ಸ್ಪೀಕರ್ ಯು.ಟಿ ಖಾದರ್ ಅಭಿವೃದ್ಧಿ ಕೆಲಸ ನೋಡಿ ಶಾಸಕ ಭರತ್ ಶೆಟ್ಟಿಗೆ ಹೊಟ್ಟೆ ಉರಿ, ಕೋವಿಡ್ ಸಂದರ್ಭದ ಹಗರಣದ ಬಗ್ಗೆ ಉತ್ತರಿಸಿ : ಬಶೀರ್ ಸಾವಲು


ಮಂಗಳೂರು: ಸ್ಪೀಕರ್ ಯುಟಿ ಖಾದರ್ ಅವರ ಅಭಿವೃದ್ಧಿ ಕೆಲಸ ನೋಡಿ ಶಾಸಕ ಭರತ್ ಶೆಟ್ಟಿಗೆ ಹೊಟ್ಟೆ ಉರಿಯಾಗಿದೆ ಎಂದು ದ.ಕ ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ಬಶೀರ್ ಹೇಳಿದ್ದಾರೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ತಮ್ಮ ಕ್ಷೇತ್ರದ ರಸ್ತೆ ಅಭಿವೃದ್ಧಿ ಬಗ್ಗೆ ಮಾತನಾಡದ ಶಾಸಕ ಡಾ.ಭರತ್ ಶೆಟ್ಟಿ, ರಸ್ತೆ ಅಪಘಾತದಲ್ಲಿ ಮೃತಪಟ್ಟ ಮಹಿಳೆಯ ಮನೆಗೆ ಪರಿಹಾರ ಬಿಡಿ, ಕನಿಷ್ಠ ಸಾಂತ್ವನ ಹೇಳಲು ಹೋಗಿಲ್ಲ ಎಂದು ಕಿಡಿಕಾರಿದರು.

ಕೋವಿಡ್ ಸಂದರ್ಭದಲ್ಲಿ ಬಿಜೆಪಿ ಸರಕಾರದ ಅವಧಿಯಲ್ಲಿ ವೈದ್ಯಕೀಯ ಪರಿಕರಗಳ ಖರೀದಿಯಲ್ಲಿ ನಡೆದ 7200 ಕೋಟಿ ರೂ.ಗಳ ಭ್ರಷ್ಟಾಚಾರ ಹಗರಣದ ಬಗ್ಗೆ ಆ ಅವಧಿಯಲ್ಲಿ ಶಾಸಕರಾಗಿದ್ದವರು ಉತ್ತರಿಸಲಿ ಎಂದು ಸವಾಲು ಹಾಕಿದರು.

ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ 70 ಕೋಟಿರೂ. ವೆಚ್ಚದಲ್ಲಿ ಮಂಜೂರು ಆಗಿದ್ದ ಮಾರುಕಟ್ಟೆ ಕಾಮಗಾರಿಯನ್ನು ಎರಡು ಅವಧಿಯಲ್ಲಿ ಪೂರ್ಣಗೊಳಿಸಲುಸಾಧ್ಯವಾಗದೆ ಅದರ ವೆಚ್ಚ 120 ಕೋಟಿ ರೂ.ಗಳಿಗೆ ಏರಿಕೆಯಾಗಿದೆ. ಕ್ಲಪ್ತ ಸಮಯದಲ್ಲಿ ವೆಚ್ಚ ಏರಿಕೆಯಾಗುತ್ತಿರಲಿಲ್ಲ. ಅದನ್ನೆಲ್ಲಾ ಮರೆಮಾಚಿ ಸ್ಪೀಕರ್ ವಿರುದ್ಧ ಮಾತನಾಡುವುದು ಸರಿಯಲ್ಲ. ಯು.ಟಿ.ಖಾದರ್ ಅವರು 5 ಬಾರಿ ಶಾಸಕರು, ಸಚಿವರಾಗಿದ್ದು, ಪ್ರತಿಭಾವಂತ, ದಕ್ಷ ರಾಜಕಾರಣಿ. ಆ ಕಾರಣದಿಂದ ಅವರಿಗೆ ವಿಧಾನಸಭೆ ಸ್ಪೀಕರ್ ಸ್ಥಾನ ಒಲಿದು ಬಂದಿದ್ದು, ಅವರು ಸ್ಪೀಕರ್ ಆದ ಮೇಲೆ ತನ್ನ ಕಾರ್ಯವ್ಯಾಪ್ತಿಯೊಳಗೆ ಉತ್ತಮವಾಗಿ ಕಾರ್ಯನಿರ್ವಹಿಸಿ ಸದನದ ಗೌರವ ಮತ್ತಷ್ಟು ಹೆಚ್ಚಿಸಿದ್ದಾರೆ. ಇಂತಹ ವ್ಯಕ್ತಿಯ ವಿರುದ್ಧ ಶಾಸಕ ಡಾ.ಭರತ್ ಶೆಟ್ಟಿ ವಿನಾ ಕಾರಣ ಸುಳ್ಳು ಆರೋಪ ಮಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ.
Next Post Previous Post