"ಲಾವಣ್ಯ ಕೊಲೆ ಪ್ರಕರಣ: ಎನ್‌ಕೌಂಟರ್‌ಗೆ ಅರುಣ್ ಕುಮಾರ್ ಪುತ್ತಿಲ ಆಗ್ರಹ, ಪರಿಹಾರಕ್ಕೆ ಸಂಘಟನೆಗಳೇ ಹೊಣೆ ಎಂದ ಇಬ್ರಾಹಿಂ ಗೋಳಿಕಟ್ಟೆ!"
ಬಂಟ್ವಾಳ: ಬಂಟ್ವಾಳದ ಬಿ.ಸಿ. ರೋಡ್ ಬಸ್ ನಿಲ್ದಾಣದಲ್ಲಿ ನಡೆದ ಲಾವಣ್ಯ ಎಂಬ ಹೆಣ್ಣುಮಗಳ ಬರ್ಬರ ಕೊಲೆ ಇಡೀ ಜಿಲ್ಲೆಯನ್ನೇ ಕಣ್ಣೀರಲ್ಲಿ ಮುಳುಗಿಸಿದೆ. ಈ ಜ್ವಲಂತ ವಿದ್ಯಮಾನದ ಬಗ್ಗೆ ತೀವ್ರ ಕಳಕಳಿ ವ್ಯಕ್ತಪಡಿಸಿರುವ ನಾಗರಿಕ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಇಬ್ರಾಹಿಂ ಗೋಳಿಕಟ್ಟೆ ಅವರು ಸರ್ಕಾರ, ರಾಜಕಾರಣಿಗಳು ಮತ್ತು ಸಾರ್ವಜನಿಕರ ಮುಂದೆ ಅತ್ಯಂತ ತೀಕ್ಷ್ಣವಾದ ಪ್ರಶ್ನೆಗಳನ್ನು ಹಾಗೂ ಆಗ್ರಹಗಳನ್ನು ಮುಂದಿಟ್ಟಿದ್ದಾರೆ.
ಸಿಸಿ ಕ್ಯಾಮೆರಾದಲ್ಲಿ ಕೃತ್ಯ ಸ್ಪಷ್ಟ: ತಕ್ಷಣವೇ ಎನ್‌ಕೌಂಟರ್ ಆಗಲಿ
ಅಪರಾಧಿ ಚೇತನ್ ಎಂಬಾತ ಕೈಯಲ್ಲಿ ಕತ್ತಿ ಹಿಡಿದು ಬಂದು ಹಗಲು ಹೊತ್ತಿನಲ್ಲೇ ಬರ್ಬರವಾಗಿ ಕೊಲೆ ಮಾಡಿ ಓಡಿ ಹೋಗುವ ಚಿತ್ರಣ ಸಿಸಿ ಕ್ಯಾಮೆರಾದಲ್ಲಿ ಅತ್ಯಂತ ಸ್ಪಷ್ಟವಾಗಿ ದಾಖಲಾಗಿದೆ. ಇಲ್ಲಿ ಯಾವುದೇ ಸಾಕ್ಷ್ಯಾಧಾರಗಳ ಕೊರತೆಯಿಲ್ಲ. ಈ ಹಿನ್ನೆಲೆಯಲ್ಲಿ, ಅರುಣ್ ಕುಮಾರ್ ಪುತ್ತಿಲ ಅವರು ಹೇಳಿರುವಂತೆ—ಇಂತಹ ಕ್ರೂರ ಅಪರಾಧಿಗೆ ತಕ್ಷಣವೇ ಎನ್‌ಕೌಂಟರ್ ಶಿಕ್ಷೆಯಾಗಬೇಕು. ಇಂತಹ ಮೃಗಗಳಿಗೆ ತಕ್ಷಣದ ಎನ್‌ಕೌಂಟರ್ ಶಿಕ್ಷೆ ನೀಡಿದರೆ ಮಾತ್ರ ಮುಂದೆ ಇಂತಹ ತಪ್ಪು ಮಾಡಲು ಯುವಕರು ನೂರು ಬಾರಿ ಯೋಚಿಸುತ್ತಾರೆ.
ಆಯುಧ ಹಂಚಿದ ಸಂಘಟನೆಗಳೇ ನೊಂದ ಕುಟುಂಬಕ್ಕೆ ಪರಿಹಾರ ನೀಡಲಿ
ಧರ್ಮ ಮತ್ತು ರಾಜಕೀಯದ ಹೆಸರಿನಲ್ಲಿ ಯುವಕರ ಕೈಗೆ ತ್ರಿಶೂಲ ಸೇರಿದಂತೆ ಆಯುಧಗಳನ್ನು ಕೊಟ್ಟು ಅವರ ತಲೆಯನ್ನು ಕೆಡಿಸಿದ ಸಂಘಟನೆಗಳೇ ಈ ಅನಾಹುತಕ್ಕೆ ನೇರ ಹೊಣೆಯಾಗಿವೆ. ಇಂದು ಅದೇ ತ್ರಿಶೂಲ ಕತ್ತಿಯಾಗಿ ಪರಿವರ್ತನೆಯಾಗಿ ಬಡ ಹೆಣ್ಣುಮಗಳ ಪ್ರಾಣ ಪಡೆದಿದೆ. ಪೊಲೀಸ್ ಠಾಣೆ ಅಥವಾ ಡಿಸಿ ಕಚೇರಿ ಮುಂದೆ ಪ್ರತಿಭಟಿಸುವುದರಿಂದ, ರಸ್ತೆಯಲ್ಲಿ ಹೆಣವನ್ನಿಟ್ಟು ಭಾಷಣ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ. ಯುವಕರನ್ನು ಹಾದಿ ತಪ್ಪಿಸಿದ ಸಂಘಟನೆಗಳು ತಕ್ಷಣವೇ ಒಟ್ಟಾಗಿ ಆ ಬಡ ಹೆತ್ತವರ ಕಣ್ಣೀರನ್ನು ಒರೆಸಲು ಬೃಹತ್ ಮೊತ್ತದ ಆರ್ಥಿಕ ಪರಿಹಾರವನ್ನು ದಾನವಾಗಿ ನೀಡಬೇಕು. ಎಂದು ನಾಗರಿಕ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಇಬ್ರಾಹಿಂ ಗೋಳಿಕಟ್ಟೆಯವರು ತಿಳಿಸಿದರು.