ಏನಾದ್ರೂ ಮಾಡಿ ವಾಂಗ್ಚುಕ್ ಪ್ರಾಣ ಉಳಿಸಿ!...ಕೇಂದ್ರ ಸರ್ಕಾರಕ್ಕೆ ದೆಹಲಿ ಹೈಕೋರ್ಟ್ ಕಟ್ಟುನಿಟ್ಟಿನ ಆದೇಶ | Sonam Wangchuk
ನವದೆಹಲಿ: ಕಳೆದ 19 ದಿನಗಳಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಪ್ರಖ್ಯಾತ ಸಾಮಾಜಿಕ ಹೋರಾಟಗಾರ ಸೋನಮ್ ವಾಂಗ್ಚುಕ್ ಅವರ ಆರೋಗ್ಯ ಮತ್ತು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವಂತೆ ದೆಹಲಿ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ಮಹತ್ವದ ನಿರ್ದೇಶನ ನೀಡಿದೆ. ಪ್ರತಿಯೊಬ್ಬ ಪ್ರಜೆಯ ಜೀವವೂ ಅತ್ಯಂತ ಅಮೂಲ್ಯವಾಗಿದ್ದು, ವಾಂಗ್ಚುಕ್ ಅವರ ಪ್ರಾಣ ಉಳಿಸಲು ಅಗತ್ಯವಿರುವ ಎಲ್ಲಾ ತುರ್ತು ಚಿಕಿತ್ಸೆ ಹಾಗೂ ವೈದ್ಯಕೀಯ ನೆರವನ್ನು ತಕ್ಷಣವೇ ಒದಗಿಸಬೇಕು ಎಂದು ನ್ಯಾಯಾಲಯ ಆದೇಶಿಸಿದೆ.
ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಕಾಕ್ರೋಚ್ ಜನತಾ ಪಾರ್ಟಿ (CJP) ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಭಾಗಿಯಾಗಿ ವಾಂಗ್ಚುಕ್ ಈ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದಾರೆ.
ಸರ್ಕಾರದ ವೈದ್ಯಕೀಯ ಮೇಲ್ವಿಚಾರಣೆಗೆ ನ್ಯಾಯಾಲಯದ ತರಾಟೆ
ವಿಚಾರಣೆಯ ವೇಳೆ ಕೇಂದ್ರ ಸರ್ಕಾರದ ಪರವಾಗಿ ಹಾಜರಿದ್ದ ಸೊಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರನ್ನು ಪ್ರಶ್ನಿಸಿದ ಹೈಕೋರ್ಟ್, ವಾಂಗ್ಚುಕ್ ಅವರ ಆರೋಗ್ಯ ಸ್ಥಿತಿಯನ್ನು ನಿಯಮಿತವಾಗಿ ಮೇಲ್ವಿಚಾರಣೆ ಮಾಡಲು ಸೂಕ್ತ ವ್ಯವಸ್ಥೆ ಇಲ್ಲದಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿತು. ತಪಾಸಣೆ ನಡೆಸುತ್ತಿರುವ ವೈದ್ಯರು ಕೇವಲ ಸರ್ಕಾರಿ ಸಂಸ್ಥೆಗಳಿಗೆ ಸೇರಿದವರಲ್ಲ, ಕೆಲವೊಮ್ಮೆ ಖಾಸಗಿ ವೈದ್ಯರೂ ತಪಾಸಣೆ ನಡೆಸುತ್ತಿದ್ದಾರೆ ಎಂಬ ಅಂಶ ಬೆಳಕಿಗೆ ಬಂದಾಗ ನ್ಯಾಯಾಲಯ ಖಾರವಾಗಿ ಪ್ರತಿಕ್ರಿಯಿಸಿತು.
ವಾಂಗ್ಚುಕ್ ಅವರಿಗೆ ಪ್ರತಿದಿನ ಸರ್ಕಾರಿ ವೈದ್ಯರಿಂದಲೇ ನಿಯಮಿತವಾಗಿ ಆರೋಗ್ಯ ತಪಾಸಣೆ ನಡೆಯಬೇಕು ಮತ್ತು ವೈದ್ಯಕೀಯ ವರದಿಗಳ ಆಧಾರದ ಮೇಲೆ ಅಗತ್ಯವಿರುವ ಎಲ್ಲಾ ಔಷಧೋಪಚಾರಗಳನ್ನು ತಕ್ಷಣವೇ ಒದಗಿಸಬೇಕು ಎಂದು ಕೋರ್ಟ್ ಸ್ಪಷ್ಟಪಡಿಸಿತು.
ಬಲವಂತದ ದ್ರವಾಹಾರ ನೀಡಲು ಅರ್ಜಿಯಲ್ಲಿ ಮನವಿ
ಉಪವಾಸ ಸತ್ಯಾಗ್ರಹದಿಂದಾಗಿ ವಾಂಗ್ಚುಕ್ ಅವರು ಈಗಾಗಲೇ ಸುಮಾರು 8.5 ಕೆಜಿ ತೂಕ ಕಳೆದುಕೊಂಡಿದ್ದು, ಮುಂದಿನ 48 ಗಂಟೆಗಳ ಕಾಲ ಅವರ ಸ್ಥಿತಿ ನಿರ್ಣಾಯಕವಾಗಿದೆ ಎಂದು ಬುಧವಾರ ಸಲ್ಲಿಸಲಾಗಿದ್ದ ಅರ್ಜಿಯ ಆಧಾರದ ಮೇಲೆ ನ್ಯಾಯಾಲಯ ಈ ಆದೇಶ ನೀಡಿದೆ. ವಾಂಗ್ಚುಕ್ ಅವರನ್ನು ತಕ್ಷಣವೇ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಅವರ ಜೀವ ಉಳಿಸಲು ಅಗತ್ಯವಿರುವ ಪೋಷಕಾಂಶಗಳು ಹಾಗೂ ವಿಟಮಿನ್‌ಗಳನ್ನೊಳಗೊಂಡ ದ್ರವಾಹಾರವನ್ನು ಬಲವಂತವಾಗಿ ನೀಡಲು ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದರು. ಶಾಂತಿಯುತ ಪ್ರತಿಭಟನೆ ಪ್ರಜೆಗಳ ಹಕ್ಕಾಗಿದ್ದರೂ, ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿರುವ ಈ ಹೋರಾಟದಲ್ಲಿ ಯಾವುದೇ ಅಹಿತಕರ ಘಟನೆ ಸಂಭವಿಸಿದರೆ ಅದು ದೇಶಕ್ಕೆ ಮುಜುಗುರ ತರಲಿದೆ ಎಂದು ಅರ್ಜಿಯಲ್ಲಿ ವಾದಿಸಲಾಗಿತ್ತು.
ಹೋರಾಟ ಮುಂದುವರಿಸಲು ವಾಂಗ್ಚುಕ್ ದೃಢ ನಿರ್ಧಾರ
ನ್ಯಾಯಾಲಯದ ಆದೇಶಕ್ಕೂ ಮುನ್ನ ವೀಡಿಯೋ ಸಂದೇಶವೊಂದನ್ನು ಹಂಚಿಕೊಂಡಿರುವ ಸೋನಮ್ ವಾಂಗ್ಚುಕ್, ದೀರ್ಘಾವಧಿ ಉಪವಾಸದಿಂದಾಗಿ ದೈಹಿಕವಾಗಿ ನಿಃಶಕ್ತಿ ಹಾಗೂ ಸ್ನಾಯುಗಳ ಬಳಲಿಕೆ ಇದ್ದರೂ ತಮ್ಮ ಮನೋಬಲ ದೃಢವಾಗಿದೆ ಎಂದಿದ್ದಾರೆ. ಸರ್ಕಾರದ ಕಡೆಯಿಂದ ಯಾವುದೇ ಧನಾತ್ಮಕ ಸ್ಪಂದನೆ ಸಿಗದೆ ಸತ್ಯಾಗ್ರಹ ಹಿಂಪಡೆದರೆ ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗುತ್ತದೆ ಎಂದು ಅವರು ಹಿರಿಯ ನಾಯಕರ ಮನವಿಯನ್ನೂ ತಿರಸ್ಕರಿಸಿದ್ದಾರೆ.
"ನನ್ನ ಪರಿಸ್ಥಿತಿ ತೀರಾ ಹದಗೆಟ್ಟಿಲ್ಲ, ಹಾಗಾಗಿಯೇ ನಾನು ಇನ್ನೂ ಹಲವು ದಿನಗಳ ಕಾಲ ಹೆಜ್ಜೆಹಾಕಬಲ್ಲೆ. ಬರಿ ಉಪವಾಸ ಅಂತ್ಯಗೊಳಿಸಿ ಎಂದು ಹೇಳುವ ಬದಲು, ಜುಲೈ 20 ರಂದು ಜಂತರ್ ಮಂತರ್‌ನಲ್ಲಿ ನಡೆಯಲಿರುವ ಬೃಹತ್ ಪ್ರತಿಭಟನಾ ದಿನದಂದು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸರ್ಕಾರಕ್ಕೆ ಸ್ಪಷ್ಟ ಸಂದೇಶ ರವಾನಿಸಬೇಕು," ಎಂದು ಅವರು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಕರೆ ನೀಡಿದ್ದಾರೆ.
ಪ್ರಧಾನ್ ರಾಜೀನಾಮೆಗೆ ಸಿಜೆಪಿ ಪಟ್ಟು
ಮೇ 3 ರಂದು ನಡೆದ ನೀಟ್ ಸೇರಿದಂತೆ ಪ್ರಮುಖ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ಸೋರಿಕೆಯನ್ನು ಖಂಡಿಸಿ ಅಭಿಜೀತ್ ದೀಪ್ಕೆ ನೇತೃತ್ವದ ಕಾಕ್ರೋಚ್ ಜನತಾ ಪಾರ್ಟಿ (CJP) ಈ ಹೋರಾಟವನ್ನು ತೀವ್ರಗೊಳಿಸಿದೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ತಕ್ಷಣವೇ ರಾಜೀನಾಮೆ ನೀಡಬೇಕು ಅಥವಾ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕು ಎಂದು ಪಕ್ಷವು ಒತ್ತಾಯಿಸಿದೆ.