ತಮಿಳುನಾಡು: ನಟ ವಿಜಯ್ ನೇತೃತ್ವದ ಟಿವಿಕೆ ಜತೆ ಮೈತ್ರಿ ಇಲ್ಲ: ಕಾಂಗ್ರೆಸ್
ತಮಿಳುನಾಡು: ಈ ವರ್ಷ ತಮಿಳುನಾಡಿನಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ, ನಟ ವಿಜಯ್ ನೇತೃತ್ವದ ತಮಿಳಿಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆಯನ್ನು ಕಾಂಗ್ರೆಸ್ ತಳ್ಳಿ ಹಾಕಿದೆ.
ರಾಜ್ಯ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ.ಸೆಲ್ವಪೆರುಂತಗೈ ಹಾಗೂ ತಮಿಳುನಾಡು ರಾಜ್ಯ ಕಾಂಗ್ರೆಸ್‌ನ ಎಐಸಿಸಿ ಉಸ್ತುವಾರಿ ಗಿರೀಶ್ ಚೋಡಂಕರ್ ಅವರು ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
‘ಆಡಳಿತಾರೂಢ ಡಿಎಂಕೆ ವಿಶ್ವಾಸಾರ್ಹ ಮತ್ತು ದೀರ್ಘಕಾಲದ ಮಿತ್ರಪಕ್ಷವಾಗಿದೆ. ನಾವು ಟಿವಿಕೆಯೊಂದಿಗೆ ಮೈತ್ರಿ ಮಾಡಿಕೊಳ್ಳುತ್ತಿಲ್ಲ. ಸೀಟು ಹಂಚಿಕೆ ಸೇರಿದಂತೆ ಚುನಾವಣೆಗೆ ಸಂಬಂಧಿಸಿದ ಎಲ್ಲ ವಿಷಯಗಳ ಬಗ್ಗೆ ಶೀಘ್ರವೇ ಡಿಎಂಕೆ ನಾಯಕರು ನಿರ್ಧಾರ ಕೈಗೊಳ್ಳಲಿದ್ದಾರೆ’ ಎಂದು ಹೇಳಿದರು.
‘ಕಾಂಗ್ರೆಸ್ ಪಕ್ಷವು ಡಿಎಂಕೆಯೊಂದಿಗೆ ಮೈತ್ರಿ ಮಾಡಿಕೊಳ್ಳುತ್ತಿಲ್ಲ ಎಂದು ನಿಮಗೆ ಯಾರಾದರು ಹೇಳಿದ್ದಾರೆಯೇ’ ಎಂದೂ ಪ್ರಶ್ನಿಸಿದರು.
‘ಡಿಎಂಕೆಯೊಂದಿಗೆ ಮೈತ್ರಿ ಮಾಡಿಕೊಳ್ಳಲು ಕಾಂಗ್ರೆಸ್ ಆಸಕ್ತಿ ಹೊಂದಿದ್ದರಿಂದ, ಸೀಟು ಹಂಚಿಕೆ ಕುರಿತು ಮಾತುಕತೆ ನಡೆಸಲು ಒಂದೂವರೆ ತಿಂಗಳ ಹಿಂದೆ ಸಮಿತಿಯನ್ನು ರಚಿಸಿತು’ ಎಂದರು.