ಶಿಕ್ಷಣ, ಸಾಹಿತ್ಯ ಮತ್ತು ಪತ್ರಿಕೋದ್ಯಮದ ತ್ರಿವೇಣಿ ಸಂಗಮ: ರಾಜ್ಯ ಪ್ರಶಸ್ತಿ ಪುರಸ್ಕೃತ ಶ್ರೀ ನಾರಾಯಣ ರೈ ಕುಕ್ಕುವಳ್ಳಿ


ಪುತ್ತೂರು: ಜ್ಞಾನ ಎಂಬುದು ಎಲ್ಲರಿಗೂ ಸಿದ್ಧಿಸುವುದಿಲ್ಲ.. ಅದು ಸಾಧನೆಯ ಕೊನೆಗೆ ಬರುವ ಅಮೃತದಂತೆ” ಎಂಬ ಅರ್ಥಪೂರ್ಣ ಮಾತಿನಂತೆ, ತಮ್ಮ ಬದುಕನ್ನೇ ಜ್ಞಾನ ಪ್ರಸಾರಕ್ಕಾಗಿ ಮುಡಿಪಾಗಿಟ್ಟವರು ನಮ್ಮೆಲ್ಲರ ಪ್ರೀತಿಯ ನನ್ನ ಗುರುಗಳು ಆದ ಶ್ರೀ ನಾರಾಯಣ ರೈ ಕುಕ್ಕುವಳ್ಳಿಯವರು. ಶಿಕ್ಷಕರಾಗಿ ವಿದ್ಯಾರ್ಥಿಗಳ ಬಾಳಿಗೆ ಬೆಳಕಾದವರು, ಸಾಹಿತಿಯಾಗಿ ಸಮಾಜಕ್ಕೆ ಕನ್ನಡಿ ಹಿಡಿದವರು, ಹಾಗೆಯೇ ಹಲವಾರು ಯುವ ಸಾಹಿತಿಗಳನ್ನು ಬರಹಗಾರರನ್ನು ಪ್ರತಿಭಾವಂತರನ್ನು ಸಮಾಜಕ್ಕೆ ಪರಿಚಯಿಸಿದವರು ಮತ್ತು ವ್ಯಂಗ್ಯಚಿತ್ರಕಾರರಾಗಿ ನಗಿಸುತ್ತಲೇ ಚಿಂತನೆಗೆ ಹಚ್ಚಿದ ಬಹುಮುಖ ಪ್ರತಿಭೆ ಇವರು.

*ಮಂಗಳ ವರ್ಗೀಸ್ ಪ್ರಶಸ್ತಿಯ ಗರಿ:*
ಸಾಹಿತ್ಯ ಮತ್ತು ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಂಡಿರುವ ಕುಕ್ಕುವಳ್ಳಿಯವರ ಶ್ರಮಕ್ಕೆ ಇದೀಗ ಮತ್ತೊಂದು ಹಿರಿಯ ಗೌರವ ಸಂದಿದೆ. ದ.ಕ. ಜೇನು ವ್ಯವಸಾಯಗಾರರ ಸಹಕಾರಿ ಸಂಘದ ‘ಮಧುಪ್ರಪಂಚ’ ಪತ್ರಿಕೆಯ ಪ್ರಧಾನ ಸಂಪಾದಕರಾಗಿ ಮತ್ತು ಅಂಕಣಕಾರರಾಗಿ ಅವರು ಸಲ್ಲಿಸುತ್ತಿರುವ ಅನುಪಮ ಸೇವೆಯನ್ನು ಪರಿಗಣಿಸಿ, ರಾಜ್ಯ ಪತ್ರಕರ್ತರ ಸಂಘವು 2025ನೇ ಸಾಲಿನ ಪ್ರತಿಷ್ಠಿತ ‘ಮಂಗಳ ವರ್ಗೀಸ್ ಸ್ಮಾರಕ ರಾಜ್ಯ ಪ್ರಶಸ್ತಿ’ಗೆ ಇವರನ್ನು ಆಯ್ಕೆ ಮಾಡಿರುವುದು ಪುತ್ತೂರಿಗೆ ಹೆಮ್ಮೆಯ ವಿಷಯ.


ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶ್ರೀ ಪುಷ್ಪರಾಜ್ ಬಿ.ಎನ್ ಅವರ ನೇತೃತ್ವದಲ್ಲಿ, ಇದೇ ಡಿಸೆಂಬರ್ 9ರಂದು ನಡೆದ ಜಿಲ್ಲಾ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಇದು ಒಬ್ಬ ಅರ್ಹ ಸಾಧಕನಿಗೆ ಸಂದ ಗೌರವವಾಗಿದೆ.

ವೃತ್ತಿ ಬದುಕಿನ ಹಾದಿ:
ಮೂಲತಃ ಪುತ್ತೂರು ತಾಲೂಕಿನ ಕುಕ್ಕುವಳ್ಳಿಯವರಾದ ಇವರು ಕೀ.ಶೇ. ಕಲ್ಲಡ್ಕ ಕರಿಯಪ್ಪ ರೈ ಮತ್ತು ಶ್ರೀಮತಿ ಗಿರಿಜ ಕೆ. ರೈ ದಂಪತಿಯ ಸುಪುತ್ರ. ಮೈಸೂರು ವಿವಿಯಿಂದ ಸಮಾಜಶಾಸ್ತ್ರದಲ್ಲಿ ಎಂ.ಎ ಮತ್ತು ಬಿ.ಎಡ್ ಪದವಿ ಪಡೆದ ಇವರು, ಕೊಣಾಜೆ, ಬೆಟ್ಟಂಪಾಡಿ,ಮುಂಡೂರು, ಸರಕಾರಿ ಪದವಿಪೂರ್ವ ಕಾಲೇಜು ಪುತ್ತೂರು, ಇರ್ದೆ-ಉಪ್ಪಳಿಗೆ ಪ್ರೌಢ ಶಾಲೆಗಳಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಕೇವಲ ಪಾಠಕ್ಕಷ್ಟೇ ಸೀಮಿತವಾಗದೆ, ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸಿದ ಇವರಿಗೆ ಈಗಾಗಲೇ ‘ರಾಜ್ಯ ಮಟ್ಟದ ಉತ್ತಮ ಶಿಕ್ಷಕ’ ಪ್ರಶಸ್ತಿ ಲಭಿಸಿದೆ. ಕನ್ನಡ,ತುಳು,ಪಠ್ಯ ಪುಸ್ತಕ ರಚನಾ ಸದಸ್ಯರಾಗಿ, ಕಾನೂನು ಪ್ರಾಧಿಕಾರದ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.

ಬರಹ ಮತ್ತು ಕುಂಚದ ಮೋಡಿ:
ಪುತ್ತೂರು ತಾಲೂಕಿನ ಏಕೈಕ ಮತ್ತು ಅಪರೂಪದ ವ್ಯಂಗ್ಯಚಿತ್ರಕಾರರಾಗಿ ಗುರುತಿಸಿಕೊಂಡಿರುವ ಇವರು, ಅಕ್ಷಯ, ತರಂಗ, ಸುಧಾ, ಕರ್ಮವೀರ ಮುಂತಾದ ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ವ್ಯಂಗ್ಯಚಿತ್ರಗಳನ್ನು ರಚಿಸಿದ್ದಾರೆ. ರಾಷ್ಟ್ರಮಟ್ಟದ ವ್ಯಂಗ್ಯಚಿತ್ರ ಸ್ಪರ್ಧೆಗಳಲ್ಲಿ ಸತತ ಆರು ಬಾರಿ ಪ್ರಥಮ ಬಹುಮಾನ ಪಡೆದಿರುವುದು ಇವರ ಹೆಗ್ಗಳಿಕೆ.
ವಿಶೇಷವಾಗಿ ‘ಸುದ್ದಿ ಬಿಡುಗಡೆ’ ಪತ್ರಿಕೆಯಲ್ಲಿ ಇವರು ನಿರ್ವಹಿಸುತ್ತಿರುವ ‘ಪ್ರತಿಭಾರಂಗ’ ಮತ್ತು ‘ಬರಹದಂಗಣ’ ಅಂಕಣಗಳು ನನ್ನನ್ನು ಸೇರಿದಂತೆ ಗ್ರಾಮೀಣ ಭಾಗದ ಎಲೆಮರೆಯ ಕಾಯಿಯಂತಿದ್ದ ಸಾವಿರಾರು ಬಾಲಪ್ರತಿಭೆಗಳನ್ನು ಮತ್ತು ಯುವ ಬರಹಗಾರರನ್ನು ನಾಡಿಗೆ ಪರಿಚಯಿಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ. ‘ಚಿಣ್ಣರ ಬಣ್ಣ’, ‘ಕಾರಂತ ಮಾಸ್ತರ್ ಜೀವನ ಚರಿತ್ರೆ’ಯಂತಹ ಮೌಲ್ಯಯುತ ಕೃತಿಗಳನ್ನು ಇವರು ರಚಿಸಿದ್ದಾರೆ.


ಪ್ರಶಸ್ತಿಗಳ ಸರಮಾಲೆ:
ಇವರ ಸಾಧನೆಗೆ ಆರ್ಯಭಟ ರಾಜ್ಯ ಪ್ರಶಸ್ತಿ, ಕಲಾಶ್ರಯ ಪುರಸ್ಕಾರ, ಗಡಿನಾಡ ಧ್ವನಿ ಸಮ್ಮೇಳನದ ಅಧ್ಯಕ್ಷತೆ ಸೇರಿದಂತೆ ಹತ್ತು ಹಲವು ಗೌರವಗಳು ಸಂದಿವೆ. ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಮತ್ತು ಪಾ.ವೆಂ. ಆಚಾರ್ಯರಂತಹ ಮಹನೀಯರಿಂದ ಪ್ರಶಂಸೆಗೊಳಗಾದ ಹಿರಿಮೆ ಇವರದು.

ವೈಯಕ್ತಿಕ ಬದುಕು:
ಪತ್ನಿ ಶ್ರೀಮತಿ ನಾಗರತ್ನ ಅವರ ಅಕಾಲಿಕ ನಿಧನದ ನೋವಿನ ನಡುವೆಯೂ ಎದೆಗುಂದದೆ, ಮಕ್ಕಳಾದ ನಿತಿನ್ ರೈ ಮತ್ತು ನೀನಾ ಅವರಿಗೆ ಉನ್ನತ ಶಿಕ್ಷಣ ನೀಡಿ, ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ಪರಿ ನಿಜಕ್ಕೂ ಅನುಕರಣೀಯ.
ಇಂದು ರಾಜ್ಯಮಟ್ಟದ ಪತ್ರಿಕೋದ್ಯಮ ಪ್ರಶಸ್ತಿಯ ಮೂಲಕ ಗೌರವಿಸಲ್ಪಡುತ್ತಿರುವ ಹಿರಿಯರು ನನ್ನ ಗುರುಗಳಾದ ಶ್ರೀ ನಾರಾಯಣ ರೈ ಕುಕ್ಕುವಳ್ಳಿಯವರಿಗೆ ಸಮಸ್ತ ಅಭಿಮಾನಿಗಳ ಪರವಾಗಿ ಹಾರ್ದಿಕ ಅಭಿನಂದನೆಗಳು. ದೇವರು ಇವರಿಗೆ ಇನ್ನಷ್ಟು ಆಯುರಾರೋಗ್ಯ ನೀಡಿ, ಇವರಿಂದ ಸಾಹಿತ್ಯ ಸೇವೆ ನಿರಂತರವಾಗಿ ನಡೆಯಲಿ ಎಂದು ಹಾರೈಸೋಣ.

~ಸಿಂಸಾರುಲ್ ಹಕ್ ಆರ್ಲಪದವು
Next Post Previous Post