ಬಂಟ್ವಾಳ ಪುರಸಭೆ ಜನನ-ಮರಣ ಪ್ರಮಾಣಪತ್ರ ವಿಭಾಗದ ಸಿಬ್ಬಂದಿ ಉದ್ಧಟತನಕ್ಕೆ ಬ್ರೇಕ್:ವಕೀಲರ ನಿಯೋಗದ ಮನವಿಗೆ ಮುಖ್ಯ ಅಧಿಕಾರಿ ಸಕಾರಾತ್ಮಕ ಸ್ಪಂದನೆ
ಬಂಟ್ವಾಳ, ಜು.14: ಬಂಟ್ವಾಳ ಪುರಸಭೆಯ ಜನನ-ಮರಣ ಪ್ರಮಾಣಪತ್ರ ವಿಭಾಗದಲ್ಲಿ ಸಾರ್ವಜನಿಕರು ಹಾಗೂ ವಕೀಲರೊಂದಿಗೆ ಸಿಬ್ಬಂದಿ ಅನುಚಿತವಾಗಿ ವರ್ತಿಸುತ್ತಿರುವ ಕುರಿತು ಬಂಟ್ವಾಳದ ವಕೀಲರ ನಿಯೋಗವು ಪುರಸಭೆಯ ಮುಖ್ಯಾಧಿಕಾರಿ ತೀರ್ಥಪ್ರಸಾದ್ ಕೆ.ಬಿ. ಅವರಿಗೆ ಲಿಖಿತ ಮನವಿ ಸಲ್ಲಿಸಿತು.
ಮನವಿಯಲ್ಲಿ, ಗ್ರಾಮೀಣ ಭಾಗದ ಜನರನ್ನು ಅನಗತ್ಯವಾಗಿ ಅಲೆದಾಡಿಸುವುದು, ಸಣ್ಣಪುಟ್ಟ ಕಾರಣಗಳನ್ನು ನೀಡಿ ಅರ್ಜಿಗಳನ್ನು ವಿಳಂಬಗೊಳಿಸುವುದು ಹಾಗೂ ವಕೀಲರೊಂದಿಗೂ ಅನುಚಿತವಾಗಿ ವರ್ತಿಸುತ್ತಿರುವ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಲಾಯಿತು. ಸಂಬಂಧಪಟ್ಟ ಸಿಬ್ಬಂದಿಯ ವಿರುದ್ಧ ಇಲಾಖಾ ತನಿಖೆ ನಡೆಸಿ ಅಗತ್ಯ ಶಿಸ್ತು ಕ್ರಮ ಕೈಗೊಳ್ಳುವಂತೆ ವಕೀಲರ ನಿಯೋಗ ಒತ್ತಾಯಿಸಿತು.
ಮನವಿಯನ್ನು ಸ್ವೀಕರಿಸಿದ ಮುಖ್ಯಾಧಿಕಾರಿ ತೀರ್ಥಪ್ರಸಾದ್ ಕೆ.ಬಿ. ಅವರು ವಿಷಯವನ್ನು ಗಂಭೀರವಾಗಿ ಪರಿಗಣಿಸುವುದಾಗಿ ಭರವಸೆ ನೀಡಿದರು. ಇಂತಹ ಘಟನೆಗಳು ಮರುಕಳಿಸದಂತೆ ಸಂಬಂಧಪಟ್ಟ ಸಿಬ್ಬಂದಿಗೆ ಕಠಿಣ ಎಚ್ಚರಿಕೆ ನೀಡಲಾಗುವುದು ಹಾಗೂ ಸಾರ್ವಜನಿಕರು ಮತ್ತು ವಕೀಲರಿಗೆ ಯಾವುದೇ ರೀತಿಯ ತೊಂದರೆ ಉಂಟಾದರೆ ನೇರವಾಗಿ ತಮ್ಮ ಗಮನಕ್ಕೆ ತರಬಹುದು ಎಂದು ತಿಳಿಸಿದರು.
ಮುಖ್ಯಾಧಿಕಾರಿಯ ಈ ಭರವಸೆಯನ್ನು ವಕೀಲರ ನಿಯೋಗ ಸ್ವಾಗತಿಸಿದ್ದು, ಸಾರ್ವಜನಿಕರಿಗೆ ತ್ವರಿತ ಮತ್ತು ಗೌರವಯುತ ಸೇವೆ ದೊರೆಯುವ ನಿಟ್ಟಿನಲ್ಲಿ ಪುರಸಭೆ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದೆ.