ಮೈಸೂರು ದಸರಾ ಕಂಬಳ.ಇತಿಹಾಸ ಪುಟದಲ್ಲಿ ಸುವರ್ಣ ಹೆಜ್ಜೆ. ಇಬ್ರಾಹಿಂ ಗೋಳಿಕಟ್ಟೆ
"ಅಡೆತಡೆಗಳ ಸವಾಲು ಏನೇ ಇರಲಿ, ಶಾಸಕ ಅಶೋಕ್ ಕುಮಾರ್ ರೈ ಅವರ ಸಂಕಲ್ಪದ ಓಟ ಎಂದಿಗೂ ನಿಲ್ಲದು! ಕರಾವಳಿಯ ಜಾನಪದ ಗತ್ತು, ಮೈಸೂರಿನ ಮಣ್ಣಿನಲ್ಲಿ ಇತಿಹಾಸ ಬರೆಯುವುದು ಖಂಡಿತ."
ಪುತ್ತೂರು: ಮೈಸೂರಿನ ಐತಿಹಾಸಿಕ ದಸರಾ ಮಹೋತ್ಸವದ ಜೊತೆಯಲ್ಲಿಯೇ ಕರಾವಳಿಯ ಸಾಂಸ್ಕೃತಿಕ ಹೆಮ್ಮೆಯಾದ ಕಂಬಳ ಕ್ರೀಡೆಯನ್ನು ಆಯೋಜಿಸಲು ಪುತ್ತೂರಿನ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಅಶೋಕ್ ಕುಮಾರ್ ರೈ ಅವರು ಚಿಂತನೆ ನಡೆಸಿದ್ದಾರೆ. ಈ ಕಂಬಳ ಯಾವುದೇ ಕಾರಣಕ್ಕೂ ನಿಲ್ಲಬಾರದು ಎಂದು ಕ್ರೀಡಾ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ, ರಾಜ್ಯವನ್ನು ಪ್ರತಿನಿಧಿಸಿರುವ ಹಾಗೂ ಪ್ರಸ್ತುತ ಕಾಂಗ್ರೆಸ್‌ಗೆ ಬೆಂಬಲವಾಗಿ ನಿಂತಿರುವ ಪ್ರಮುಖ ಮುಖಂಡರಾದ ಇಬ್ರಾಹಿಂ ಗೋಳಿಕಟ್ಟೆ ಅವರು ತೀವ್ರವಾಗಿ ಒತ್ತಾಯಿಸಿದ್ದಾರೆ.
ಬೆಂಗಳೂರಿನಲ್ಲಿ ಇತಿಹಾಸದಲ್ಲೇ ಅಭೂತಪೂರ್ವ ಯಶಸ್ಸು ಕಂಡ ಐತಿಹಾಸಿಕ ಕಂಬಳದ ಯಶಸ್ಸಿನ ಬೆನ್ನಲ್ಲೇ, ಮೈಸೂರು ದಸರಾ ಸಂದರ್ಭದಲ್ಲಿ ಈ ಜನಪದ ಕ್ರೀಡೆಯನ್ನು ಆಯೋಜಿಸಲು ಶಾಸಕ ಅಶೋಕ್ ಕುಮಾರ್ ರೈ ಅವರು ಮುಂದಾಗಿದ್ದಾರೆ. ಮೈಸೂರು ದಸರಾದೊಂದಿಗೆ ಈ ಕಂಬಳ ಕ್ರೀಡೆಯೂ ಜೊತೆಯಾದರೆ ದೇಶ-ವಿದೇಶಗಳ ಪ್ರವಾಸಿಗರಿಗೆ ಕಣ್ಣಿಗೆ ಹಬ್ಬವಾಗಲಿದ್ದು, ಮೈಸೂರಿನ ಪ್ರವಾಸೋದ್ಯಮಕ್ಕೆ ಮತ್ತಷ್ಟು ಗರಿ ಮೂಡಲಿದೆ.
ಇದಕ್ಕೆ ಕರ್ನಾಟಕ ಸರ್ಕಾರವೂ ಜಾಗ ನೀಡಿ ಹಾಗೂ ಅಗತ್ಯ ಧನಸಹಾಯ ನೀಡಿ ಸಂಪೂರ್ಣ ಸಹಕಾರ ಕೊಡಲು ಮುಂದೆ ಬಂದಿದೆ. ಇದರ ಜೊತೆಗೆ ಸ್ವತಃ ಶಾಸಕ ಅಶೋಕ್ ಕುಮಾರ್ ರೈ ಅವರು ತಮ್ಮದೇ ಸ್ವಂತ ತಂಡವನ್ನು ಕಟ್ಟಿ, ಸ್ವಂತ ವೆಚ್ಚಗಳನ್ನು ಭರಿಸಿ ಈ ಕ್ರೀಡಾಕೂಟದ ಭವ್ಯ ಆಯೋಜನೆಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ.
ಶಾಸಕರಾಗಿ ಮೂರು ವರ್ಷಗಳ ಅವಧಿಯಲ್ಲಿ ಅಶೋಕ್ ಕುಮಾರ್ ರೈ ಅವರು ರಾಜ್ಯ ರಾಜಕಾರಣದಲ್ಲಿ ಹಾಗೂ ತಮ್ಮ ಊರು ಮತ್ತು ಜಿಲ್ಲೆಯ ಅಭಿವೃದ್ಧಿ ವಿಚಾರದಲ್ಲಿ ನಡೆಸುತ್ತಾ ಬಂದಿರುವ ಕೆಲಸಗಳು ಶ್ಲಾಘನೀಯ. ವಿಶೇಷವಾಗಿ ಅಸೆಂಬ್ಲಿಯಲ್ಲಿ ಅವರು ಎದ್ದು ನಿಂತು ಮಾತನಾಡುವ ಶೈಲಿ ಮತ್ತು ಜಿಲ್ಲೆಯ ಸಮಸ್ಯೆಗಳನ್ನು ಮಂಡಿಸುವ ಜಾಣ್ಮೆ ಎಷ್ಟೋ ವರ್ಷಗಳ ಸುದೀರ್ಘ ರಾಜಕೀಯ ಅನುಭವವಿರುವ ನಾಯಕರ ರೀತಿಯಲ್ಲೇ ಇರುತ್ತದೆ ಎಂದು ಇವತ್ತು ಇಡೀ ಜನತೆ ಪ್ರಶಂಸಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮೈಸೂರು ದಸರಾ ಕಂಬಳದ ಮೂಲಕ ರೈ ಅವರಿಗೆ ಸಿಗಬಹುದಾದ ರಾಷ್ಟ್ರ ಮಟ್ಟದ ಜನಪ್ರಿಯತೆಯನ್ನು ಸಹಿಸಿಕೊಳ್ಳಲು ಸಾಧ್ಯವಾಗದೆ, ಬಿಜೆಪಿಯ ಕೆಲವು ನಾಯಕರು ರಾಜಕೀಯ ಪ್ರೇರಿತವಾಗಿ ಇದಕ್ಕೆ ಅಡ್ಡಗಾಲು ಹಾಕುತ್ತಿರುವುದು ಅತ್ಯಂತ ಖೇದಕರ ಎಂದು ಇಬ್ರಾಹಿಂ ಗೋಳಿಕಟ್ಟೆ ಅವರು ಹೇಳಿದ್ದಾರೆ.
ಕರಾವಳಿ ಪ್ರದೇಶದ ಈ ಸಾಂಸ್ಕೃತಿಕ ಕಂಬಳ ಕ್ರೀಡೆಗೆ ಇಲ್ಲಿಯ ಸ್ಥಳೀಯ ಬಿಜೆಪಿ ಶಾಸಕರು ಸಹಕಾರ ಕೊಡುತ್ತಾರೋ ಅಥವಾ ವಿರೋಧಿಸುತ್ತಾರೋ ಎಂಬುದನ್ನು ನಾವು ಕಾದು ನೋಡಬೇಕಾಗಿದೆ. ಕರಾವಳಿಯ ಸಂಸ್ಕೃತಿಯ ಬಗ್ಗೆ ನಿಜವಾದ ಕಾಳಜಿ ಇದ್ದರೆ, ಇಲ್ಲಿನ ಬಿಜೆಪಿ ಶಾಸಕರು ಕೇವಲ ರಾಜಕೀಯ ವಿರೋಧಕ್ಕಾಗಿ ವಿರೋಧಿಸುವುದನ್ನು ಬಿಟ್ಟು, ಪಕ್ಷಭೇದ ಮರೆತು ಶಾಸಕ ಅಶೋಕ್ ಕುಮಾರ್ ರೈ ಅವರೊಂದಿಗೆ ಕೈಜೋಡಿಸಬೇಕು. ಜಂಟಿ ಹೇಳಿಕೆಗಳನ್ನು ನೀಡಿ ಈ ಕಂಬಳವನ್ನು ಮೈಸೂರಿನಲ್ಲಿ ನಡೆಸಲು ಸಂಪೂರ್ಣ ಪ್ರೋತ್ಸಾಹ ನೀಡಬೇಕು. ಬಿಜೆಪಿ ಶಾಸಕರು ಈ ಸಾಂಸ್ಕೃತಿಕ ಕ್ರೀಡೆಗೆ ಬೆಂಬಲ ನೀಡುವುದನ್ನು ನೋಡಿ ನಾವೆಲ್ಲರೂ ಸಂತೋಷಪಡುವಂತಾಗಬೇಕು ಎಂದು ಅವರು ಕಳಕಳಿಯಿಂದ ವಿನಂತಿಸಿದ್ದಾರೆ.
ದಸರಾ ಸಮಯದಲ್ಲಿ ಮೈಸೂರಿನಲ್ಲಿ ಕಂಬಳ ನಡೆಯುವುದರಿಂದ ಲಕ್ಷಾಂತರ ಪ್ರೇಕ್ಷಕರು ಹರಿದುಬರಲಿದ್ದು, ಮೈಸೂರು ಅರಮನೆ ಸೇರಿದಂತೆ ಅಲ್ಲಿನ ಪ್ರವಾಸೋದ್ಯಮಕ್ಕೆ ಹೊಸ ಕಳೆ ಬರಲಿದೆ. ಮೈಸೂರಿನ ಸಣ್ಣ ಸಣ್ಣ ವ್ಯಾಪಾರಸ್ಥರಿಗೂ, ಬಡ ಜನರಿಗೂ ಇದೊಂದು ದೊಡ್ಡ ವ್ಯಾಪಾರದ ಹಬ್ಬವಾಗಿ ಪರಿಣಮಿಸಲಿದ್ದು, ಅವರ ಜೀವನೋಪಾಯಕ್ಕೆ ಭಾರಿ ಆರ್ಥಿಕ ಉತ್ತೇಜನ ಸಿಗಲಿದೆ. ಕಂಬಳ ಮುಗಿದ ತಕ್ಷಣ ಆಯೋಜಕರು ಕರೆಯನ್ನು ಮುಚ್ಚಿ, ಜಾಗವನ್ನು ಯಥಾಸ್ಥಿತಿಗೆ ತಂದು ಸ್ವಚ್ಛಗೊಳಿಸುವ ಸಂಪೂರ್ಣ ಜವಾಬ್ದಾರಿ ಹೊಂದಿರುತ್ತಾರೆ. ಹೀಗಿದ್ದೂ, ವಿನಾಕಾರಣ ತಕರಾರು ತೆಗೆಯುತ್ತಿರುವುದು ಕೇವಲ ಶಾಸಕರ ಹೆಸರು ಮತ್ತು ಪ್ರಚಾರವನ್ನು ತಡೆಯುವ ಕೀಳು ರಾಜಕೀಯ ತಂತ್ರವಾಗಿದೆ.
ಮೈಸೂರಿನ ಸ್ಥಳೀಯ ಜನರಲ್ಲಿ ಕಂಬಳದ ಬಗ್ಗೆ ಯಾವುದೇ ವಿರೋಧವಿಲ್ಲ, ಬದಲಾಗಿ ಕರಾವಳಿಯ ಈ ವಿಶಿಷ್ಟ ಕ್ರೀಡೆಯನ್ನು ದಸರಾ ಸಂದರ್ಭದಲ್ಲೇ ಕಣ್ತುಂಬಿಕೊಳ್ಳಲು ಅವರು ಅತ್ಯಂತ ಉತ್ಸುಕರಾಗಿದ್ದಾರೆ. ಶಾಸಕರಿಗೆ ಅಲ್ಲಿನ ಜನರಿಂದ ಬರುತ್ತಿರುವ ನೂರಾರು ಫೋನ್ ಕರೆಗಳು ಹಾಗೂ ಒತ್ತಾಯವನ್ನು ನೋಡಿದರೆ, ಮೈಸೂರಿನ ಜನತೆ ಅಶೋಕ್ ಕುಮಾರ್ ರೈ ಅವರ ನೇತೃತ್ವದಲ್ಲಿ ಈ ಕಂಬಳ ನಡೆದೇ ತೀರಬೇಕು ಎಂಬ ದೃಢ ಸಂಕಲ್ಪ ತೊಟ್ಟಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ. ಆದ್ದರಿಂದ ಬಿಜೆಪಿಯವರು ವಿನಾಕಾರಣ ವಿರೋಧಿಸುವುದನ್ನು ನಿಲ್ಲಿಸಿ, ಈ ಐತಿಹಾಸಿಕ ಸಾಂಸ್ಕೃತಿಕ ಉತ್ಸವದ ಯಶಸ್ಸಿಗೆ ಕೈಜೋಡಿಸಬೇಕೆಂದು ಇಬ್ರಾಹಿಂ ಗೋಳಿಕಟ್ಟೆ ಅವರು ಒತ್ತಾಯಿಸಿದ್ದಾರೆ."