ಕೋಳಿ ಅಂಕಕ್ಕೆ ಪ್ರಚೋದನೆ ಆರೋಪ: ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಸೇರಿದಂತೆ 17 ಜನರ ಮೇಲೆ ಎಫ್‌ಐಆರ್ ದಾಖಲು


ವಿಟ್ಲ (ದಕ್ಷಿಣ ಕನ್ನಡ): ವಿಟ್ಲ ಪೊಲೀಸ್ ಠಾಣೆ ವ್ಯಾಪ್ತಿಯ ಕೇಪು ಗ್ರಾಮದಲ್ಲಿ ಕೋಳಿ ಅಂಕ ನಡೆಯುತ್ತಿದ್ದ ಸ್ಥಳಕ್ಕೆ ಪೊಲೀಸರು ಶನಿವಾರ ದಾಳಿ ನಡೆಸಿದ್ದು, 16 ಜನರನ್ನು ವಶಕ್ಕೆ ಪಡೆದಿದ್ದಾರೆ. ಕೋಳಿ ಅಂಕಕ್ಕೆ ಬಳಸಿದ್ದ 22 ಹುಂಜಗಳನ್ನು ಹಾಗೂ ಬಾಲುಗಳನ್ನು (ಚೂಪಾದ ಕತ್ತಿಗಳನ್ನು) ವಶಪಡಿಸಿಕೊಂಡಿದ್ದಾರೆ.

ಕೋಳಿ ಅಂಕದ ಸ್ಥಳದಲ್ಲಿ ಹಾಜರಿದ್ದ ಹಾಗೂ ಕಾನೂನು ಬಾಹಿರವಾದ ಕೋಳಿ ಅಂಕವನ್ನು ಮುಂದುವರಿಸುವಂತೆ ಜನರನ್ನು ಪ್ರಚೋದಿಸಿ ದುಷ್ಪ್ರೇರಣೆ ನೀಡಿದ ಆರೋಪದ ಮೇಲೆ ಪುತ್ತೂರು ಕ್ಷೇತ್ರದ ಕಾಂಗ್ರೆಸ್‌ ಶಾಸಕ ಅಶೋಕ್ ಕುಮಾರ್ ರೈ ವಿರುದ್ಧವೂ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.

ಯಾವುದೇ ಪರವಾನಗಿ ಪಡೆಯದೇ, ಕಾನೂನು ಬಾಹಿರ ಕೃತ್ಯಕ್ಕೆ ಅನುವು ಮಾಡಿಕೊಟ್ಟ ಆರೋಪದ ಮೇಲೆ ಜಾಗದ ಮಾಲೀಕ ಮರಳೀಧರ ರೈ ವಿರುದ್ಧವೂ ಪ್ರಕರಣ ದಾಖಲಿಸಿಕೊಂಡಿದ್ದಾರೆ.



ಶಾಸಕ ಅಶೋಕ್ ರೈ ಸೇರಿದಂತೆ 17 ಜನರ ಮೇಲೆ ಕೇಸ್​

ಕೋಳಿ‌ ಕಾಳಗಕ್ಕೆ ಪೊಲೀಸರು ‌ನಿರ್ಬಂಧ ಹೇರಿದ್ರೂ, ಪುತ್ತೂರು ಶಾಸಕ ಅಶೋಕ್ ರೈ ತಾನೇ ಮುಂದೆ ನಿಂತು ಕೋಳಿ‌ ಅಂಕ ಮಾಡಿಸಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಹೀಗಾಗಿ ವಿಟ್ಲ ಠಾಣೆಯ ಪೊಲೀಸರು ಶಾಸಕ ಅಶೋಕ್ ರೈ ಸೇರಿದಂತೆ 17 ಜನರ ಮೇಲೆ ಪ್ರಕರಣ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.


22 ಹುಂಜ ಹಾಗೂ ಕೋಳಿ ವಶಕ್ಕೆ

ಕಾನೂನು ಬಾಹಿರ ಕೃತ್ಯವನ್ನು ನಡೆಸಲು ಪ್ರಚೋದನೆ ಮತ್ತು ದುಷ್ಪ್ರೇರಣೆಯನ್ನು ನೀಡಿದ ಆರೋಪದ ಮೇಲೆ ಶಾಸಕ ಅಶೋಕ್ ಕುಮಾರ್ ರೈ ವಿರುದ್ಧ ಪ್ರಕರಣ ದಾಖಲಾಗಿದೆ. ಕೋಳಿ ಅಂಕಕ್ಕೆ ತಂದಿದ್ದ 22 ಹುಂಜ ಹಾಗೂ ಕೋಳಿ ಅಂಕಕ್ಕೆ ಬಳಸುವ ಬಾಳು (ಕತ್ತಿ)ವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.


ಜಾತ್ರೋತ್ಸವದ ಪ್ರಯುಕ್ತ ಕೋಳಿ ಕಾಳಗ

ಬಂಟ್ವಾಳ ತಾಲೂಕಿನ ವಿಟ್ಲದ ಕೇಪು ಶ್ರೀ ಉಳ್ಳಾಲ್ತಿ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಕಜಂಬು ಜಾತ್ರೋತ್ಸವದಲ್ಲಿ ಪ್ರತಿ ವರ್ಷ ನಡೆಯುವಂತೆ ಈ ಬಾರಿ ಊರಿನವರು ಕೋಳಿ ಅಂಕವನ್ನು ಆಯೋಜಿಸಿದ್ದರು. ಇಲ್ಲಿ ಕೋಳಿ ಅಂಕ ಮಾಡುವಂತಿಲ್ಲ. ಮಾಡಿದ್ರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದರು. ಆದ್ರೂ ಶಾಸಕರ ನೇತೃತ್ವದಲ್ಲಿ ಕೋಳಿ ಕಾಳಗ ನಡೆದಿದೆ ಎನ್ನಲಾಗ್ತಿದೆ.


ವರ್ಷಕ್ಕೊಮ್ಮೆ ನಡೆಯೋ ಕೋಳಿ‌ ಅಂಕ!

ಕಾನೂನು ಬಾಹಿರ ಕೃತ್ಯ ದಲ್ಲಿತೊಡಗಿಸಿ ಕೊಂಡಿದ್ದಾರೆ ಎಂದು ಆರೋಪಿಸಿ 16 ಜನರ ವಿರುದ್ದ ಪ್ರಕರಣ ದಾಖಲು BNS ಕಲಂ:189(2), 49, 221, 223, 190 PREVENTION OF CRUELTY TO ANIMALS ACT, 1960 ಅಡಿ ಪ್ರಕರಣ ದಾಖಲಾಗಿದೆ. ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೇಪುವಿನಲ್ಲಿ ಜಾತ್ರೋತ್ಸವದ ಹಿನ್ನೆಲೆಯಲ್ಲಿ ವರ್ಷಕ್ಕೊಮ್ಮೆ ಈ ಕೋಳಿ‌ ಅಂಕ ನಡೆಸಲಾಗುತ್ತೆ. ಯಾವುದೇ ಜೂಜು ಕಟ್ಟದೆ ಧಾರ್ಮಿಕ ಹಿನ್ನೆಲೆ ಆಧಾರದಲ್ಲಿ ಕೋಳಿ‌ ಅಂಕ ನಡೆಯುತ್ತದೆ.


Next Post Previous Post