BREAKING NEWS: SSLC ಪರೀಕ್ಷೆಗೆ ಹೊಸ ಮಾರ್ಗಸೂಚಿ ಪ್ರಕಟಿಸಿದ ಶಿಕ್ಷಣ ಇಲಾಖೆ: ಶಿಕ್ಷಕರಿಗೂ ಮೊಬೈಲ್ ಬಳಕೆ ನಿಷೇಧ


ಬೆಂಗಳೂರು: ರಾಜ್ಯದಲ್ಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಹೊಸ ಮಾರ್ಗಸೂಚಿಯನ್ನು ಶಿಕ್ಷಣ ಇಲಾಖೆಯಿಂದ ಪ್ರಕಟಿಸಲಾಗಿದೆ. ಪ್ರಕಟಿತ ಮಾರ್ಗಸೂಚಿಯಂತೆ ವಿದ್ಯಾರ್ಥಿಗಳು, ಶಿಕ್ಷಕರು ಸಹ ಪರೀಕ್ಷೆ ವೇಳೆ ಮೊಬೈಲ್ ಬಳಸುವಂತಿಲ್ಲ ಎಂಬುದಾಗಿ ತಿಳಿಸಲಾಗಿದೆ.

ಈ ಕುರಿತಂತೆ ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರು ಸುತ್ತೋಲೆ ಹೊರಡಿಸಿದ್ದು, 2025-26ನೇ ಸಾಲಿನ ಎಸ್.ಎಸ್.ಎಲ್.ಸಿ ಪೂರ್ವಸಿದ್ಧತಾ ಪರೀಕ್ಷೆ-1ನ್ನು ದಿನಾಂಕ: 05.01.2026 ರಿಂದ 10.01.2026 ರವರೆಗೆ ನಡೆಸಲಾಗಿರುತ್ತದೆ. ಪೂರ್ವ ಸಿದ್ಧತಾ ಪರೀಕ್ಷೆಗೆ ಮುಖ್ಯ ಪರೀಕ್ಷೆಯ ಮಾದರಿಯಂತೆ ಪುಶ್ನೆ ಪತ್ರಿಕೆಗಳನ್ನು ಮಂಡಲಿಯಿಂದ ಸಿದ್ಧಪಡಿಸಿ, ಅಯಾ ದಿನದ ಪ್ರಶ್ನೆಪತ್ರಿಕೆಯನ್ನು ವೇಳಾಪಟ್ಟಿಯಂತೆ ವಿಷಯವಾರು ಪ್ರಶ್ನೆಪತ್ರಿಕೆಯನ್ನು ಪರೀಕ್ಷಾ ದಿನದಂದು ಪೂರ್ವಾಹ್ನ 07.00 ಗಂಟೆಗೆ ಪ್ರೌಢಶಾಲೆಗಳ ಮುಖ್ಯಶಿಕ್ಷಕರ ಶಾಲಾ ಲಾಗಿನ್‌ನಲ್ಲಿ ಅಪ್‌ಲೋಡ್ ಮಾಡಲಾಗಿತ್ತು. ಸಂಬಂಧಿಸಿದ ಪ್ರೌಢ ಶಾಲಾ ಮುಖ್ಯ ಶಿಕ್ಷಕರು ಪ್ರಶ್ನೆಪತ್ರಿಕೆಯನ್ನು ಮುದ್ರಿಸಿಕೊಂಡು ಪೂರ್ವ ಸಿದ್ಧತಾ ಪರೀಕ್ಷೆಯನ್ನು ನಡೆಸಲು ಅಗತ್ಯ ಕ್ರಮವಹಿಸಲು ಉಲ್ಲೇಖಿತ-1ರ ಮಾರ್ಗಸೂಚಿಯಲ್ಲಿ ವಿವರವಾಗಿ ತಿಳಿಸಲಾಗಿತ್ತದೆ ಎಂದಿದ್ದಾರೆ.

ಡೌನ್‌ಲೋಡ್ ಮಾಡಿಕೊಂಡಿರುವ ಪ್ರಶ್ನೆಪತ್ರಿಕೆಯ ಮೇಲೆ ಸಂಬಂಧಿಸಿದ ಶಾಲಾ ಸಂಕೇತ Watermark ಬರುವಂತೆ ಕ್ರಮವಹಿಸಲಾಗಿತ್ತು. ಯಾವುದಾದರೂ ಶಾಲೆಯ ಪಶ್ನೆಪತ್ರಿಕೆಗಳು ಪರೀಕ್ಷಾ ಪೂರ್ವದಲ್ಲಿ ಮತ್ತು ಪರೀಕ್ಷಾ ಸಂದರ್ಭದಲ್ಲಿ ಸೋರಿಕೆಯಾದಲ್ಲಿ ಸಂಬಂಧಿಸಿದ ಶಾಲಾ ಮುಖ್ಯ ಶಿಕ್ಷಕರ ಮೇಲೆ ಮತ್ತು ಇದಕ್ಕೆ ಸಹಕರಿಸಿದವರ ವಿರುದ್ಧ ನಿಯಮಾನುಸಾರ ಕ್ರಮ ಜರುಗಿಸಲಾಗುವುದೆಂದು ತಿಳಿಸಲಾಗಿತ್ತು. ಆದಾಗ್ಯೂ ಸಹ ಪೂರ್ವಸಿದ್ಧತಾ ಪರೀಕ್ಷೆ-1ರಲ್ಲಿ ಕೆಲವು ಮುಖ್ಯೋಪಾಧ್ಯಾಯರು ಪ್ರಶ್ನೆಪತ್ರಿಕೆಯನ್ನು ಡೌನ್‌ಲೋಡ್ ಮಾಡಿಕೊಂಡು ಪ್ರಾರಂಭವಾಗುವ ಸಮಯಕ್ಕಿಂತ ಮುಂಚಿತವಾಗಿ ಸೋರಿಕೆ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವುದು ಕಂಡುಬಂದಿರುತ್ತದೆ. ಈ ರೀತಿಯಾಗಿ ಪ್ರಶ್ನೆಪತ್ರಿಕೆಗಳು ಸೋರಿಕೆ ಮಾಡಿರುವುದರಿಂದ ಇಲಾಖೆಗೆ ಮುಜುಗರ ಉಂಟಾಗಿರುತ್ತದೆ. ಈ ಕೃತ್ಯವನ್ನು ಇಲಾಖೆಯು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ವಿರುದ್ಧ ಸೈಬರ್ ಆರ್ಥಿಕ ಮತ್ತು ಮಾದಕ ಅಪರಾಧಗಳ ಪೊಲೀಸ್‌ ಠಾಣೆಯಲ್ಲಿ ಈಗಾಗಲೇ ದೂರು ದಾಖಲಿಸಿ, ಕೃತ್ಯವೆಸಗಿದ ಶಿಕ್ಷಕರು ಮತ್ತು ವಿದ್ಯಾರ್ಥಿಗಳನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲಾಗಿರುತ್ತದೆ.

ಎಸ್.ಎಸ್.ಎಲ್.ಸಿ. ಪೂರ್ವಸಿದ್ಧತಾ ಪರೀಕ್ಷೆ-2 ಮತ್ತು 3 ನ್ನು ಆಯುಕ್ತರ ಕಛೇರಿಯ ಮೇಲ್ವಿಚಾರಣೆಯಲ್ಲಿ ನಡೆಸಲಾಗುತ್ತಿದೆ. ಈ ಸಂಬಂಧ ಆಯುಕ್ತಾಲಯದ ಹಂತದಲ್ಲಿ ಪರೀಕ್ಷಾ ಮೇಲ್ವಿಚಾರಣೆಗೆ ನೋಡಲ್ ಅಧಿಕಾರಿಯನ್ನಾಗಿ ನಿರ್ದೇಶಕರು (ಪ್ರೌಢ ಶಿಕ್ಷಣ), ಆಯುಕ್ತರ ಕಛೇರಿ, ನೃಪತುಂಗ ರಸ್ತೆ, ಬೆಂಗಳೂರು ಇವರನ್ನು ನೇಮಿಸಲಾಗಿದೆ ಎಂದಿದ್ದಾರೆ.


ಶಾಲಾ ಮುಖ್ಯೋಪಾಧ್ಯಾಯರ ಕರ್ತವ್ಯಗಳು
ಎಸ್.ಎಸ್ ಎಲ್ ಸಿ ಪೂರ್ವಸಿದ್ಧತಾ ಪರೀಕ್ಷೆ-2ರ ಸಮಯ ಬದಲಾಗಿದ್ದು, ಬೆಳಗ್ಗೆ 11.00 ಗಂಟೆಗೆ ಪರೀಕ್ಷೆ ಪ್ರಾರಂಭವಾಗುವುದು ಅದರಂತೆ ಪರಿಷ್ಕೃತ ವೇಳಾಪಟ್ಟಿಯನ್ನು ಮಂಡಲಿ ಜಾಲತಾಣದಲ್ಲಿ ಪ್ರಕಟಿಸಿದ್ದು ಸದರಿ ವೇಳಾವಟ್ಟಿಯನ್ನು ಡೌನ್ಲೋಡ್ ಮಾಡಿಕೊಂಡು ವಿದ್ಯಾರ್ಥಿಗಳಿಗೆ ಮಾಹಿತಿ ನೀಡುವುದು.

ಆರು ವಿಷಯಗಳ ಪರೀಕ್ಷಾ ದಿನದಂದು 10ನೇ ತರಗತಿ ವಿದ್ಯಾರ್ಥಿಗಳಿಗೆ ಬೆಳಿಗೆ, 9.00 ಗಂಟೆಗೆ ಶಾಲೆಯನ್ನು ಪ್ರಾರಂಭ ಮಾಡುವುದು. ಯಾವುದೇ ವಿದ್ಯಾರ್ಥಿಯು ಪರೀಕ್ಷಾ ದಿನದಂದು ಗೈರು ಹಾಜರಾಗದಂತೆ ಕ್ರಮಕೈಗೊಂಡು ಬೆಳಿಗ್ಗೆ 9.00 ಗಂಟೆಗೆ ಶಾಲೆಗೆ ಹಾಜರಾಗಿರುವುದನ್ನು ಖಾತರಿಪಡಿಸಿಕೊಳ್ಳುವುದು.

ಪ್ರಶ್ನೆಪತ್ರಿಕೆಗಳನ್ನು ಆಯಾ ವಿಷಯದ ಪರೀಕ್ಷಾ ದಿನದಂದು ಪೂರ್ವಾಹ್ನ 09.30 ಗಂಟೆಗೆ ಮಂಡಲಿಯಿಂದ ಶಾಲಾ ಮುಖ್ಯಶಿಕ್ಷಕರ ಲಾಗಿನ್ ಗೆ ಅಪ್ ಲೋಡ್ ಮಾಡಲಾಗುವುದು. ಅಪ್ಲೋಡ್ ಮಾಡಲಾಗುವ ಪ್ರಶ್ನೆಪತ್ರಿಕೆಗಳನ್ನು ಸ್ವತ ಶಾಲಾ ಮುಖ್ಯಶಿಕ್ಷಕರೇ ತಮ್ಮ ಶಾಲಾ ಲಾಗಿನ್ ಮಾಡಿ ಮೊಬೈಲ್ ಸಂಖ್ಯೆಗೆ ಬರುವ ಓ.ಟಿ.ಪಿ. ನಮೂದಿಸುವ ಮೂಲಕ ಪ್ರಶ್ನೆಪತ್ರಿಕೆಗಳನ್ನು ಡೌನ್ ಲೋಡ್ ಮಾಡಿಕೊಳ್ಳತಕ್ಕದು. ಆಯಾ ದಿನದ ವಿಷಯಗಳ ಪ್ರಶ್ನೆಪತ್ರಿಕೆಗಳು ಲಾಗಿನ್ನಲ್ಲಿ ಲಭ್ಯವಿರುವುದನ್ನು ಖಾತರಿಪಡಿಸಿಕೊಳ್ಳುವುದು.
ಮುಖ್ಯ ಶಿಕ್ಷಕರು ತಮ್ಮ ಸ್ವಂತ ಮೊಬೈಲ್ ಸಂಖ್ಯೆಯನ್ನು ಮಾತ್ರ ಶಾಲಾ ಲಾಗಿನಿಂದ OTP ಪಡೆಯಲು ಉಪಯೋಗಿಸುವುದು. ಶಾಲಾ ಲಾಗಿನ್ ಮತ್ತು OTP ಯನ್ನು ಯಾರಿಗೂ ಹಂಚಿಕೊಳ್ಳಬಾರದು.

ಪ್ರಶ್ನೆಪತ್ರಿಕೆಯನ್ನು ಮುಖ್ಯಶಿಕ್ಷಕರೇ ಖುದ್ದಾಗಿ ಡೌನ್ಲೋಡ್ ಮಾಡುವುದು ಪ್ರಶ್ನೆಪತ್ರಿಕೆಯನ್ನು ಯಾರಿಗೂ ಶೇರ್ ಮಾಡಕೂಡದು. ಹಾಗೂ ಶಾಲಾ ಸಂಕೇತದ (School Code) ವಾಟರ್ ಮಾರ್ಕ್ ಆಗಿ ಹೊಂದಿರುವ ಪ್ರಶ್ನೆ ಪತ್ರಿಕೆಗಳನ್ನು ಡೌನ್ಲೋಡ್ ಮಾಡುವುದು,
ಶಾಲಾ ಲಾಗಿನ್ಗೆ ಉಪಯೋಗಿಸುತ್ತಿರುವ ಮೊಬೈಲ್ ಸಂಖ್ಯೆಯು ಬದಲಾವಣೆಯಿದ್ದಲ್ಲಿ ಮನವಿ ಪತ್ರವನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಮೇಲು ಸಹಿ ಮಾಡಿಸಿ ದಿನಾಂಕ:22.01.2026 ರೊಳಗೆ ಮಂಡಲಿಗೆ ಸಲ್ಲಿಸುವುದು.

ಪ್ರಶ್ನೆಪತ್ರಿಕೆ ಮುದ್ರಣವನ್ನು ಗೌಪ್ಯತೆ ಕಾಪಾಡಿಕೊಂಡು ವಿದ್ಯಾರ್ಥಿಗಳ ಸಂಖ್ಯೆಗನುಗುಣವಾಗಿ ಮುದ್ರಿಸಿಕೊಳ್ಳುವುದು.
ಪ್ರಶ್ನೆಪತ್ರಿಕೆಗಳ ಮುದ್ರಣ ಸಂದರ್ಭದಲ್ಲಿ ಪೆನ್ಡ್ರೈವ್ / ಹಾರ್ಡ್ಡಿಸ್ಕ್ / ಮೊಬೈಲ್ ಫೋನ್ ಇತ್ಯಾದಿಗಳನ್ನು ಬಳಸದಂತೆ ಕ್ರಮವಹಿಸುವುದು. ಹಾಗೂ ಪ್ರಶ್ನೆಪತ್ರಿಕೆಗಳ ಮುದ್ರಣ ಕಾರ್ಯ ಆರಂಭವಾದ ಅದು ಮುಗಿಯುವವರೆಗೆ ಪ್ರಶ್ನೆಪತ್ರಿಕೆಗಳ ಮುದ್ರಣ ಕಾರ್ಯ ಹೊರತುಪಡಿಸಿ ಯಾವುದೇ ಬೇರೆ ಮುದ್ರಣ ಕಾರ್ಯ ನಡೆಸುವಂತಿಲ್ಲ.

ಖಾಸಗಿ ವ್ಯಕ್ತಿಗಳು ಮುದ್ರಣ ಸ್ಥಳಕ್ಕೆ ಪ್ರವೇಶಿಸುವುದನ್ನು ನಿಷೇದಿಸುವುದು

ಮುದ್ರಣ ಕಾರ್ಯ ಮುಗಿದ ನಂತರ ಹೆಚ್ಚುವರಿಯಾಗಿ ಪ್ರಶ್ನೆಪತ್ರಿಕೆಗಳು ಉಳಿದಿದ್ದಲ್ಲಿ ಅವುಗಳನ್ನು ಸೂಕ್ತ ಭದ್ರತೆಯೊಂದಿಗೆ ಸುರಕ್ಷಿತವಾಗಿ ಸಂರಕ್ಷಿಸಿಕೊಂಡು ಪರೀಕ್ಷೆ ಮುಗಿದ ನಂತರ ಅವುಗಳನ್ನು ನಿಯಮಾನುಸಾರ ವಿಲೇ ಮಾಡುವುದು.
ಪ್ರಶ್ನೆಪತ್ರಿಕೆಗಳು ಮುದ್ರಣ ಕಾರ್ಯ ಪೂರ್ಣಗೊಂಡ ನಂತರ ಪ್ರಶ್ನೆಪತ್ರಿಕೆಗಳ ಎಲ್ಲಾ ಮಾಹಿತಿಗಳನ್ನು ಹಾಕಿರುವುದನ್ನು ಮತ್ತು ಯಾವುದೇ ಮಾಹಿತಿಯು ಗಣಕಯಂತ್ರ/ಪ್ರಿಂಟರ್ನಲ್ಲಿ ಉಳಿದುಕೊಳ್ಳದಿರುವ ಬಗ್ಗೆ ಖಾತ್ರಿಪಡಿಸಿಕೊಳ್ಳುವುದು.
ಮುದ್ರಣ ಕಾರ್ಯ ನಿರ್ವಹಿಸುವಾಗ ಸರಿಯಾಗಿ ಮುದ್ರಣ ಆಗದಿರುವ, ಬಳಸಲು ಯೋಗ್ಯವಲ್ಲದ ಅಥವಾ ಅಪೂರ್ಣವಾಗಿ ಮುದ್ರಿತವಾಗಿರುವ ಕಾಗದಗಳನ್ನು ಸಂಪೂರ್ಣವಾಗಿ ನಾಶಮಾಡುವುದು.

ಪ್ರಶ್ನೆಪತ್ರಿಕೆ ಮುದ್ರಣ ಮತ್ತು ವ್ಯಾಕಿಂಗ್ ಗೆ ಸಹಾಯಕ್ಕಾಗಿ ತಮ್ಮ ಶಾಲೆಯ ಒಬ್ಬರು ಶಿಕ್ಷಕರನ್ನು ನೋಡಲ್ ಶಿಕ್ಷಕರೆಂದು ನಿಯೋಜನೆ ಮಾಡಿಕೊಳ್ಳುವುದು ಆದರೆ ನೋಡಲ್ ಶಿಕ್ಷಕರಿಗಾಗಲಿ /ಶಾಲಾ ಇತರೆ ಶಿಕ್ಷಕರಿಗಾಗಲಿ / ಶಾಲಾ ಆಡಳಿತ ಮಂಡಲಿಗಾಗಲಿ ಯಾವುದೇ ಕಾರಣಕ್ಕೂ, ಶಾಲಾ ಲಾಗಿನ್ ಮತ್ತು OTP ನೀಡುವಂತಿಲ್ಲ. ಪ್ರಶ್ನೆಪತ್ರಿಕೆ ಮುದ್ರಣ ಮತ್ತು ವಿತರಣೆಯ ಪೂರ್ಣ ಜವಾಬ್ದಾರಿಯು ಶಾಲಾ ಮುಖ್ಯ ಶಿಕ್ಷಕರಾಗಿರುತ್ತದೆ.

ಪ್ರಶ್ನೆಪತ್ರಿಕೆಯನ್ನು ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಮುದ್ರಿಸಿದ ನಂತರ ನೋಡಲ್ ಶಿಕ್ಷಕರೆದುರು ಕೊಠಡಿವಾರು ಬೇಡಿಕೆ ಪಟ್ಟಿಯಂತೆ ಸುರಕ್ಷಿತವಾಗಿ ಪ್ಯಾಕಿಂಗ್ ಮಾಡಿ, ಪ್ಯಾಕಿಂಗ್ ಅನ್ನು ಬದಲಾಯಿಸಲಾಗದ ಸೀಲ್ ಅನ್ನು ಬಳಸಿ ಸೀಲಿಂಗ್ ಕಾರ್ಯದ ಬಳಿಕ ಸುರಕ್ಷಿತವಾಗಿಟ್ಟುಕೊಳ್ಳುವುದು. ಪರೀಕ್ಷಾ ಸಮಯ ಪ್ರಾರಂಭವಾಗುವವರೆಗೂ ಯಾವುದೇ ಕಾರಣಕ್ಕೂ ಪ್ರಶ್ನೆಪತ್ರಿಕೆ ಪ್ಯಾಕಿಂಗ್ ಓಪನ್ ಮಾಡದಂತೆ ಎಚ್ಚರಿಕೆ ವಹಿಸುವುದು.

ಸೀಲ್ ಮಾಡಲಾದ ಪ್ರಶ್ನೆಪತ್ರಿಕೆ ಪ್ಯಾಕೆಟ್ ಗಳನ್ನು ಪರೀಕ್ಷಾ ಕೊಠಡಿಯ ಮೇಲ್ವಿಚಾರಕರಿಗೆ ಹಸ್ತಾಂತರಿಸಿ ಸ್ವೀಕೃತಿ ಪಡೆಯುವುದು. ನಂತರ ಪರೀಕ್ಷಾ ಕೊಠಡಿಯ ಮೇಲ್ವಿಚಾರಕರೇ ಸಂಪೂರ್ಣ ಜವಾಬ್ದಾರರಾಗಿರುತ್ತಾರೆ.ಪ್ರಶ್ನೆ ಪತ್ರಿಕೆಗಳನ್ನು ಯಾವುದೇ ವಿದ್ಯುನ್ಮಾನ ವಿಧಾನದಲ್ಲಿ ವರ್ಗಾವಣೆ ಮಾಡದಂತೆ ಶಾಲಾ ಮುಖ್ಯಶಿಕ್ಷಕರು ಎಚ್ಚರಿಕೆ ವಹಿಸುವುದು.

ಪ್ರಶ್ನೆಪತ್ರಿಕೆಗಳನ್ನು ಒಂದೇ ಐಪಿ ವಿಳಾಸದಲ್ಲಿ ಒಂದೇ ಗಣಕಯಂತ್ರದಲ್ಲಿ ಡೌನ್ ಲೋಡ್ ಮಾಡುವುದು ಕಡ್ಡಾಯವಾಗಿರುತ್ತದೆ. ಕೇಂದ್ರ ಕಛೇರಿಯಿಂದ ಐಪಿ ವಿಳಾಸವನ್ನು ನಿಗಾವಹಿಸಲಾಗುವುದು. ಒಂದು ವೇಳೆ ಒಂದಕ್ಕಿಂತ ಹೆಚ್ಚು ಐಪಿ ವಿಳಾಸದಲ್ಲಿ ಡೌನ್ಲೋಡ್ ಮಾಡಿರುವುದು ಕಂಡುಬಂದಲ್ಲಿ ಅಂತಹ ಮುಖ್ಯಶಿಕ್ಷಕರ ಮೇಲೆ ಕಾನೂನಾತ್ಮಕ ಕ್ರಮ ಕೈಗೊಳ್ಳಲಾಗುವುದು.
ವಿದ್ಯಾರ್ಥಿಗಳು ಮತ್ತು ಸಹ ಶಿಕ್ಷಕರು ಪರೀಕ್ಷೆಗೆ ಮೊಬೈಲ್ ತರದಂತೆ ತಿಳಿಸುವುದು.

ಶಾಲೆಯಲ್ಲಿ ಮೊಬೈಲ್ ಸ್ವಾಧಿನಾಧಿಕಾರಿಯಾಗಿ ಒಬ್ಬರು ಶಿಕ್ಷಕರನ್ನು ನೇಮಿಸುವುದು. ಒಂದು ವೇಳೆ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಮೊಬೈಲ್ನ್ನು ತಂದಿದ್ದಲ್ಲಿ ಪರೀಕ್ಷೆ ಪ್ರಾರಂಭಕ್ಕಿಂತ ಮುಂಚಿತವಾಗಿ ಪಡೆದು ಪರೀಕ್ಷೆ ಮುಗಿಯುವವರೆವಿಗೂ ಸ್ವಾಧಿನಾಧಿಕಾರಿಗಳ ಸುಪರ್ದಿಯಲ್ಲಿ ಇಡತಕ್ಕದ್ದು.
ಪರೀಕ್ಷಾ ನಂತರ ಉತ್ತರ ಪತ್ರಿಕೆಗಳ ಮೌಲ್ಯಮಾಪನವನ್ನು ಶಾಲಾ ಹಂತದಲ್ಲಿ ಮಾಡುವುದು.

ನೋಡಲ್ ಶಿಕ್ಷಕರ ಜವಾಬ್ದಾರಿಗಳು:
ಪೂರ್ವಸಿದ್ಧತಾ ಪರೀಕ್ಷೆ-2 ಮತ್ತು 3 ಕ್ಕೆ ಸಂಬಂಧಿಸಿದಂತೆ ಪ್ರಶ್ನೆಪತ್ರಿಕೆ ಮುದ್ರಣ, ಪ್ಯಾಕಿಂಗ್ ಮತ್ತು ವಿತರಣೆಗೆ ಖುದ್ದು ಹಾಜರಿದ್ದು, ಶಾಲಾ ಮುಖ್ಯ ಶಿಕ್ಷಕರಿಗೆ ಸಹಾಯ ಮಾಡುವುದು.
ಪ್ರಶ್ನೆಪತ್ರಿಕೆ ಮುದ್ರಣ, ಪ್ಯಾಕಿಂಗ್ ಮತ್ತು ವಿತರಣೆಗೆ ಸಮಯದಲ್ಲಿ ಗೌಪ್ಯತೆಯನ್ನು ಕಾಪಾಡುವುದು. ಈ ಸಮಯದಲ್ಲಿ ಮೊಬೈಲ್ ಉಪಯೋಗಿಸಕೂಡದು.
ಶಾಲಾ ಲಾಗಿನ್ ಮತ್ತು OTP ನಿರ್ವಹಣೆಯ ಕಾರ್ಯವನ್ನು ನೋಡಲ್ ಶಿಕ್ಷಕರು ನಿರ್ವಹಿಸುವಂತಿಲ್ಲ.
ವಿದ್ಯಾರ್ಥಿಗಳಿಗೆ ಸೂಚನೆಗಳು :
ಪೂರ್ವ ಸಿದ್ಧತಾ ಪರೀಕ್ಷಾ ದಿನದಂದು 10ನೇ ತರಗತಿ ವಿದ್ಯಾರ್ಥಿಗಳು ಬೆಳಗ್ಗೆ 9.00 ಗಂಟೆಗೆ ಶಾಲೆಗೆ ಹಾಜರಾಗುವುದು.
ಪರೀಕ್ಷೆಗೆ ವಿದ್ಯಾರ್ಥಿಗಳು ಮೊಬೈಲ್ ತರಬಾರದು.
ಪರೀಕ್ಷಾ ಕೊಠಡಿಗೆ ಪುಸ್ತಕ ಮತ್ತು ಗೈಡ್ ಇವುಗಳನ್ನು ತರಬಾರದು.
ಪರೀಕ್ಷಾ ಸಮಯಕ್ಕೆ ಮುನ್ನ ಯಾವುದೇ ಶಿಕ್ಷಕರು / ಪೋಷಕರು / ಕಿಡಿಗೇಡಿಗಳು ಪ್ರಶ್ನೆಪತ್ರಿಕೆ ನೀಡಿದ್ದಲ್ಲಿ ಸ್ವೀಕರಿಸಬಾರದು ಮತ್ತು ಇವುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಬಾರದು.


Next Post Previous Post