ಕೊಳ್ತಿಗೆ–ಪೆರ್ಲಂಪಾಡಿಯಲ್ಲಿ ಎಸ್‌ಐಆರ್ SIR ( Special Intensive Revision) ಕುರಿತು ಮಾಹಿತಿ ಕಾರ್ಯಾಗಾರ


ಕೊಳ್ತಿಗೆ : ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಕೊಳ್ತಿಗೆ–ಪೆರ್ಲಂಪಾಡಿಯ ಹಿದಾಯ ಮದ್ರಸ ಸಭಾಂಗಣದಲ್ಲಿ ಮಾಹಿತಿ ಕಾರ್ಯಾಗಾರ ನಡೆಯಿತು.
ಕೊಳ್ತಿಗೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಪ್ರಮೋದ್ ಕುಮಾರ್ ಕೆ.ಎಸ್. ಅವರ ನೇತೃತ್ವದಲ್ಲಿ, ಮುಹಿಯ್ಯುದ್ದೀನ್ ಜುಮಾ ಮಸೀದಿ ಹಾಗೂ ಅಲ್ ಹಿದಾಯ ಕಮಿಟಿಯ ಆಶ್ರಯದಲ್ಲಿ ಆಯೋಜಿಸಲಾದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಮಾಅತ್ ಸಮಿತಿಯ ಕಾರ್ಯಾಧ್ಯಕ್ಷ ಅಬ್ದುಲ್ ರಜಾಕ್ ವಹಿಸಿದರು.

ಜಿಲ್ಲಾ ತರಬೇತುದಾರರಾದ ಡಾ. ಹಾಜಿ ಎಸ್. ಅಬೂಬಕ್ಕರ್ ಆರ್ಲಪದವು ಅವರು ಎಸ್‌ಐಆರ್ (Special Intensive Revision) ಪ್ರಕ್ರಿಯೆಯ ಉದ್ದೇಶ, ಅದರ ಮಹತ್ವ ಹಾಗೂ ಮತದಾರರ ಪಟ್ಟಿಯ ನಿಖರತೆಯನ್ನು ಕಾಪಾಡುವಲ್ಲಿ ಸಾರ್ವಜನಿಕರ ಪಾತ್ರದ ಕುರಿತು ಸಮಗ್ರವಾಗಿ ವಿವರಿಸಿದರು. ಅರ್ಹ ನಾಗರಿಕರ ಹೆಸರು ಮತದಾರರ ಪಟ್ಟಿಯಲ್ಲಿ ಉಳಿಯುವುದು ಮತ್ತು ಯಾವುದೇ ಅರ್ಹ ಮತದಾರರು ತಮ್ಮ ಮತದಾನದ ಹಕ್ಕಿನಿಂದ ವಂಚಿತರಾಗದಂತೆ ಅಗತ್ಯ ದಾಖಲೆಗಳನ್ನು ನಿಗದಿತ ಅವಧಿಯಲ್ಲಿ ಸಲ್ಲಿಸುವ ಮಹತ್ವವನ್ನು ಅವರು ಒತ್ತಿಹೇಳಿದರು.


ಎಸ್‌ಐಆರ್ ಪ್ರಕ್ರಿಯೆಗೆ ಸಂಬಂಧಿಸಿದಂತೆ ಜನರಲ್ಲಿ ಹರಡುತ್ತಿರುವ ಗೊಂದಲಗಳು ಹಾಗೂ ತಪ್ಪು ಮಾಹಿತಿಗಳಿಗೆ ಕಿವಿಗೊಡದೆ, ಚುನಾವಣಾ ಆಯೋಗದ ಅಧಿಕೃತ ಮಾರ್ಗಸೂಚಿಗಳನ್ನೇ ಅನುಸರಿಸುವಂತೆ ಕರೆ ನೀಡಿದರು. ಪ್ರತಿಯೊಬ್ಬ ಮತದಾರರೂ ತಮ್ಮ ಹೆಸರು, ವಿಳಾಸ ಹಾಗೂ ಇತರ ವಿವರಗಳನ್ನು ಪರಿಶೀಲಿಸಿಕೊಂಡು, ಅಗತ್ಯವಿದ್ದರೆ ತಿದ್ದುಪಡಿ ಅಥವಾ ದಾಖಲಾತಿ ಪ್ರಕ್ರಿಯೆಯನ್ನು ವಿಳಂಬವಿಲ್ಲದೆ ಪೂರ್ಣಗೊಳಿಸಬೇಕು ಎಂದು ಸಲಹೆ ನೀಡಿದರು.



ಮತದಾನದ ಹಕ್ಕು ಪ್ರತಿಯೊಬ್ಬ ನಾಗರಿಕನ ಸಂವಿಧಾನಬದ್ಧ ಹಕ್ಕಾಗಿದ್ದು, ಆ ಹಕ್ಕನ್ನು ಸಂರಕ್ಷಿಸಿಕೊಳ್ಳಲು ಎಸ್‌ಐಆರ್ ಪ್ರಕ್ರಿಯೆಯಲ್ಲಿ ಸಾರ್ವಜನಿಕರು ಜವಾಬ್ದಾರಿಯುತವಾಗಿ ಭಾಗವಹಿಸುವುದು ಅತ್ಯಗತ್ಯ ಎಂದು ಅವರು ತಿಳಿಸಿದರು ಮತ್ತು ಈ ಕುರಿತಂತೆ ಗೊಂದಲ ಪ್ರಶ್ನೆಗಳಿಗೆ ಸಮಗ್ರ ಮಾಹಿತಿಯನ್ನು ನೀಡಿದರು.


ಕೊಳ್ತಿಗೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಪ್ರಮೋದ್ ಕುಮಾರ್ ಕೆ.ಎಸ್. ಅವರು ಸಂದರ್ಭೋಚಿತವಾಗಿ ಮಾತನಾಡಿ, ಇಂತಹ ಜಾಗೃತಿ ಕಾರ್ಯಕ್ರಮಗಳು ಜನಸಾಮಾನ್ಯರಿಗೆ ಅತ್ಯಂತ ಉಪಯುಕ್ತವಾಗಿದ್ದು, ಪ್ರತಿಯೊಬ್ಬರೂ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸಬೇಕೆಂದು ತಿಳಿಸಿದರು.


ಮಸೀದಿಯ ಮುದರ್ರಿಸ್ ಇಲ್ಯಾಸ್ ಇರ್ಫಾನಿ ಸಾಲ್ಮರ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಅತಿಥಿಗಳನ್ನು ಸ್ವಾಗತಿಸಿದರು. ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಪವನ್, ಆದಂಕುಂಞಿ, ಉಮ್ಮರ್ ಹಾಜಿ, ಬಿ.ಎಲ್.ಎ. ಶಿವರಾಂ ಹಾಗೂ ಅಶ್ರಫ್ ಮುಸ್ಲಿಯಾರ್ ಉಪಸ್ಥಿತರಿದ್ದರು.

ಕಾರ್ಯಕ್ರಮದ ಕೊನೆಯಲ್ಲಿ ಸದರ್ ಮುಅಲ್ಲಿಮ್ ಹಾರಿಸ್ ಫೈಝಿ ಕುಂತೂರು ವಂದನಾರ್ಪಣೆ ಸಲ್ಲಿಸಿದರು. ಜೊತೆ ಕಾರ್ಯದರ್ಶಿ ಮುಹಮ್ಮದ್ ಇರ್ಷಾದ್ ಸಹಕರಿಸಿದರು. ಕಾರ್ಯಕ್ರಮದಲ್ಲಿ ಪುರುಷರು ಹಾಗೂ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಎಸ್‌ಐಆರ್ ಕುರಿತು ಮಾಹಿತಿ ಪಡೆದುಕೊಂಡರು.


Next Post Previous Post