ಇಸ್ಲಾಂ ಧರ್ಮ ಗ್ರಂಥ ಪವಿತ್ರ ಕುರಾನ್ ಮೇಲೆ ಕೈಯಿಟ್ಟು ಪ್ರಮಾಣ ವಚನ ಸ್ವೀಕರಿಸಿದ ನ್ಯೂಯಾರ್ಕ್ ಮೇಯರ್ ಮಮ್ದಾನಿ
ನ್ಯೂಯಾರ್ಕ್: ಅಮೆರಿಕದ ಅತ್ಯಂತ ದೊಡ್ಡ ನಗರವಾದ ನ್ಯೂಯಾರ್ಕ್‌ನಲ್ಲಿ ಹೊಸ ಯುಗ ಆರಂಭವಾಗಿದೆ. ಭಾರತೀಯ ಮೂಲದ ಡೆಮಾಕ್ರಟಿಕ್ ನಾಯಕ 34 ವರ್ಷದ ಜೊಹ್ರಾನ್ ಮಮ್ದಾನಿ ಅವರು ಗುರುವಾರ ಮಧ್ಯರಾತ್ರಿ ನ್ಯೂಯಾರ್ಕ್ ನಗರದ ನೂತನ ಮೇಯರ್ ಆಗಿ ಅಧಿಕಾರ ಸ್ವೀಕರಿಸಿದರು.
ಈ ಮೂಲಕ ಅವರು ನಗರದ ಇತಿಹಾಸದಲ್ಲೇ ಮೊದಲ ಮುಸ್ಲಿಂ ಮತ್ತು ದಕ್ಷಿಣ ಏಷ್ಯಾ ಮೂಲದ ಮೇಯರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಮ್ಯಾನ್‌ಹಾಟನ್‌ನ ಐತಿಹಾಸಿಕ ಹಳೆಯ ಸಬ್‌ವೇ (ಮೆಟ್ರೋ) ನಿಲ್ದಾಣದಲ್ಲಿ ನಡೆದ ಸರಳ ಸಮಾರಂಭದಲ್ಲಿ, ಮಮ್ದಾನಿ ಅವರು ಪವಿತ್ರ ಕುರಾನ್ ಮೇಲೆ ಕೈಯಿಟ್ಟು ಪ್ರಮಾಣ ವಚನ ಸ್ವೀಕರಿಸಿದರು. ನ್ಯೂಯಾರ್ಕ್ ಅಟಾರ್ನಿ ಜನರಲ್ ಲೆಟಿಟಿಯಾ ಜೇಮ್ಸ್ ಅವರು ಪ್ರಮಾಣ ವಚನ ಬೋಧಿಸಿದರು.
ಮಮ್ದಾನಿ ಅವರ ರಾಜಕೀಯ ಗುರು, ಯುಎಸ್ ಸೆನೆಟರ್ ಬರ್ನಿ ಸ್ಯಾಂಡರ್ಸ್ ಅವರು ಮತ್ತೊಮ್ಮೆ ಪ್ರಮಾಣ ವಚನ ಬೋಧಿಸಲಿದ್ದಾರೆ. ಇಂದು ಮಧ್ಯಾಹ್ನ 1 ಗಂಟೆಗೆ ಸಿಟಿ ಹಾಲ್‌ನಲ್ಲಿ ಅದ್ಧೂರಿ ಸಮಾರಂಭ ನಡೆಯಲಿದೆ.
ಇದರ ನಂತರ ಬ್ರಾಡ್‌ವೇಯ ಪ್ರಸಿದ್ಧ ‘ಕ್ಯಾನ್ಯನ್ ಆಫ್ ಹೀರೋಸ್’ನಲ್ಲಿ ಬೃಹತ್ ಸಾರ್ವಜನಿಕ ಬ್ಲಾಕ್ ಪಾರ್ಟಿ ಮತ್ತು ಮೆರವಣಿಗೆಯನ್ನು ಆಯೋಜಿಸಲಾಗಿದೆ.