು ಮಂಗಳೂರಿನ "ಸಂದೇಶ ಲಲಿತಾ ಕಲಾ" ಕಾಲೇಜಿನಲ್ಲಿ, ವೆಸ್ಟರ್ನ್ ಕ್ಲಾಸಿಕಲ್ ಮ್ಯೂಸಿಕ್,ಹಾಗೂ ಇಂಗ್ಲೀಷ್ ಸಾಹಿತ್ಯ ದಲ್ಲಿ ಪದವಿ ಪಡೆದು, ಚೆನೈ ನಲ್ಲಿ ಆಡಿಯೋ ಇಂಜಿನಿಯರಿಂಗ್ ವೃತ್ತಿ ಪರ ಪದವಿ ಪಡೆದುಕೊಂಡವರು.
ಪ್ರತಿಭೆ-ಸಾಧನೆಗಳಿಗೆ ಇಂದು ನೂರೆಂಟು ಅವಕಾಶಗಳ ಬಾಗಿಲುಗಳು ಸದಾ ತೆರೆದಿರುತ್ತವೆ.ಅನೇಕ ಹಿರಿಯ ಸಾಧಕರ ಒಲುಮೆಗಳಿವೆ. ಖ್ಯಾತ ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿಯವರೊಂದಿಗೆ ಹಲವು ವರ್ಷಗಳ ಕಾಲ ಕನ್ನಡ,ತಮಿಳು ಸಿನಿಮಾಗಳಿಗೆ ಸಹಾಯಕ ಸಂಗೀತ ನಿರ್ದೇಶನ ಮಾಡಿರುವ ಪ್ರಸಾದ್,'ಪುನೀತ್ ರಾಜಕುಮಾರ್' ಅಭಿನಯದ 'ಪೃಥ್ವಿ'ಹಾಗೂ 'ಗಣೇಶ್' ಅಭಿನಯದ 'ಮದುವೆ ಮನೆ' ಸಿನಿಮಾಗಳಿಗೆ ಸಹಾಯಕರಾಗಿ ಅವರೊಂದಿಗೆ ಕೆಲಸ ಮಾಡಿರುವುದು ಒಂದು ಹಿರಿಮೆಯೇ ಸರಿ. ಇವರು ತಮಿಳು,ಹಿಂದಿ ಸಿನಿಮಾಗಳಿಗೂ ಕೆಲಸ ಮಾಡಿರುವ ಸರ್ವ ಭಾಷಾ ಪ್ರೇಮಿ.
ಪ್ರಸಾದ್ ಕೆ.ಶೆಟ್ಟಿ 2017ರ "ವಿಶ್ವ ಯುವ ಬಂಟರ ಸಮ್ಮೇಳನ ಪುತ್ತೂರು ಹಾಗೂ ಮುಲ್ಕಿಯ ಬಂಟರ ಹಾಡಿಗೆ ಸಂಗೀತ ನೀಡಿ ಸೈ ಎನಿಸಿಕೊಂಡಿರುವರು. . ಈಗಾಗಲೇ ದೇಶ-ವಿದೇಶಗಳಲ್ಲಿ ಖ್ಯಾತಿ ಗಳಿಸಿರುವ ತುಳು ಸಿನಿಮಾ 'ಅಮ್ಮೆರ್ ಪೊಲೀಸ್, `ಪ್ಪೆಪ್ಪೆರೆರೆ...' 'ರಾಪಟ' ಹಾಗೂ ಕನ್ನಡ ಚಲನಚಿತ್ರಗಳಾದ ಲುಂಗಿ, ಗಂಧದಕುಡಿ, 'ನಾನು ಅದು ಮತ್ತು ಸರೋಜ 'ಸಿನಿಮಾಗಳಿಗೆ ಸ್ವತಂತ್ರ ಸಂಗೀತ ನಿರ್ದೇಶನ ಮಾಡಿರುತ್ತಾರೆ.
ಇವರ ಸಂಗೀತ ನಿರ್ದೇಶನದಲ್ಲಿ,' ಸ್ಟ್ರಾಬೆರಿ,' ಫಾರಿನ್ ಸ್ಕಾಚ್, 'ದಿಲ್ ಖುಷ್,' 'ನಿಮ್ಮ ವಸ್ತುಗಳಿಗೆ ನೀವೇ ಜವಾಬ್ದಾರಿ', ಮುಂತಾದ ಸಿನೆಮಾಗಳು ಇವರ ನಿರ್ದೇಶನದ ಇತರ ಚಿತ್ರಗಳು.ಸೆ.13/2024ರಂದು ಲೋಕಾರ್ಪಣೆಗೊಂಡ "ಕಲ್ಜಿಗ" ಸಿನಿಮಾದ ಸಂಗೀತ ನಿರ್ದೇಶನ ಸಂಯೋಜನೆ ಎಲ್ಲರ ಗಮನ ಸೆಳೆದಿದೆ.
ಇದೀಗ ಬಹು ತಾರಾಗಣದ ತುಳು ಚಿತ್ರ, ಕೃಷ್ಣವಾಣಿ ಪಿಕ್ಚರ್ಸ್ ಬ್ಯಾನರ್ ನಲ್ಲಿ ನಿತಿನ್ ರೈ ಕುಕ್ಕುವಳ್ಳಿ,ನುಳಿಯಾಲು,ಕಥೆ ಬರೆದು ನಿರ್ದೇಶನ ಮಾಡಿರುವ,ನಡುಬೈಲು ಜಗದೀಶ್ ಅಮೀನ್ ನಿರ್ಮಾಣ ಮಾಡಿರುವ,ಸಹ ನಿರ್ಮಾಪಕಿ ಶ್ರೀಮತಿ ಸರಿತಾ ಜಗದೀಶ್ ಅಮಿನ್ ಹಾಗೂ ಕಾರ್ಯ ನಿರ್ಮಾಪಕ,ಯುವ ನಟ,ರವಿಸ್ನೇಹಿತ್ ನಿರ್ಮಾಣ ಮಾಡಿರುವ ಅದ್ದೂರಿ ತುಳು ಸಿನಿಮಾ ಜುಲೈ 11 ಶುಕ್ರವಾರ ಸದ್ದು ಮಾಡಲಿರುವ,ದೈವದ ಮಹಿಮೆ ಸಾರುವ "ಧರ್ಮಚಾವಡಿ" ಸಿನಿಮಾ ಕ್ಕೆ ಸಂಗೀತ ನಿರ್ದೇಶನ ಮಾಡಿರುವ,ಯಕ್ಷಧ್ರುವ ಸತೀಶ್ ಪಟ್ಲ ಹಾಡಿರುವ, ಖ್ಯಾತ ಜಾನಪದ ವಿದ್ವಾಂಸರು ಕೆ.ಕೆ.ಪೇಜಾವರ್ ಸಾಹಿತ್ಯ ಬರೆದಿರುವ,"ಗೆಂಡೊದ ಬರ್ಸೊಗು ಕರ್ಬೊದ ಕೊಡೆಗೆ" ಪದ ಬಿಡುಗಡೆಗೊಂಡ ಕೆಲವೇ ಕ್ಷಣಗಳಲ್ಲಿ ಲಕ್ಷಾಂತರ ಅಭಿಮಾನಿಗಳ ಮನ ಸೆಳೆದು ದಾಖಲೆಯ ಕಡೆಗೆ ಹೆಜ್ಜೆ ಹಾಕಿದೆ.
ತನ್ನ ಕಲಾ ಸಾಹಿತ್ಯ ಸಂಗೀತಕ್ಕೆ ಬಾಲ್ಯದಲ್ಲೇ ಪ್ರೋತ್ಸಾಹ ನೀಡಿ ಬೆಳೆಸಿದ ಮಾವ,ಖ್ಯಾತ ಚಿತ್ರ ವಿತರಕರು,ಭರತನಾಟ್ಯ ಕಲಾವಿದರೂ ಆಗಿರುವ ಬಾಲಕೃಷ್ಣ ಶೆಟ್ಟಿ ಕುಕ್ಕಾಡಿಯವರನ್ನು ಗೌರವಾಭಿಮಾನಗಳೊಂದಿಗೆ ಸದಾ ನೆನಪಿಸುವರು.ಇವರ ಪ್ರಸಾದ್ ಕೆ.ಶೆಟ್ಟಿಯವರ,ಪತ್ನಿ ಶ್ರೀಮತಿ ಆಕಾಂಕ್ಷ ಪ್ರಸಾದ್ , ಪತಿಯ ಎಲ್ಲಾ ಕೆಲಸ ಕಾರ್ಯಗಳಲ್ಲಿ ಹೆಗಲೆಣೆಯಾಗಿ ನಿಂತಿರುವರು.
"ಧರ್ಮಚಾವಡಿ"ತುಳು ಸಿನಿಮಾದ ಕಥೆ
ಸಂಭಾಷಣೆಯನ್ನು "ಸ್ಕೂಲ್ ಲೀಡರ್"ಖ್ಯಾತಿಯ ರಝಾಕ್ ಪುತ್ತೂರು ಬರೆದರೆ, ಚಿತ್ರೀಕರಣ-ಛಾಯಾಗ್ರಹಣ "ಧರ್ಮದೈವ"ಖ್ಯಾತಿಯ ಅರುಣ್ ರೈ ಪುತ್ತೂರು.ಎಡಿಟರ್ ಶ್ರೀಕಾಂತ್ ಪವಾರ್, ಪ್ರೊಡಕ್ಷನ್ ಮೆನೇಜರ್ ಸುಧೀರ್ ಕುಮಾರ್ ಕಲ್ಲಡ್ಕ,ಸೇರಿದಂತೆ ತಂತ್ರಜ್ಞರ ದಂಡೇ ಇದೆ.
"ಧರ್ಮದೈವ" ಸಿನಿಮಾದ ಯಜಮಾನ ರಂಗಕೇಸರಿ ರಮೇಶ್ ರೈ ಕುಕ್ಕುವಳ್ಳಿ,ಚೇತನ್ ರೈ ಮಾಣಿ, ದೀಪಕ್ ರೈ ಪಾಣಾಜೆ, ದಯಾನಂದ ರೈ ಬೆಟ್ಟಂಪಾಡಿ ಸೇರಿದಂತೆ ಅನೇಕ ಯುವ ಕಲಾವಿದರು,ಕಲಾವಿದೆಯರು ಪ್ರಥಮವಾಗಿ ನಟಿಸಿ ಚಿತ್ರದ ಯಶಸ್ಸಿಗೆ ಕಾರಣರಾಗುವರು.ವಸ್ತ್ರ ವಿನ್ಯಾಸದಲ್ಲಿ ಶ್ರೀಮತಿ ಸಾತ್ವಿಕಾ ಎನ್ ರೈ ಸಹಕರಿಸಿದ್ದಾರೆ. "ಧರ್ಮಚಾವಡಿ."ಜುಲೈ 11 ಶುಕ್ರವಾರ ನಾಡಿನಾದ್ಯಂತ ಬಿಡುಗಡೆಗೊಂಡು ಯಶಸ್ವಿಯಾಗಲಿ ಎಂದು ಸರ್ವ ದೈವ-ದೇವರಲ್ಲಿ ಪ್ರಾರ್ಥಿಸೋಣ.
✍️ ನಾರಾಯಣ ರೈ ಕುಕ್ಕುವಳ್ಳಿ.