ಫೆಬ್ರುವರಿಯಿಂದ ಹೊಸ ಪಡಿತರ ಚೀಟಿಗೆ ಅರ್ಜಿ ಆಹ್ವಾನ: ಆಹಾರ ಸಚಿವ ಮುನಿಯಪ್ಪ
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮತನಾಡಿದ ಅವರು, 'ಅನರ್ಹ ಕಾರ್ಡ್‌ಗಳನ್ನು ಗುರುತಿಸಿ ಎಪಿಎಲ್‌ಗೆ ಬದಲಿಸುವ ಕಾರ್ಯ ನಡೆದಿದೆ. ಹಾಗೆಂದು ಹೊಸ ಅರ್ಜಿಗಳ ಸ್ವೀಕಾರವನ್ನು ನಿಲ್ಲಿಸಿಲ್ಲ' ಎಂದು ಹೇಳಿದರು.
'ವೈದ್ಯಕೀಯ ಕಾರಣಗಳಿಗೆ ಬಿಪಿಎಲ್ ಕಾರ್ಡ್ ಪಡೆಯುವವರಿಗೆ ಇಲಾಖೆಯ ಪೋರ್ಟಲ್ ಮುಕ್ತವಾಗಿರಿಸಿದಾಗ ಬೇರೆಯವರೂ ಅರ್ಜಿ ಹಾಕಿದ್ದು, ಅಂತಹ ಮೂರು ಲಕ್ಷ ಅರ್ಜಿಗಳ ಪರಿಶೀಲನೆ ನಡೆಯುತ್ತಿದೆ. ಫೆಬ್ರುವರಿ ತಿಂಗಳಿಂದ ಹೊಸ ಪಡಿತರ ಚೀಟಿಗಳನ್ನು ನೀಡಲು ಅರ್ಜಿ ಆಹ್ವಾನಿಸಲಾಗುತ್ತದೆ' ಎಂದು ತಿಳಿಸಿದರು.
'ಕೇಂದ್ರ ಸರ್ಕಾರ ಪ್ರತಿ ವ್ಯಕ್ತಿಗೆ 5 ಕೆಜಿ ಅಕ್ಕಿ ಜೊತೆಗೆ ರಾಜ್ಯ ಸರ್ಕಾರ ಹೆಚ್ಚುವರಿಯಾಗಿ ಬಿಪಿಎಲ್ ಕಾರ್ಡ್‌ದಾರರಿಗೆ 5 ಕೆ.ಜಿ ಅಕ್ಕಿ ನೀಡಲಾಗುತ್ತಿತ್ತು. ಅಕ್ಕಿ ಬದಲು ದಕ್ಷಿಣ ಕರ್ನಾಟಕದಲ್ಲಿ ರಾಗಿ, ಉತ್ತರ ಕರ್ನಾಟಕದಲ್ಲಿ ಜೋಳ, ತೊಗರಿ ಬೇಳೆ ನೀಡಲು ಮುಂದಾಗಿದ್ದೇವೆ' ಎಂದರು.
ಆದಷ್ಟು ಶೀಘ್ರ ಟೆಂಡರ್ ಕರೆದು ಜೋಳ, ತೊಗರಿ, ರಾಗಿ ವಿತರಿಸಲಾಗುವುದು. ತೊಗರಿ ಖರೀದಿಗೆ ಗುಣಮಟ್ಟವೊಂದೇ ಮಾನದಂಡ. ಆದಾಗ್ಯೂ, ಕಲಬುರಗಿ ಭಾಗದಲ್ಲಿ ಬೆಳೆದ ತೊಗರಿ ಖರೀದಿಸುವಂತೆ ಗುತ್ತಿಗೆದಾರರಿಗೆ ಮೌಖಿಕವಾಗಿ ತಿಳಿಸುತ್ತೇವೆ' ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.