ನಾವು ಎಲ್ಲರೂ ಒಂದೇ ಕುಟಂಬದಂತೆ ಒಟ್ಟಾಗಿದ್ದೇವೆ: ಒಮಾನ್ ನಲ್ಲಿ ಪ್ರಧಾನಿ ಮೋದಿ ಮಾತು | ಭಾರತ- ಒಮಾನ್ ನಡುವೆ ವ್ಯಾಪಾರ
ಮಸ್ಕತ್: ಜಾಗತಿಕ ಸಂಘರ್ಷ, ಜಾಗತಿಕ ಸವಾಲುಗಳ ನಡುವೆಯೂ ಭಾರತದ ಆರ್ಥಿಕ ಅಭಿವೃದ್ಧಿಯ ಬೆಳವಣಿಗೆ ಶೇ.8ಕ್ಕಿಂತಲೂ ಅಧಿಕವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.
ಗುರುವಾರ (ಡಿ.18) ಮಸ್ಕತ್ ನಲ್ಲಿ ಆಯೋಜಿಸಿದ್ದ “ಭಾರತ- ಒಮಾನ್ ವಿತ್ತ ಶೃಂಗ”ವನ್ನು ಉದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಿದರು. ಅವರು ಒಮಾನ್ ನಲ್ಲಿ ಮೈತ್ರಿ ಪರ್ವ ಕಾರ್ಯಕ್ರಮದಡಿ “ಭಾರತೀಯ ಸಮುದಾಯ ಮತ್ತು ಒಮಾನ್ ನ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತ ಇದೊಂದು ಕುಟುಂಬ ಸದಸ್ಯರ ಸಂಭ್ರಮವಾಗಿದೆ. ನಾವು ಇಂದು ಎಲ್ಲರೂ ಒಂದು ಕುಟಂಬದಂತೆ ಒಟ್ಟಾಗಿದ್ದೇವೆ. ಆ ನಿಟ್ಟಿನಲ್ಲಿ ನಾವು ಭಾರತೀಯರಾಗಿ ಸಂಭ್ರಮಪಡಬೇಕಾಗಿದೆ ಎಂದರು.
ಪ್ರತೀ ಬಾರಿಯೂ ಭಾರತೀಯ ಸಂಪ್ರದಾಯ ಹೊಸ ಆವಿಷ್ಕಾರಗಳನ್ನು, ಅಭಿವೃದ್ಧಿಯನ್ನು ಕಾಣುತ್ತಿದೆ. ಈ ಮೂಲಕ ಜಾಗತಿಕವಾಗಿ ಹರಡಿರುವ ಭಾರತೀಯರು ಎಲ್ಲೆಲ್ಲಾ ವಾಸವಾಗಿದ್ದಾರೋ ಅಲ್ಲಿ ವೈವಿಧ್ಯತೆಯ ಭಾವೈಕ್ಯದಿಂದ ಗೌರವಿಸಲ್ಪಡುತ್ತಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದರು.
ಭಾರತ ಮತ್ತು ಒಮಾನ್ ನಡುವೆ ಸಮಗ್ರ ಆರ್ಥಿಕ ಸಹಭಾಗಿತ್ವದ ಒಪ್ಪಂದಕ್ಕೆ ಸಹಿಹಾಕುವ ಮೂಲಕ ನಮ್ಮ ಸ್ನೇಹಕ್ಕೆ ಹೊಸ ಭರವಸೆಯನ್ನು ತುಂಬಿದೆ. ಕಳೆದ 11 ವರ್ಷಗಳ ಆಡಳಿತದಲ್ಲಿ ಭಾರತ ಕೇವಲ ತನ್ನ ನೀತಿಗಳಲ್ಲಿ ಮಾತ್ರ ಬದಲಾವಣೆ ತಂದಿಲ್ಲ, ದೇಶದ ಆರ್ಥಿಕ ಡಿಎನ್ ಎ ಅನ್ನೇ ಬದಲಾಯಿಸಿದೆ ಎಂದರು.
ಈ ಸಂದರ್ಭದಲ್ಲಿ ಕೇಂದ್ರದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಶೃಂಗವನ್ನು ಉದ್ದೇಶಿಸಿ ಮಾತನಾಡುತ್ತ, ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ವ್ಯಾಪಾರ ಒಪ್ಪಂದವು 10 ಬಿಲಿಯನ್ ಡಾಲರ್ ದಾಟಿದ್ದು, ಇದೊಂದು ಆರಂಭಿಕ ಹಂತವಾಗಿದೆ. ಭವಿಷ್ಯದಲ್ಲಿ ನಾವು ವ್ಯಾಪಾರ ಒಪ್ಪಂದವನ್ನು ಇನ್ನಷ್ಟು ವೈವಿಧ್ಯಮಯಗೊಳಿಸಬೇಕಾಗಿದೆ ಎಂದು ತಿಳಿಸಿದರು.