ಏ. 9ರವರೆಗೆ ರಾಜ್ಯದ ವಿವಿಧೆಡೆ 50 ಕಿಮೀ ವೇಗದ ಗಾಳಿ, ಗುಡುಗು ಸಹಿತ ಮಳೆ: 16 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ


ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಏಪ್ರಿಲ್ 6ರಿಂದ 4 ದಿನಗಳ ಕಾಲ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಏಪ್ರಿಲ್ 9 ರವರೆಗೆ ವಿವಿಧೆಡೆ ಮಳೆ ಆಗಲಿದೆ ಎಂದು ಹೇಳಲಾಗಿದ್ದು, 16 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಮೈಸೂರು, ರಾಮನಗರ, ಶಿವಮೊಗ್ಗ, ಹಾಸನ, ಕೊಡಗು, ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಧಾರವಾಡ, ಬೆಳಗಾವಿ, ಗದಗ, ಹಾವೇರಿ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ಹಿನ್ನೆಲೆಯಲ್ಲಿ ಯೆಲ್ಲೋ ಅಲರ್ಟ್ ನೀಡಲಾಗಿದೆ.

ಏಪ್ರಿಲ್ 6ರಿಂದ 9ರವರೆಗೆ ನಾಲ್ಕು ದಿನಗಳಲ್ಲಿ ಗಂಟೆಗೆ 30 ರಿಂದ 50 ಕಿಲೋಮೀಟರ್ ವೇಗದಲ್ಲಿ ಬಲವಾದ ಗಾಳಿ ಬೀಸುವ ಸಾಧ್ಯತೆ ಇದೆ. ಜೊತೆಗೆ ಗುಡುಗು, ಮಿಂಚಿನ ಆರ್ಭಟ ಕೂಡ ಇರುತ್ತದೆ. ಮಲೆನಾಡು ಮತ್ತು ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಮಳೆಯ ಪ್ರಮಾಣ ಹೆಚ್ಚಿದ್ದು, ಕರಾವಳಿಯಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.

ಉತ್ತರ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಚದುರಿದಂತೆ ಮಳೆಯಾಗುವ ಸಂಭವ ಇದೆ. ಮಳೆ ಮತ್ತು ಗಾಳಿ ಬೀಸುವಾಗ ಮರಗಳ ಕೆಳಗೆ ಅಥವಾ ಹಳೆಯ ಕಟ್ಟಡಗಳ ಬಳಿ ನಿಲ್ಲಬಾರದು. ಗುಡುಗು ಮಿಂಚಿನ ಸಂದರ್ಭದಲ್ಲಿ ವಿದ್ಯುತ್ ಉಪಕರಣಗಳಿಂದ ದೂರವಿರಬೇಕು ಎಂದು ಹೇಳಲಾಗಿದೆ.


Next Post Previous Post