ಪಾಣಾಜೆ ಗ್ರಾಮದಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ ಶಂಕೆ!? ಅರಣ್ಯ ಇಲಾಖೆಯಿಂದ ತಡರಾತ್ರಿಯಲ್ಲೂ ಕಾರ್ಯಾಚರಣೆ..!


ಪುತ್ತೂರು: ಗಡಿ ಪ್ರದೇಶವಾದ ಪಾಣಾಜೆ ಗ್ರಾಮದ ಭರಣ್ಯ–ಜಾಂಬ್ರಿ ಮಧ್ಯ ಭಾಗದಲ್ಲಿ ಚಿರತೆ ಪ್ರತ್ಯಕ್ಷಗೊಂಡಿದೆ ಎಂಬ ಶಂಕೆಯ ಹಿನ್ನೆಲೆಯಲ್ಲಿ ಗ್ರಾಮಸ್ಥರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಈ ಕುರಿತು ಭಯಭೀತಗೊಂಡ ಜನತೆ ಅರಣ್ಯ ಇಲಾಖೆಯ ಅಧಿಕಾರಿಗಳ ಗಮನಕ್ಕೆ ವಿಷಯವನ್ನು ತಂದಿದ್ದು, ತಡ ರಾತ್ರಿಯಲ್ಲೂ ಇಲಾಖಾ ಸಿಬ್ಬಂದಿ ಸ್ಥಳದಲ್ಲಿ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದಾರೆ.


ಈ ಮೊದಲು ಕೂಡ ಪಾಣಾಜೆ ಸುತ್ತಮುತ್ತಲ ಪ್ರದೇಶಗಳು, ಭರಣ್ಯ–ಚಂಡತಡ್ಕ, ಜಾಂಬ್ರಿ ಗುಹೆ, ಆರ್ಲಪದವು ಸೇರಿದಂತೆ ವಿವಿಧ ಕಡೆಗಳಲ್ಲಿ ಚಿರತೆ ಕಾಣಿಸಿಕೊಂಡಿದೆ ಎಂಬ ಅನುಮಾನಾಸ್ಪದ ಮಾಹಿತಿಗಳು ಬಂದಿದ್ದವು. ಆಗಲೂ ಅರಣ್ಯ ಇಲಾಖೆ ತಕ್ಷಣ ಸ್ಪಂದಿಸಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದರೂ, ಚಿರತೆಯನ್ನು ಪತ್ತೆಹಚ್ಚಲು ಸಾಧ್ಯವಾಗಿರಲಿಲ್ಲ.





ಇತ್ತೀಚಿನ ದಿನಗಳಲ್ಲಿ ಮತ್ತೆ ಬೇರೆ ಪ್ರದೇಶದಲ್ಲಿ ಚಿರತೆ ಪ್ರತ್ಯಕ್ಷಗೊಂಡಿದೆ ಎಂಬ ಸುದ್ದಿ ಹರಡುತ್ತಿದ್ದಂತೆ ಅರಣ್ಯ ಇಲಾಖೆ ಗಸ್ತು ತಿರುಗಿದರೂ, ಚಿರತೆ ಕಣ್ಣಿಗೆ ಬಿದ್ದಿಲ್ಲ. ಇದರಿಂದ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಿದ್ದು, ವಿಶೇಷವಾಗಿ ಶಾಲಾ ಮಕ್ಕಳನ್ನು ಶಾಲೆಗೆ ಕಳುಹಿಸುವುದು ಹಾಗೂ ದಿನನಿತ್ಯದ ಕೆಲಸಗಳಿಗೆ ಊರಿನ ವಿವಿಧ ಭಾಗಗಳಿಂದ ಸಂಚರಿಸುವ ಬಗ್ಗೆ ಜನರು ಚಿಂತೆಯಲ್ಲಿದ್ದಾರೆ.






ಆಗಾಗ ಚಿರತೆ ಪ್ರತ್ಯಕ್ಷವಾಗಿದೆ ಎಂಬ ಸುದ್ದಿಗಳು ಹರಡುತ್ತಿರುವುದರಿಂದ ನೈಜ ಸ್ಥಿತಿಗತಿ ಕುರಿತು ಸಂಶಯವೂ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಸಮಗ್ರ ಹಾಗೂ ಕೂಲಂಕುಶ ಪರಿಶೀಲನೆ ನಡೆಸಿ, ಚಿರತೆ ಇದ್ದಲ್ಲಿ ಅದನ್ನು ಹಿಡಿಯುವ ಮೂಲಕ ಅಥವಾ ಊರಿನಿಂದ ಓಡಿಸುವ ಮೂಲಕ ಭಯಭೀತ ಜನತೆಗೆ ರಕ್ಷಣೆ ನೀಡಬೇಕೆಂದು ಸಮಸ್ತ ನಾಗರಿಕರು ಮನವಿ ಮಾಡಿಕೊಂಡಿದ್ದಾರೆ.

Next Post Previous Post