ಪಂಚಾಯತ್ ಜಾಗ ವಿಂಗಡಿಸಿ ದಫನ ಭೂಮಿಗೆ ನೀಡಿ ಮಾಡಿದ ನಿರ್ಣಯ ರದ್ದುಪಡಿಸುವಂತೆ 5 ಸದಸ್ಯರ ಆಗ್ರಹ, ಅಧ್ಯಕ್ಷೆ ಸಹಿತ 4 ಸದಸ್ಯರ ಆಕ್ಷೇಪ | ಸದಸ್ಯ ರೊಳಗೆ ಚರ್ಚೆ, ಗದ್ದಲ ಕಾನೂನಿನಲ್ಲಿ ವಿವಾದ ಬಗೆಹರಿಸಲು ನಿರ್ಣಯ Panaje graama panchayat saamaanya sabhe


ಪುತ್ತೂರು: ಪಾಣಾಜೆ ಗ್ರಾಮ ಪಂಚಾಯತ್ಗೆ ಕಾಯ್ದಿರಿಸಿದ ಜಾಗವನ್ನು ಮಸೀದಿಯ ದಫನ ಭೂಮಿಗೆ ನೀಡಿ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಮಾಡಿರುವ ನಿರ್ಣಯದ ಪರ ಹಾಗೂ ವಿರೋಧವಾಗಿ ಸಭೆಯಲ್ಲಿ ಚರ್ಚೆ ನಡೆದು ಗದ್ದಲವೇರ್ಪಟ್ಟ ಘಟನೆ ಪಾಣಾಜೆ ಗ್ರಾ.ಪಂ.ಸಾಮಾನ್ಯ ಸಭೆಯಲ್ಲಿ ನಡೆದಿದೆ.ನಿರ್ಣಯವವನ್ನು ರದ್ದು ಗೊಳಿಸಿ ಯಥಾಸ್ಥಿತಿ ಕಾಯ್ದುಕೊಳ್ಳುವ ಕುರಿತು ಎಂದು ನಿರ್ಣಯಿಸುವಂತೆ ಉಪಾಧ್ಯಕ್ಷರ ಸಹಿತ ಐದು ಮಂದಿ ಸದಸ್ಯರು ಒತ್ತಾಯಿಸಿದರೆ, ಕಳೆದಸಭೆಯಲ್ಲಿ ಮಾಡಿದ ನಿರ್ಣಯವನ್ನು ಬದಲಾಯಿಸುವುದಕ್ಕೆ ಅಧ್ಯಕ್ಷರ ಸಹಿತ ನಾಲ್ವರು ವಿರೋಧಿಸಿ, ಸದಸ್ಯರ ನಡುವೆ ಚರ್ಚೆ ನಡೆದು ನ್ಯಾಯಾಲಯದಲ್ಲೇ ಕಾನೂನಿನ ಪ್ರಕಾರ ನೋಡಿಕೊಳ್ಳುವಂತೆ ನಿರ್ಣಯಿಸಿದ ಘಟನೆ ನಡೆಯಿತು.ಗ್ರಾಮ ಪಂಚಾಯತ್ ಸಾಮಾನ್ಯ ಸಭೆ ಅಧ್ಯಕ್ಷೆ ಮೈಮೂನತ್ತುಲ್ ಮೆಹ್ರಾರವರ ಅಧ್ಯಕ್ಷತೆಯಲ್ಲಿ ನಡೆಯಿತು.

ನಿರ್ಣಯ ರದ್ದು ಮಾಡುವಂತೆ ಒತ್ತಾಯ: ಜಮಾ ಖರ್ಚು ಬಗ್ಗೆ ಚರ್ಚೆ ಆದ ಬಳಿಕ ಸಭೆಯಲ್ಲಿ ಮಾಡಿದ ನಿರ್ಣಯಗಳನ್ನು ಜಾರಿಗೆ ತರುವುದಿಲ್ಲ. ಅಲ್ಲದೆ ನಿರ್ಣಯಗಳನ್ನು ರಫ್ ಪುಸ್ತಕದಲ್ಲಿ ಬರೆಯಲಾಗುತ್ತದೆ.ಇದರಿಂದ ಗೊಂದಲ ನಿರ್ಮಾಣವಾಗುತ್ತದೆ ಎಂದು ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.

ಬರೆದ ನಿರ್ಣಯಗಳನ್ನು ಓದಬೇಕು ಎಂದು ಸದಸ್ಯರು ಹೇಳಿದರು.ಪಂಚಾಯತ್‌ಗೆ ಕಾಯ್ದಿರಿಸಿದ ಜಾಗವನ್ನು ವಿಂಗಡಣೆ ಮಾಡಿ ಮಸೀದಿಯ ದಫನ ಭೂಮಿಗೂ ನೀಡುವಂತೆ ಕಳೆದ ಸಾಮಾನ್ಯ ಸಭೆಯಲ್ಲಿ ಮಾಡಿರುವ ನಿರ್ಣಯದ ಬಗ್ಗೆ ಸದಸ್ಯರು ಪ್ರಸ್ತಾಪ ಮಾಡಿದರು. ಜಾಗದ ವಿವಾದ ಕೋರ್ಟ್‌ನಲ್ಲಿ ಇರುವ ಕಾರಣ ಪಂಚಾಯತ್‌ಗೆ ಬರುವ ಹಾಗೆ ಮಾಡಿ ಎಂದು ನಾವು ಹೇಳಿದ್ದು.ಕೋಟ್ ೯ನಲ್ಲಿರುವಾಗ ನೀವು ಹೇಗೆ ನಿರ್ಣಯ ಮಾಡಿದ್ದೀರಿಈ ನಿರ್ಣಯಕ್ಕೆ ವಿರೋಧ ಎಷ್ಟು? ಸಹಮತ ಎಷ್ಟಿದೆ ಎಂದು ಸೂಚಿಸಬೇಕಿತ್ತು ಎಂದು ಸದಸ್ಯರಾದ ಸುಭಾಷ್ ರೈ, ಮೋಹನ್ ನಾಯ್ಕ, ಜಯಶ್ರೀ, ಭಾರತಿ ಭಟ್ ಹಾಗೂ ಜಯಶ್ರೀ ಹೇಳಿದರು. ಜಾಗದ ಬಗ್ಗೆ ಗೊಂದಲ ಬೇಡ ಎಂದು ಹಾಗೆ ಮಾಡಿದ್ದು ಎಂದು ಅಧ್ಯಕ್ಷರು ಹೇಳಿದಾಗ ಸದಸ್ಯ ಸುಭಾಸ್ ರೈರವರು, ಕೇಸ್ ಕೋರ್ಟಲ್ಲಿರುವಾಗ ನಿರ್ಣಯ ಮಾಡಲು ಆಗುತ್ತದಾ? ಎಂದು ಪ್ರಶ್ನಿಸಿದರು.ಹಿಂದಿನ ನಿರ್ಣಯವನ್ನು ರದ್ದು ಮಾಡಿ. ಅದಕ್ಕೆ ನಮ್ಮ ವಿರೋಧವಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿ, ಹಿಂದಿನ ನಿರ್ಣಯ ತಪ್ಪು, ಇದನ್ನು ರದ್ದು ಮಾಡಿ ಎಂದು ಆಗ್ರಹಿಸಿದರು. ಅದಕ್ಕೆ ಇತರ 4 ಸದಸ್ಯರು ಸಹಮತ ಸೂಚಿಸಿದರು.

ಪ್ರತಿಭಟನೆ ಮಾಡಿದ್ದು ಯಾಕೆ?: ನಿರ್ಣಯದ ವಿರುದ್ಧ ರಾಜಕೀಯ ಮುಖಂಡರನ್ನು ಸೇರಿಸಿ ಪ್ರತಿಭಟನೆ ಮಾಡಿದ್ದು ಯಾಕೆ? ಹೊರಗಿನಿಂದ ರಾಜಕೀಯ ಮುಖಂಡರು ಹಾಗೂ ಜನರು ಯಾಕೆ ಬಂದದ್ದು? ಎಂದು ಅಧ್ಯಕ್ಷರು ಹಾಗೂ ಸದಸ್ಯೆ ವಿಮಲ ಕೇಳಿ, ಪ್ರತಿಭಟನೆಯಲ್ಲಿ ಪಂಚಾಯತ್ ಸದಸ್ಯರು ಮಾತನಾಡಲಿಲ್ಲ ಬಂದ ಮುಖಂಡರೇ ಮಾತನಾಡಿದ್ದಾರೆ ಎಂದು ಹೇಳಿದರು.ಸದಸ್ಯ ಅಬೂಬಕ್ಕರ್ ರವರು ಇಂದು ಇಲ್ಲಿ ಮಾಡುವ ಚರ್ಚೆಗೆ ನ್ಯಾಯ ಇದೆ.ಇಲ್ಲಿ ಮಾಡುವ ಚರ್ಚೆಯನ್ನು ಹೊರಗಿನಿಂದ ಜನ ಸೇರಿಸಿ ಪ್ರತಿಭಟನೆ ಮೂಲಕ ಮಾಡಿದ್ದು ತಪ್ಪು ದುಡುಕಿ ನಿರ್ಧಾರ ಮಾಡಿದ್ದೀರಿ ಎಂದು ಹೇಳಿದರಲ್ಲದೆ, ನಿರ್ಣಯ ಮಾಡಿದ ತಕ್ಷಣ ಜಾಗ ಹೋಗುವುದಿಲ್ಲ. ಪ್ರತಿಭಟನೆಗೆ ಅವಕಾಶ ಕೊಟ್ಟದ್ದೇ ತಪ್ಪು ಎಂದರು.

ನಿರ್ಣಯವನ್ನು ಬಹುಮತಕ್ಕೆ ಹಾಕಿ: ಸಭೆಯಲ್ಲಿ ನಿರ್ಣಯ ಮಾಡಿ ಬಳಿಕ ನಾವು ಥಂಬ್ ಕೊಟ್ಟು ಹೋದ ಮೇಲೆ ನಿಮಗೆ ಬೇಕಾದ ಹಾಗೆ ನಿರ್ಣಯ ಬರೆದಿರುವುದು ತಪ್ಪು ಎಂದು ಸದಸ್ಯ ಸುಭಾಸ್‌ ರೈ ಹೇಳಿದರು. ನಿರ್ಣಯಕ್ಕೆ ನನ್ನ ವಿರೋಧ ಉಂಟು ಎಂದು ನೀವು ಹೇಳಿದ್ದೀರಿ ಮತ್ತು ನಮ್ಮ 4 ಜನರ ಸಹಮತ ಇದ್ದ ಕಾರಣ ಎಂದು ಬರೆಯಿರಿ ಎಂದು ನಾನು ಹೇಳಿದ್ದೆ ಎಂದು ಅಧ್ಯಕ್ಷರು ಹೇಳಿದರು. ಇದಕ್ಕೆ ಇತರ ಮೂವರು ಸದಸ್ಯರ ಸಹಮತ ಇತ್ತಾ? ಇಲ್ಲಿರುವ ಇಬ್ಬರು ಸದಸ್ಯರ ಸಹಮತ ಉಂಟಾ ಎಂದು ಕೇಳಿ ಗಡಿ ಗುರುತು ಮಾಡಲು ಮಾತ್ರ ಸಹಮತ ಸೂಚಿಸಿದ್ದು ನಿರ್ಣಯಕ್ಕೆ ಸಹಮತ ಅವರು ಸೂಚಿಸಿರಲಿಲ್ಲ. ಆದುದರಿಂದ ನಿರ್ಣಯ ಬಹುಮತಕ್ಕೆ ಹಾಕಿ ಎಂದು ಸದಸ್ಯರಾದ ಸುಭಾಷ್ ರೈ, ಮೋಹನ್ ನಾಯ್ಕ, ಜಯಶ್ರೀ, ಭಾರತಿ ಭಟ್, ಸುಲೋಚನ ಒತ್ತಾಯಿಸಿದರು.ನಿರ್ಣಯ ಮಾಡಿ ನಾವು ಥಂಬ್ ಕೊಟ್ಟು ಹೋದ ಮೇಲೆ 2 ದಿವಸ ಬಿಟ್ಟು ಬೇಕಾದ ರೀತಿ ನಿರ್ಣಯ ಮಾಡಿರುವುದು ತಪ್ಪು ಎಂದರು.

ಪಿಡಿಒ ಸ್ಪಷ್ಟನೆ ನೀಡಲಿ: ಚರ್ಚೆ ನಡೆಯುತ್ತಿರುವಾಗ, ಪಿಡಿಒರವರೇ ಸ್ಪಷ್ಟನೆ ನೀಡಲಿ ಎಂದು ಸದಸ್ಯರು ಒತ್ತಾಯಿಸಿದರು. ಪಿಡಿಒರವರು ಮಾತನಾಡಿ, ನಾನು ರಫ್ ಬುಕ್‌ ನಲ್ಲಿಯೇ ಯಾವಾಗಲು ನಿರ್ಣಯ ಬರೆಯುವುದು. ಮೊನ್ನೆ ಅಧ್ಯಕ್ಷರು ನಿರ್ಣಯ ಬರೆದಿದ್ದೀರ ಎಂದು

ಕೇಳಿದರು.ನಿರ್ಣಯಕ್ಕೆ ಕೃಷ್ಣಪ್ಪ ಪೂಜಾರಿಯವರ ಬಹುಮತ ಇರಲಿಲ್ಲ. ಬಳಿಕೆ ಅಧ್ಯಕ್ಷರು ಅವರಲ್ಲಿ ಮಾತನಾಡಿ ಬೆಂಬಲ ಇದೆ ಎಂದು ಹೇಳಿದ್ದರು. ಪುಸ್ತಕ ಹಿಡಿದುಕೊಂಡು ಅಧ್ಯಕ್ಷರ ಸಮ್ಮುಖದಲ್ಲೇ ನಿರ್ಣಯ ಬರೆದದ್ದು ಇದು ಸತ್ಯ ಎಂದು ಹೇಳಿದರು. ನಾನು ಗೊಂದಲ ಮಾಡಿದ್ದು ಎಂದು ಪೇಪರ್ನಲ್ಲಿ ಬಂದಿದೆ ಎಂದವರು ಹೇಳಿದರು. ನಾನು ಪ್ರತಿಭಟನೆಗೆ ಅವಕಾಶ ಕೊಡಲಿಲ್ಲ. ಅವಕಾಶ ಕೊಡುವಂತೆ ಮನವಿ ಮಾಡಿದ ಪತ್ರಕ್ಕೆ ರಿಸೀವ್‌ಡ್ ಅಂತ ಮಾತ್ರ ಕೊಟ್ಟದ್ದು ಎಂದು ಸ್ಪಷ್ಟನೆ ನೀಡಿದರು. ಇದಕ್ಕೆ ಅಧ್ಯಕ್ಷರು ಮಾತನಾಡಿ ನಾನು ಸಭೆಯಲ್ಲಿ ಪ್ರಸ್ತಾಪ ಮಾಡಿದ್ದನ್ನೇ ಬರೆಯಲು ಹೇಳಿದ್ದು, ಅವರದು 5 ಜನರ ವಿರೋಧವಿದೆ. ನಮ್ಮದು5 ಜನರ ಸಹಮತ ಇದೆ ಎಂದು ಹೇಳಿದ್ದೆ ಎಂದು ಸ್ಪಷ್ಟನೆ ನೀಡಿದರು.

ದಾಖಲೆಯನ್ನೇ ತೋರಿಸಿಲ್ಲ: ವಿವಾದಿತ ಜಾಗದ ಬಗ್ಗೆ ಆರ್‌ಟಿಸಿ ದಾಖಲೆಗಳನ್ನು ತೋರಿಸಿ ಎಂದು ಸಭೆಯಲ್ಲಿ ಹಲವು ಬಾರಿ ಹೇಳಿದೆ. ಆದರೆ ದಾಖಲೆ ತೋರಿಸಿರಲಿಲ್ಲ. ಎಂದು ಸದಸ್ಯೆ ವಿಮಲಾ ಹೇಳಿದರು. ಜಾಗದ ಬಗ್ಗೆ ಆದೇಶ ಈ ರೀತಿ ಆಗಿದೆ ಎಂದು ದಾಖಲೆ ತೋರಿಸಬಹುದಿತ್ತು. ಅಥವಾ ಓದಿ ಹೇಳಬಹುದಿತ್ತು 5 ವರ್ಷದಲ್ಲಿ ಒಮ್ಮೆಯಾದರೂ ಸಂಬಂಧಿಸಿದ ದಾಖಲೆಯನ್ನು ತಿಳಿಸಿರಲಿಲ್ಲ ಎಂದು ಹೇಳಿದರು. ಅದಕ್ಕೆ ಭಾರತಿ ಭಟ್‌ ರವರು, ನಾನು ಅಧ್ಯಕ್ಷೆ ಯಾಗಿದ್ದಾಗ ಜಾಗದ ಸ್ಥಳಕ್ಕೆ ಹೋಗಿದ್ದೇವೆ.ದಾಖಲೆ ಇಲ್ಲದೆ ನಾವು ಹೋಗುತ್ತೇವಾ ಎಂದು ಪ್ರಶ್ನಿಸಿದರು. ಇದಕ್ಕೆ ಇತರ ಸದಸ್ಯರು ಸಹಮತ ಸೂಚಿಸಿದರು.ಇದಕ್ಕೆ ಕೋರ್ಟೀ ತೀರ್ಮಾನ ಮಾಡಲಿ ಎಂದು ವಿಮಲಾ ಹೇಳಿದರು. ಕೋರ್ಟ್ನಲ್ಲಿರುವಾಗ ನಿರ್ಣಯ ಮಾಡಿದ್ದು ಯಾಕೆ? ನಿರ್ಣಯಕ್ಕೆ ಒಪ್ಪಿಕೊಂಡದ್ದು ಯಾಕೆ ಎಂದು ಇತರ ಸದಸ್ಯರು ಪ್ರಶ್ನಿಸಿದರು.

ಕಟ್ಟಡ ಅಕ್ರಮ ಎಂದು ಹೇಳಿದ್ದು ಸರಿಯಾ?: ನಿರ್ಣಯದ ವಿರುದ್ಧ ಮಾಡಿದ ಪ್ರತಿಭಟನೆಯಲ್ಲಿ ಪಂಚಾಯತ್ನ ನೂತನ ಕಟ್ಟಡ ಅಕ್ರಮ ಎಂದು ಹೇಳಿದ್ದಾರೆ? ಅಕ್ರಮ ಅಲ್ಲ ಎಂದು ನಿಮಗೆ ಹೇಳಬಹುದಿತ್ತಲ್ಲ ಎಂದು ಅಧ್ಯಕ್ಷರು ಹಾಗೂ ಸದಸ್ಯರಾದ ವಿಮಲ, ಅಬೂಬಕ್ಕರ್, ನಾರಾಯಣ ನಾಯಕ್ ಕೇಳಿದರು. ಅದರ ಬಗ್ಗೆ ಗ್ರಾಮಸ್ಥರಿಗೆ ಸಂಶಯ ಬಂದಿದೆ. ಅದಕ್ಕೆ ಅವರು ಹೇಳಿದ್ದಿರಬಹುದು.ನೀವು ದಾಖಲೆ ಕೊಡಿ ಎಂದು ಸದಸ್ಯರಾದ ಸುಭಾಷ್ ರೈ, ಮೋಹನ್ ನಾಯ್ಕ, ಜಯಶ್ರೀ, ಭಾರತಿ ಭಟ್, ಸುಲೋಚನರವರು ಹೇಳಿದರು.ತುಂಡು ಗುತ್ತಿಗೆ ಕೊಡುಬಹುದು ಎಂದು ಆದೇಶ ಇದೆ. ಸಂಶಯ ಇದ್ದರೆ ಮಾಹಿತಿ ಹಕ್ಕಿನಲ್ಲಿ ದಾಖಲೆ ತೆಗೆದುಕೊಳ್ಳಲಿ ಎಂದು ವಿಮಲಾ ಹೇಳಿದರು.

ನಿರ್ಣಯ ರದ್ದು ಮಾಡುವಂತೆ ಒತ್ತಾಯ:
ಜಾಗ ವಿಂಗಡಣೆ ಮಾಡಿ ಮಾಡಿದ ನಿರ್ಣಯಕ್ಕೆ ನಮ್ಮ ವಿರೋಧವಿದೆ. ಅದನ್ನು ರದ್ದು ಪಡಿಸಬೇಕು.45 ಸೆಂಟ್ಸ್ ಜಾಗವನ್ನು ಮಸೀದಿಗೆ ವಿಂಗಡಣೆ ಮಾಡಿದ ನಿರ್ಣಯಕ್ಕೆ ಸಂಪೂರ್ಣ ವಿರೋಧವಿದೆ. ಅಲ್ಲದೆ ಸದ್ರಿ ಜಾಗವು ಉಚ್ಚನ್ಯಾಯಾಲಯದಲ್ಲಿರುವ ಕಾರಣ ಯಥಾಸ್ಥಿತಿಯಲ್ಲಿರುವಂತೆ ಕಾಯ್ದುಕೊಳ್ಳಬೇಕು ಎಂದು ಉಪಾಧ್ಯಕ್ಷ ಜಯ ಶ್ರೀ, ಸದಸ್ಯರಾದ ಸುಭಾಸ್ ರೈ, ಮೋಹನ್ ನಾಯ್ಕ, ಸುಲೋಚನ ಹಾಗೂ ಭಾರತಿ ಭಟ್ ರವರು ಪಿಡಿಒರವರಿಗೆ ಮನವಿ ಸಲ್ಲಿಸಿದರು


ನಿರ್ಣಯ ರದ್ದು ಮಾಡಲು ಆಕ್ಷೇಪ: ಸ್ಥಳ ವಿಂಗಡಣೆ ಮಾಡಿ ಮಸೀದಿಗೆ ಕೊಡುವ ನಿರ್ಣಯಕ್ಕೆ ವಿರೋಧವಿದ್ದು ಅದನ್ನು ರದ್ದುಪಡಿಸುವಂತೆ ಸಭೆಯಲ್ಲಿ ಉಪಾಧ್ಯಕ್ಷೆ ಇತರ ನಾಲ್ಕು ಮಂದಿ ಸದಸ್ಯರು ಮನವಿ ಮಾಡಿದರು. ಇದರ ಬಗ್ಗೆ ಚರ್ಚೆ ನಡೆದು, ವಿಂಗಡಣೆ ಮಾಡಿ ಕೊಡುವ ನಿರ್ಣಯ ಬಹುಮತದ ನಿರ್ಣಯ. ಆದುದರಿಂದ ಅದನ್ನು ಯಾವುದೇ ಕಾರಣಕ್ಕೂ ರದ್ದು ಮಾಡುವುದಕ್ಕೆ ಆಗುವುದಿಲ್ಲ ಎಂದು ಅಧ್ಯಕ್ಷೆ ಮೈಮೂನತ್ತುಲ್ ಮೆಹ್ರಾ, ಸದಸ್ಯರಾದ ಅಬೂಬಕ್ಕರ್, ವಿಮಲ ಹಾಗೂ ನಾರಾಯಣ ನಾಯಕ್ ರವರು ಆಕ್ಷೇಪ ವ್ಯಕ್ತಪಡಿಸಿ ಕಾನೂನಿನ ಚೌಕಟ್ಟಿನಲ್ಲಿ ವಿವಾದ ಬಗೆಹರಿಸುವಂತೆ ನಿರ್ಣಯಿಸಲಾಯಿತು.

ಪಿಡಿಒ ಆಶಾ ಸ್ವಾಗತಿಸಿ ವಂದಿಸಿದರು. ಅಧ್ಯಕ್ಷೆ ಮೈಮೂನತ್ತುಲ್ ಮೆಹ್ರಾ, ಉಪಾಧ್ಯಕ್ಷೆ ಜಯಶ್ರೀ, ಸದಸ್ಯರಾದ ವಿಮಲ, ಸುಲೋಚನ, ಭಾರತಿ ಭಟ್, ಮೋಹನ್ ನಾಯ್ಕ ಸುಭಾಸ್ ರೈ, ಅಬೂಬಕರ್, ನಾರಾಯಣ ನಾಯಕ್ ಚರ್ಚೆಯಲ್ಲಿ ಭಾಗವಹಿಸಿದರು.
Next Post Previous Post