ಮಂಗಳೂರಿನ ಉರ್ವದಲ್ಲಿ SKODA ಕಾರ್ ಶೋರೂಮ್‌ ಶುಭಾರಂಭ


ಮಂಗಳೂರು: 2025ರ ಹೊಸ ಮಾದರಿಯ ಸ್ಕೋಡಾ ಕಾರುಗಳ ಮಾರಾಟಕ್ಕಾಗಿ ಮಂಗಳೂರಿನ ಉರ್ವ ಸಮೀಪದ ಡಿಯೋ ಗ್ರಾಟಿಯಸ್, ಚಿಲಿಂಬಿಯಲ್ಲಿ ನೂತನ SKODA ಕಾರ್ ಶೋರೂಮ್‌ನ್ನು ಶನಿವಾರ ಅದ್ದೂರಿಯಾಗಿ ಉದ್ಘಾಟಿಸಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬೆಂಗಳೂರು ಗ್ರಾಮೀಣ ವಿಭಾಗದ ಸ್ಟೋರ್ ಮುಖ್ಯಸ್ಥ ಕಿರಣ್ ಜೋಶಿ, ಗುಣಮಟ್ಟ, ಸುರಕ್ಷತೆ ಹಾಗೂ ಜನಸಾಮಾನ್ಯರ ಕೈಗೆಟಕುವ ದರದಿಂದ ಸ್ಕೋಡಾ ಕಾರುಗಳಿಗೆ ಉತ್ತಮ ಬೇಡಿಕೆಯಿದೆ. ಸಿಎಸ್‌ಸಿ (CSC) ವಿಎಲ್‌ಇಗಳು ಸ್ಕೋಡಾ ವಾಹನಗಳ ಕುರಿತು ಜನರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಿ ಮಾರಾಟವನ್ನು ಉತ್ತೇಜಿಸಿದರೆ ಉತ್ತಮ ಆದಾಯ ಗಳಿಸುವ ಅವಕಾಶವಿದೆ. ಈ ಯೋಜನೆಯನ್ನು ಯಶಸ್ವಿಯಾಗಿ ಬಳಸಿಕೊಂಡು ಪ್ರತಿಯೊಬ್ಬರೂ ಮುನ್ನಡೆಯಬೇಕು ಎಂದು ಕರೆ ನೀಡಿದರು.


ರಾಜ್ಯ ಕಾರ್ಯಕ್ರಮ ವ್ಯವಸ್ಥಾಪಕ ದಿನಕರ್ ರೆಡ್ಡಿ ಮಾತನಾಡಿ, ರಾಜ್ಯದಾದ್ಯಂತ ವಿಎಲ್‌ಇಗಳು ಸ್ಕೋಡಾ ಕಾರುಗಳ ಮಾರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಉತ್ತಮ ಸಾಧನೆ ಮಾಡಬೇಕು. ಗ್ರಾಮೀಣ ಪ್ರದೇಶಗಳಲ್ಲಿಯೂ ಸ್ಕೋಡಾ ವಾಹನಗಳ ಗುಣಮಟ್ಟ ಮತ್ತು ವೈಶಿಷ್ಟ್ಯಗಳನ್ನು ಜನರಿಗೆ ಪರಿಚಯಿಸುವ ಮೂಲಕ ಉತ್ತಮ ಮಾರುಕಟ್ಟೆ ನಿರ್ಮಿಸಲು ಸಹಕರಿಸಬೇಕು ಎಂದರು.



ಸಿಎಸ್‌ಸಿಯ ಮುಖ್ಯಸ್ಥ ಪ್ರಸಾದ್ ಅವರು ಸ್ಕೋಡಾ ಕಾರುಗಳ ವಿಶೇಷತೆಗಳು, ಅತ್ಯಾಧುನಿಕ ತಂತ್ರಜ್ಞಾನ ಹಾಗೂ ವಿಎಲ್‌ಇಗಳಿಗೆ ಲಭ್ಯವಾಗುವ ಪ್ರೋತ್ಸಾಹಧನ ಮತ್ತು ಲಾಭಾಂಶಗಳ ಕುರಿತು ವಿವರವಾದ ಮಾಹಿತಿ ನೀಡಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಿಎಸ್‌ಸಿ ವಿಎಲ್‌ಇ ಸೊಸೈಟಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ. ಹಾಜಿ ಎಸ್. ಅಬೂಬಕರ್ ಆರ್ಲಪದವು ಅವರು ಮಾತನಾಡಿ, ಸ್ಕೋಡಾದ ಹೊಸ "ಕೈಲಾಕ್ (Kylaq)" ಕಾರಿನ ಹೆಸರಿನ ಹಿಂದಿರುವ ವಿಶೇಷತೆಯನ್ನು ವಿವರಿಸಿದರು.





2025ರಲ್ಲಿ ಬಿಡುಗಡೆಯಾದ ಸ್ಕೋಡಾದ ಹೊಸ ಎಸ್‌ಯುವಿಗೆ ಹೆಸರನ್ನು ಸೂಚಿಸುವಂತೆ ಕಂಪನಿಯು ಸಾರ್ವಜನಿಕರಿಗೆ ಆಹ್ವಾನ ನೀಡಿದ್ದು, ಲಕ್ಷಾಂತರ ಹೆಸರುಗಳು ಸಲ್ಲಿಕೆಯಾಗಿದ್ದವು. ಅವುಗಳಲ್ಲಿ ಕಾಸರಗೋಡಿನ ಖುರ್‌ಆನ್ ಶಿಕ್ಷಕರಾದ ಮೊಹಮ್ಮದ್ ಜಿಯಾದ್ ಅವರು ಸೂಚಿಸಿದ್ದ "ಕೈಲಾಕ್" ಎಂಬ ಹೆಸರು ಆಯ್ಕೆಯಾಗಿದ್ದು, ಸಂಸ್ಕೃತದಲ್ಲಿ "ಸ್ಫಟಿಕ" ಎಂಬ ಅರ್ಥವನ್ನು ಸೂಚಿಸುತ್ತದೆ. ನಮ್ಮ ನೆರೆಯ ಜಿಲ್ಲೆಯ ವ್ಯಕ್ತಿಯೊಬ್ಬರು ಸೂಚಿಸಿದ ಹೆಸರು ಜಾಗತಿಕ ಬ್ರ್ಯಾಂಡ್‌ನ ಹೊಸ ಕಾರಿಗೆ ನಾಮಕರಣಗೊಂಡಿರುವುದು ನಮ್ಮ ಪ್ರದೇಶಕ್ಕೆ ಸಂದ ಹೆಮ್ಮೆಯ ವಿಷಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.


ಇದೇ ವೇಳೆ, ಎಲ್ಲಾ ವಿಎಲ್‌ಇಗಳು ಸ್ಕೋಡಾ ಕಾರುಗಳ ಮಾರಾಟದಲ್ಲಿ ಹೆಚ್ಚಿನ ಆಸಕ್ತಿ ವಹಿಸಿ ಗ್ರಾಹಕರ ವಿಶ್ವಾಸ ಗಳಿಸುವುದರೊಂದಿಗೆ ಉತ್ತಮ ಆದಾಯವನ್ನು ಸಂಪಾದಿಸುವಂತೆ ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಸೊಸೈಟಿಯ ಉಪಾಧ್ಯಕ್ಷ ಚಂದ್ರಶೇಖರ್ ಹೆಬ್ಬಾರ್ (ಕೊಲ್ಯ), ರೋಹಿತ್ ಪ್ರಭು, ವಿಶ್ವನಾಥ ಕೋಟ್ಯಾನ್, ವಿಎಲ್‌ಇಗಳಾದ ಶಿವಪ್ಪ ನಾಯ್ಕ (ಅಡ್ಯನಡ್ಕ), ಇತ್ಬಾನ್ (ಸುಳ್ಯ), ಸಮೀರ್, ಅಬ್ದುಲ್ ರಜಾಕ್ (ಎಣ್ಮೂರು) ಸೇರಿದಂತೆ ಅನೇಕ ಗಣ್ಯರು ಹಾಗೂ ವಿಎಲ್‌ಇಗಳು ಉಪಸ್ಥಿತರಿದ್ದರು.

ಸಿಎಸ್‌ಸಿ ಜಿಲ್ಲಾ ವ್ಯವಸ್ಥಾಪಕ ಗೋವರ್ಧನ್ ಅವರು ಅತಿಥಿಗಳನ್ನು ಸ್ವಾಗತಿಸಿ, ಕಾರ್ಯಕ್ರಮದ ಅಂತ್ಯದಲ್ಲಿ ವಂದನಾರ್ಪಣೆ ಸಲ್ಲಿಸಿದರು.
Previous Post