BREAKING NEWS: ರಾಜ್ಯದ ಎಲ್ಲಾ 'ಗ್ರಾಮ ಪಂಚಾಯ್ತಿ'ಗಳಿಗೆ 'ಮಹಾತ್ಮ ಗಾಂಧಿ' ಹೆಸರು: ಸಿಎಂ ಸಿದ್ಧರಾಮಯ್ಯ


ಬೆಂಗಳೂರು: ಕರ್ನಾಟಕದ 6000 ಗ್ರಾಮ ಪಂಚಾಯಿತಿಗಳಿಗೆ ಮಹಾತ್ಮಗಾಂಧಿ ಹೆಸರನ್ನು ಇಡಲಾಗುವುದು. ಮುಂದಿನ ಬಜೆಟ್‌ನಲ್ಲಿಯೇ ಅಧಿಕೃತ ಘೋಷಣೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು.
ವಿಬಿ ಜಿ ರಾಮ್ ಜಿ ಕಾಯ್ದೆ ವಿರೋಧಿಸಿ ಸ್ವಾತಂತ್ರ್ಯ ಉದ್ಯಾನದಲ್ಲಿ ಮಂಗಳವಾರ ನಡೆದ ಕಾಂಗ್ರೆಸ್ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ಗಾಂಧೀಜಿ ಅವರನ್ನು ಆರ್‌ಎಸ್‌ಎಸ್‌ನ ಗೋಡ್ಸೆ ಕೊಂದರು. ಈಗ ಆರ್‌ಎಸ್‌ಎಸ್‌ ಪ್ರೋತ್ಸಾಹದಿಂದಲೇ ಎರಡನೇ ಬಾರಿಗೆ ಹತ್ಯೆ ಮಾಡಿದ್ದಾರೆ. ಗಾಂಧೀಜಿ ಅವರ ಶ್ರಮ ಸಂಸ್ಕೃತಿಯ ರೂಪದಂತಿರುವ ಮನರೇಗಾ ಯೋಜನೆ ರದ್ದುಪಡಿಸಿ ಹೊಸ ಕಾಯ್ದೆ ತರಲು ಬಿಡುವುದಿಲ್ಲ. ಗಾಂಧೀಜಿ ಅವರ ಹೆಸರನ್ನು ಪಂಚಾಯಿತಿಗಳಿಗೆ ಇಡುತ್ತೇವೆ ಎಂದರು.

ಇದೇ ವಿಚಾರವಾಗಿ ಚರ್ಚಿಸಲು ವಿಶೇಷ ಅಧಿವೇಶನ ಕರೆದಿದ್ದೇವೆ. ಹೊಸ ಕಾಯ್ದೆ ವಿರುದ್ಧ ನಿರ್ಣಯ ತೆಗೆದುಕೊಳ್ಳುತ್ತೇವೆ ಎಂದರು.

ಈ ಹಿಂದೆ ಕೇಂದ್ರ ಸರ್ಕಾರ ಕೃಷಿ ಕಾಯ್ದೆಗಳಿಗೆ ತಿದ್ದುಪಡಿ ತಂದಾಗ ರೈತರು ಹೋರಾಟ ಮಾಡಿದ್ದರಿಂದ ವಾಪಸ್ ಪಡೆಯಲಾಯಿತು. ಈಗ ಕಾರ್ಮಿಕರು, ರೈತರೊಂದಿಗೆ ಸೇರಿ ಕಾಯ್ದೆ ಹಿಂಪಡೆಯುವವರೆಗೂ ಹೋರಾಟ ನಿಲ್ಲಿಸೋಲ್ಲ ಎಂದರು.

ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಮಾತನಾಡಿ, ಗ್ರಾಮಪಂಚಾಯಿತಿಗಳೇ ಉದ್ಯೋಗ ಬೇಡಿಕೆ ಆಧರಿಸಿ ಯೋಜನೆ ರೂಪಿಸಿ ವಾರ್ಷಿಕ ಅನುದಾನ ಪಡೆಯಬಹುದಿತ್ತು. ಹೊಸ ಕಾಯ್ದೆ ಪ್ರಕಾರ ಗ್ರಾಮಪಂಚಾಯಿತಿಗಳಿಗೆ ಯೋಜನೆ ನೀಡುವ ಅಧಿಕಾರವೇ ಇರುವುದಿಲ್ಲ. ಕೇಂದ್ರ ಸರ್ಕಾರದ ಅಧಿಕಾರಿಗಳೇ ದೆಹಲಿಯಲ್ಲಿ ಕುಳಿತು ಯೋಜನೆ ರೂಪಿಸಿಲಿದ್ದಾರೆ. ಯುಪಿಎ ಸರ್ಕಾರ ಜಾರಿಗೊಳಿಸದ ಉದ್ದೇಶವನ್ನೇ ಬಿಜೆಪಿ ಸರ್ಕಾರ ಧ್ವಂಸಗೊಳಿಸಿದೆ ಎಂದರು. ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ನೇತೃತ್ಬದಲ್ಲಿ ಲೋಕಭವನಕ್ಕೆ ತೆರಳಿ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.


ಬಿಜೆಪಿ-ಎನ್‌ಡಿಎ ಸೇರಿ ಗಾಂಧೀಜಿಯನ್ನು ಕೊಲ್ಲುತ್ತಿರುವುದು: ಡಿಸಿಎಂ

ಗಾಂಧೀಜಿಯನ್ನು ಗೋಡ್ಸೆ ಅಲ್ಲ, ಬಿಜೆಪಿ ಹಾಗೂ ಎನ್‌ಡಿಎ ಅವರು ಸೇರಿ ಕೊಲ್ಲುತ್ತಿರುವುದು ಎಂದು ಡಿಸಿಎಂ ಡಿಕೆ ಶಿವಕುಮಾರ್ ಅವರು ವಾಗ್ದಾಳಿ ನಡೆಸಿದರು. ಮನರೇಗಾ ಮರುಜಾರಿ ಮಾಡುವವರೆಗೂ ಹೋರಾಟ ಬಿಡಲ್ಲ ಮನರೇಗಾ ಹೆಸರು ಬದಲಾವಣೆ ವಿರೋಧಿಸಿ ಫ್ರೀಡಂಪಾರ್ಕ್‌ನಿಂದ ರಾಜಭವನದವರೆಗೆ "ರಾಜಭವನ ಚಲೋ - ಮನರೇಗಾ ಬಚಾವೋ ಸಂಗ್ರಾಮ" ಬೃಹತ್ ಪ್ರತಿಭಟನೆ ವೇಳೆ ಡಿಸಿಎಂ ಮಾತನಾಡಿದರು.

ಮನರೇಗಾ ಯೋಜನೆ ಇದು ಬಡವರ ಹಕ್ಕು ಹಾಗೂ ಉದ್ಯೋಗ. ಬಡವರ ಹಕ್ಕಿಗೋಸ್ಕರ ನಾವು ಹೋರಾಟ ಮಾಡುತ್ತಿದ್ದೇವೆ. ಬಡವರಿಗೆ ಮನರೇಗಾ ಅಡಿ ಕೂಲಿ ಕೆಲಸ ಕೊಟ್ಟಿದ್ದು ಮನಮೋಹನ್‌ ಸಿಂಗ್‌ ಅವರ ಸರ್ಕಾರ. 2013ರಲ್ಲಿ ಮನರೇಗಾ ಒಂದು ಉತ್ತಮವಾದ ಯೋಜನೆ ಎಂದು ವಿಶ್ವಬ್ಯಾಂಕ್‌ ಪ್ರಮಾಣಪತ್ರವನ್ನು ಕೊಟ್ಟಿತ್ತು ಎಂದರು.


'ಗಾಂಧಿ ಪ್ರತಿಮೆ ಬಳಿ ಪ್ರತಿಭಟಿಸುವ ಹಕ್ಕು ಅವರಿಗಿಲ್ಲ': 

ಇಂದು ಬಿಜೆಪಿಯವರು ಗಾಂಧಿ ಪ್ರತಿಮೆ ಬಳಿ ಕುಳಿತು ಪ್ರತಿಭಟನೆ ಮಾಡುತ್ತಿದ್ದಾರೆ. ಆದರೆ ಅವರಿಗೆ ಗಾಂಧಿ ಪ್ರತಿಮೆ ಬಳಿ ಕುಳಿತು ಪ್ರತಿಭಟನೆ ಮಾಡುವ ಹಕ್ಕು ಇಲ್ಲ. ಕಚೇರಿಗಳಲ್ಲಿ ಗಾಂಧಿ ಫೋಟೋ ಇಟ್ಟುಕೊಳ್ಳಲು ಆಗುವುದಿಲ್ಲ. ಗಾಂಧೀಜಿಯನ್ನು ಗೋಡ್ಸೇ ಅಲ್ಲ, ಬಿಜೆಪಿ ಹಾಗೂ ಎನ್‌ಡಿಎ ಅವರು ಸೇರಿ ಕೊಲ್ಲುತ್ತಿದ್ದೀರಿ. ಆದರೆ ಯಾವುದೇ ಕಾರಣಕ್ಕೂ ಗಾಂಧೀಜಿ ಅವರನ್ನು ಕೊಲ್ಲಲು ಸಾಧ್ಯವಿಲ್ಲ. ಮನರೇಗಾ ಹಳ್ಳಿಗಳ ಉದ್ಧಾರದ ಯೋಜನೆ. ಗಾಂಧೀಜಿಯವರನ್ನು ನೀವು ದ್ವೇಷದಿಂದ ಕಾಣುತ್ತಿದ್ದೀರಿ. ಅದಕ್ಕೆ ನಮಗೆ ನಿಮ್ಮ ಕಾಯ್ದೆ ಬೇಡವಾಗಿದೆ ಎಂದು ಗುಡುಗಿದರು.


'ನಮ್ಮನ್ನು ಜೈಲಿಗೆ ಹಾಕಿದ್ರೂ ಹೆದರಲ್ಲ'

ಮನರೇಗಾ ಮರು ಜಾರಿ ಮಾಡುವವರೆಗೂ ನಮ್ಮ ಹೋರಾಟ ನಿಲ್ಲೋದಿಲ್ಲ. ನಮ್ಮನ್ನು ಜೈಲಿಗೆ ಹಾಕಿದ್ರೂ ನಾವು ಹೆದರುವುದಿಲ್ಲ. ಗಾಂಧೀಜಿ ಅವರ ಹೆಸರು ಶಾಶ್ವತವಾಗಿ ಉಳಿಯಬೇಕು. ಹಳ್ಳಿಗೊಂದು ಶಾಲೆ, ಸಹಕಾರ ಸಂಘ ಹಾಗೂ ಹಳ್ಳಿಗೊಂದು ಪಂಚಾಯಿತಿ ಇರಬೇಕು ಎಂಬುದು ಗಾಂಧೀಜಿಯವರ ಸಂಕಲ್ಪವಾಗಿತ್ತು. ಮನರೇಗಾ ಮರುಜಾರಿಗಾಗಿ ನಾವು ಹೋರಾಟ ಮುಂದುವರಿಸುತ್ತೇವೆ, ರಾಜ್ಯಪಾಲರವರೆಗೆ ನಿಯೋಗ ಹೋಗುತ್ತದೆ. ಜೊತೆಗೆ ಮುಂದಿನ ದಿನಗಳಲ್ಲಿ ಪ್ರತಿ ತಾಲೂಕಿನಲ್ಲಿ 5 ಕಿ.ಮೀ ಪಾದಯಾತ್ರೆ ಮಾಡುತ್ತೇವೆ. ಇದರಲ್ಲಿ ಎಲ್ಲ ಶಾಸಕರು, ಮಂತ್ರಿಗಳು, ಸಂಸದರು ಭಾಗವಹಿಸುತ್ತಾರೆ. ಎಲ್ಲರೂ ಸೇರಿಕೊಂಡು ಗಾಂಧೀಜಿ ಅವರ ಹೆಸರನ್ನು ಉಳಿಸಬೇಕಿದೆ. ಇದಕ್ಕೆ ಎಲ್ಲರೂ ಕೈಜೋಡಿಸಬೇಕಿದೆ ಎಂದು ಡಿಕೆಶಿಯವರು ಕರೆ ನೀಡಿದರು.

Next Post Previous Post