ಪಾಣಾಜೆ :ನುಡಿದಂತೆ ನಡೆದಿದ್ದೇವೆ, ಪುತ್ತೂರಿನ ಸಮಗ್ರ ಅಭಿವೃದ್ಧಿಯೇ ನಮ್ಮ ಗುರಿ: ಶಾಸಕ ಅಶೋಕ್ ರೈ | ಅಕ್ರಮ ಸಕ್ರ‌ಮ ಬೈಠಕ್,ಹಕ್ಕು ಪತ್ರ ವಿತರಣೆ |ಹಿಂದುತ್ವದ ಭಾಷಣ ಮಾಡಿದವರೇ ದೇವಸ್ಥಾನದ ಜಾಗ ಒಳಗೆ ಹಾಕಿದ್ರು


ಪುತ್ತೂರು: ಚುನಾವಣಾ ಸಮಯದಲ್ಲಿ ರಾಜಕೀಯ ಪಕ್ಷಗಳು ಹಾಗೂ ಅಭ್ಯರ್ಥಿಗಳು ಜನರಿಗೆ ನಾನಾ ಭರವಸೆಗಳನ್ನು ನೀಡುತ್ತಾರೆ. ಆದರೆ ಚುನಾವಣೆಯ ಬಳಿಕ ಅವುಗಳನ್ನು ಮರೆತುಬಿಡುತ್ತಾರೆ. ಕೊಟ್ಟ ಮಾತನ್ನು ಉಳಿಸಿಕೊಳ್ಳದಿದ್ದರೆ ಜನ ಗೌರವ ಕೊಡುವುದಿಲ್ಲ ಎಂದು ಶಾಸಕ ಅಶೋಕ್ ರೈ ಹೇಳಿದರು. ಅವರು ಪಾಣಾಜೆ ಸೇವಾ ಸಹಕಾರಿ ಸಂಘದ ಸಭಾಭವನದಲ್ಲಿ ನಡೆದ ತಾಲೂಕು ಮಟ್ಟದ ಅಕ್ರಮ–ಸಕ್ರಮ ಬೈಠಕ್ ಉದ್ಘಾಟಿಸಿ ಮಾತನಾಡಿದರು.

ಕಾಂಗ್ರೆಸ್ ಪಕ್ಷ ಕಳೆದ ಚುನಾವಣಾ ಸಂದರ್ಭದಲ್ಲಿ ನೀಡಿದ್ದ ಪಂಚ ಗ್ಯಾರಂಟಿ ಭರವಸೆಗಳನ್ನು ಅಧಿಕಾರ ವಹಿಸಿಕೊಂಡ ಮೂರೇ ತಿಂಗಳಲ್ಲಿ ಈಡೇರಿಸಿದೆ. ಕಳೆದ ಚುನಾವಣೆಯಲ್ಲಿ ನಾನು ನನ್ನ ಕ್ಷೇತ್ರದ ಜನತೆಗೆ ಐದು ಭರವಸೆಗಳನ್ನು ನೀಡಿದ್ದೆ. ಅವುಗಳಲ್ಲಿ ನಾಲ್ಕನ್ನು ಈಡೇರಿಸಿದ್ದೇನೆ. ಇನ್ನೊಂದು ಭರವಸೆ ಪ್ರಗತಿಯ ಹಂತದಲ್ಲಿದ್ದು, ಕೊಟ್ಟ ಮಾತುಗಳನ್ನು ಸಂಪೂರ್ಣವಾಗಿ ಈಡೇರಿಸುವ ಹಂಬಲ ನನ್ನದು ಎಂದು ಶಾಸಕರು ತಿಳಿಸಿದರು.






ಪುತ್ತೂರಿಗೆ ಮೆಡಿಕಲ್ ಕಾಲೇಜು, ದೇವಸ್ಥಾನಗಳ ಅಭಿವೃದ್ಧಿ, ಅಕ್ರಮ–ಸಕ್ರಮ 94ಸಿ ಹಕ್ಕುಪತ್ರ ವಿತರಣೆ, ನಿವೇಶನ ರಹಿತರಿಗೆ ನಿವೇಶನ ಹಂಚಿಕೆ, ತಾಲೂಕು ಕ್ರೀಡಾಂಗಣ ಸೇರಿದಂತೆ ಹತ್ತು ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ. ಜನರು ಇದನ್ನು ಸ್ವೀಕರಿಸಿದ್ದಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.


ಮುಂದಿನ ಮೂರು ವರ್ಷದಲ್ಲಿ 30 ಸಾವಿರ ಉದ್ಯೋಗ ಸೃಷ್ಟಿ

ಮುಂದಿನ ಮೂರು ವರ್ಷಗಳಲ್ಲಿ ಪುತ್ತೂರಿನಲ್ಲಿ ಸುಮಾರು 30 ಸಾವಿರ ಉದ್ಯೋಗಗಳು ಸೃಷ್ಟಿಯಾಗಲಿವೆ. ಮೆಡಿಕಲ್ ಕಾಲೇಜು ನಿರ್ಮಾಣದಿಂದ 8 ಸಾವಿರ, ಕೆಎಂಎಫ್‌ನಿಂದ 7 ಸಾವಿರ ಉದ್ಯೋಗಗಳು ಲಭ್ಯವಾಗಲಿವೆ. ಜೊತೆಗೆ ಆಯುರ್ವೇದ ಕಾಲೇಜು, ಫಿಸಿಯೋಥೆರಪಿ ಕಾಲೇಜು, ಪಶುವೈದ್ಯಕೀಯ ಕಾಲೇಜು, ಆರ್‌ಟಿಒ ಟ್ರ್ಯಾಕ್ ಸೇರಿದಂತೆ ಹಲವು ಉದ್ಯಮಗಳು ಪುತ್ತೂರಿಗೆ ಬರಲಿದ್ದು, ಇದರಿಂದ ಉದ್ಯೋಗಾವಕಾಶಗಳು ಹೆಚ್ಚಾಗಲಿವೆ ಎಂದು ಶಾಸಕರು ಹೇಳಿದರು.






ಉಳ್ಳವರಿಗೆ ಮಾತ್ರ ಸಕ್ರಮ? ಬಡವರಿಗೂ ನ್ಯಾಯ

ಈ ಹಿಂದೆ ನೂರಾರು ಅಕ್ರಮ–ಸಕ್ರಮ ಪ್ರಕರಣಗಳು ನಡೆದಿದ್ದರೂ ಬಡವರ ಕಡತಗಳು ಕಚೇರಿಯ ಕಪಾಟಿನಲ್ಲೇ ಉಳಿದಿದ್ದವು. ಹಣ ಕೊಟ್ಟವರಿಗೆ ಮಾತ್ರ ಭೂಮಿ ಸಕ್ರಮವಾಗುತ್ತಿತ್ತು. ನಾನು ಶಾಸಕನಾದ ಬಳಿಕ ಆ ಪದ್ಧತಿಗೆ ಬ್ರೇಕ್ ಹಾಕಿದ್ದೇನೆ. ಜನರಿಂದ ಮರೆಯಾಗಿ ನಡೆಯುತ್ತಿದ್ದ ಬೈಠಕ್ ಈಗ ಗ್ರಾಮದಲ್ಲೇ ಲೈವ್ ಆಗಿ ನಡೆಯುತ್ತಿದೆ. ಮುಂದೆಯೂ ಇದೇ ರೀತಿ ನಡೆಯಲಿದೆ. ನಿಮ್ಮ ಮನೆಯ ಅಡಿಸ್ಥಳಕ್ಕೆ ಹಕ್ಕುಪತ್ರ ಕೊಟ್ಟೇ ಕೊಡುತ್ತೇನೆ. ಸ್ವಾಧೀನದಲ್ಲಿರುವ ಜಾಗವನ್ನು ಸಕ್ರಮಗೊಳಿಸಿ ಕೊಡಲು ಬದ್ಧನಾಗಿದ್ದೇನೆ. ಚುನಾವಣೆಯಲ್ಲಿ ನಿಮ್ಮ ಆಶೀರ್ವಾದ ದೊರೆತರೆ ಇನ್ನಷ್ಟು ಅಭಿವೃದ್ಧಿ ಕೆಲಸ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.


ಹಿಂದುತ್ವದ ಭಾಷಣ ಮಾಡಿದವರೇ ದೇವಸ್ಥಾನದ ಜಾಗ ಒಳಗೆ ಹಾಕಿದ್ರು:

ಮೈಕ್ ಸಿಕ್ಕರೆ ಸಾಕು ಹಿಂದುತ್ವದ ಭಾಷಣ ಮಾಡುವವರು ಇದ್ದರು. ಭುಜಕ್ಕೆ ಶಾಲು ಹಾಕಿಕೊಂಡು ಧರ್ಮದ ಬಗ್ಗೆ ಮಾತನಾಡಿದವರು ಬಳಿಕ ದೇವಾಲಯದ ಜಾಗವನ್ನು ಕಬಳಿಸಿ ಮನೆ ಕಟ್ಟಿಸಿ ಬಾಡಿಗೆಗೆ ಕೊಟ್ಟಿದ್ದರು. ಅಂತಹವರಿಗೆ ತಕ್ಕ ಪಾಠ ಕಲಿಸಲಾಗಿದೆ. ಭಕ್ತರ ಆಸೆಯಂತೆ ಮುಂದಿನ ದಿನಗಳಲ್ಲಿ ದೇವಾಲಯಗಳ ಅಭಿವೃದ್ಧಿ ನಡೆಯಲಿದೆ. ದೇವರ ಜಾಗವನ್ನು ಕಬಳಿಸಲು ಯಾರಿಗೂ ಬಿಡುವುದಿಲ್ಲ ಎಂದು ಶಾಸಕರು ಎಚ್ಚರಿಸಿದರು.



ಬಡವರ ಕೆಲಸ ಮಾಡದ ಅಧಿಕಾರಿಗಳು ಇಲ್ಲಿಗೆ ಬೇಡ

ಯಾವುದೇ ಅಧಿಕಾರಿಯಾದರೂ ಕ್ಷೇತ್ರದ ಜನರ ಕೆಲಸ ಮಾಡಬೇಕು. ಅದರಲ್ಲೂ ಬಡವರ ಕೆಲಸವನ್ನು ಚಾಚೂ ತಪ್ಪದೆ ಮಾಡಬೇಕು. ಕೆಲಸ ಮಾಡದ ಅಧಿಕಾರಿಗಳು ಇಲ್ಲಿರುವುದು ಬೇಡ. ಜನರ ಕೆಲಸದಲ್ಲಿ ನಿರ್ಲಕ್ಷ್ಯ ತೋರಿದರೆ ನನ್ನಿಂದ ಬೈಗುಳ ಕೇಳಬೇಕಾಗುತ್ತದೆ ಎಂದು ಎಚ್ಚರಿಸಿದರು. ಪುತ್ತೂರಿನಲ್ಲಿ ಬಹುತೇಕ ಅಧಿಕಾರಿಗಳು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.


ಅಕ್ರಮ–ಸಕ್ರಮ ಸಮಿತಿ ಸದಸ್ಯ ಮಹಮ್ಮದ್ ಬಡಗನ್ನೂರು ಮಾತನಾಡಿ, ನುಡಿದಂತೆ ನಡೆಯುವ ಜಿಲ್ಲೆಯ ಏಕೈಕ ಶಾಸಕ ಅಶೋಕ್ ರೈ ಎಂದು ಹೇಳಿದರು. ಸುಳ್ಯ, ಬೆಳ್ತಂಗಡಿ ಮತ್ತು ಬಂಟ್ವಾಳ ಕ್ಷೇತ್ರಗಳ ಜನರು ಕೂಡ ತಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ಅಶೋಕ್ ರೈ ಅವರ ಬಳಿ ಬರುತ್ತಿರುವುದೇ ಇದಕ್ಕೆ ಸಾಕ್ಷಿ ಎಂದರು. ಜಿಲ್ಲೆಯ ಬಿಜೆಪಿ ಶಾಸಕರು ಕುಮ್ಮಿ ವಿಚಾರದಲ್ಲಿ ಅಶೋಕ್ ರೈ ಅವರೊಂದಿಗೆ ಸೇರಿ ಹೋರಾಟ ನಡೆಸಬೇಕು ಎಂದು ಮನವಿ ಮಾಡಿದರು.

ತಹಶೀಲ್ದಾರ್ ಕೂಡ್ಲಿಗಿ ಮಾತನಾಡಿ, ಬಡವರ ಪರ ಇರುವ ಶಾಸಕರನ್ನು ಆಯ್ಕೆ ಮಾಡಿದ ಪುತ್ತೂರಿನ ಜನತೆ ಭಾಗ್ಯವಂತರು. ಅವರನ್ನು ಇನ್ನಷ್ಟು ದಿನ ಶಾಸಕರಾಗಿ ಉಳಿಸಿಕೊಂಡು ಕ್ಷೇತ್ರದ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಹೇಳಿದರು.

ವೇದಿಕೆಯಲ್ಲಿ ಅಕ್ರಮ–ಸಕ್ರಮ ಸಮಿತಿ ಸದಸ್ಯರಾದ ರಾಮಣ್ಣ ಪಿಲಿಂಜ, ರೂಪರೇಖಾ ಆಳ್ವ, ಪಾಣಾಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಮೈಮೂನತುಲ್ ಮೆಹ್ರಾ ಉಪಸ್ಥಿತರಿದ್ದರು. ಕಂದಾಯ ನಿರೀಕ್ಷಕ ಗೋಪಾಲ ಸ್ವಾಗತಿಸಿದರು. ಡಿ.ಟಿ. ರವಿಕುಮಾರ್ ವಂದಿಸಿದರು. ಗ್ರಾಮ ಆಡಳಿತಾಧಿಕಾರಿ ಮಂಜುನಾಥ್ ಬಿ, ದೇವಸ್ಥಾನ ಆಡಳಿತ ಮೊಕ್ತೆಸರ ಶ್ರೀ ಕೃಷ್ಣ ಬೋಳಿಲ್ಲಾಯ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ಉಪಾಧ್ಯಕ್ಷ ಡಾ ಹಾಜಿ ಎಸ್ ಅಬೂಬಕ್ಕರ್ ಆರ್ಲಪದವು, ಲಕ್ಷ್ಮಿ ನಾರಾಯಣ ರೈ ಕೆದಂಬಾಡಿ, ಬಾಬುರೈ ಕೋಟೆ, ಸಿಎ ಬ್ಯಾಂಕ್ ಅಧ್ಯಕ್ಷ ಪದ್ಮನಾಭ ಬೋರ್ಕರ್ ಆರ್ಯಾಪು ಕಾಂಗ್ರೆಸ್ ವಲಯ ಅಧ್ಯಕ್ಷ ಗಿರೀಶ್ ರೈ ಕೈಕಾರ, ಪಾಣಾಜೆ ವಲಯ ಅಧ್ಯಕ್ಷ ಸದಾನಂದ ನಾಯ್ಕ ಭರಣ್ಯ, ಗ್ರಾಮ ಪಂಚಾಯತ್ ಸದಸ್ಯರಾದ ವಿಮಲಾ, ಸುಭಾಷ್ ರೈ ಚಂಬರಕಟ್ಟೆ, ಮೈದೀನ್ ಕುಂಞಿ ಬೆಟ್ಟಂಪಾಡಿ, ವಿಶ್ವನಾಥ ರೈ ಕಡಮಜೆ, ಸರಸ್ವತಿ ಜಿ, ಅದ್ರು  ಬೊಳ್ಳಿಂಬಳ, ಅಶೋಕ್ ಕುಮಾರ್ ಸಂಪ್ಯ, ಅಬೂಬಕ್ಕರ್ ಕೋರಿಂಗಿಲ, ಮೂಸೆ ಕುಂಞಿ ಹಾಜಿ ಕಂಚಿಲ್ಕುಂಜ, ವಿಶ್ವನಾಥ ಪೂಜಾರಿ ಉಡ್ಡಂಗಳ ,  ಪಾಣಾಜೆ ಗ್ರಾಮ ಪಂಚಾಯತಿ ಪಿಡಿಒ ಆಶಾ,  ಬಿಜಿ ಪ್ರಸನ್ನ, ಪ್ರೀತಂ, ಸುನಿತಾ, ಸರೋಜಾ, ರಾಧಾಕೃಷ್ಣ, ಅಶ್ವಿನಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Next Post Previous Post