BREAKING NEWS : ಹಿಮಾಚಲ ಪ್ರದೇಶದಲ್ಲಿ ಪ್ರಪಾತಕ್ಕೆ ಉರುಳಿದ ಪ್ರವಾಸಿಗರಿದ್ದ ಟ್ಯಾಕ್ಸಿ : ಬೆಂಗಳೂರಿನ 8 ಜನ ದುರ್ಮರಣ!
ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಬಿದ್ದ ಟ್ಯಾಕ್ಸಿ ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯ ಪಾಂಗಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಪ್ರವಾಸಿಗರು ಸಂಚರಿಸುತ್ತಿದ್ದ ಟ್ಯಾಕ್ಸಿ ವಾಹನವು ಬೈರಾಗಢ್ ಪಾಂಗಿ ಸಚ್ ಪಾಸ್ ರಸ್ತೆಯ ಕಲ್ವಾನ್ ಎಂಬ ಸ್ಥಳದ ಬಳಿ ತಲುಪಿದಾಗ, ಚಾಲಕನ ನಿಯಂತ್ರಣ ಕೈತಪ್ಪಿದೆ. ಪರಿಣಾಮವಾಗಿ ವಾಹನವು ನೇರವಾಗಿ ಕಡಿದಾದ ಆಳವಾದ ಕಂದಕಕ್ಕೆ ಉರುಳಿ ಬಿದ್ದಿದೆ. ವಾಹನವು ಭಾರೀ ಎತ್ತರದಿಂದ ಕೆಳಗೆ ಬಿದ್ದಿರುವುದರಿಂದ ಅದರಲ್ಲಿದ್ದ ಯಾರೊಬ್ಬರೂ ಬದುಕುಳಿಯುವ ಸಾಧ್ಯತೆಗಳಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಮೃತರ ಹಿನ್ನೆಲೆ ಮತ್ತು ವಿವರಗಳು ಮೃತಪಟ್ಟ ದುರ್ದೈವಿಗಳಲ್ಲಿ ಬೆಂಗಳೂರಿನ ಕಾಡುಗೋಡಿ ನಿವಾಸಿಗಳಾದ ಅರವಿಂದ್ ಚಂದ್ರಶೇಖರ್, ಅವರ ಪತ್ನಿ ಪ್ರಾಚಿ ಚಂದ್ರಶೇಖರ್ ಹಾಗೂ ಅವರ ಮಕ್ಕಳಾದ 8 ವರ್ಷದ ದರ್ಶ್ ಚಂದ್ರಶೇಖರ್ ಮತ್ತು 11 ವರ್ಷದ ಅಕ್ಷದ್ ಸೇರಿದ್ದಾರೆ. ಇವರೊಂದಿಗೆ ಬೆಂಗಳೂರಿನ ಮತ್ತೊಂದು ಕುಟುಂಬದ ಪಿ.ಜಿ. ಕಾರ್ತಿಕೇಯನ್, ಅವರ ಪತ್ನಿ ಮಣಿಮಾಲಾ ಕಾರ್ತಿಕೇಯನ್ ಮತ್ತು ನಂದನ್ ಎಂಬುವವರು ಸಾವನ್ನಪ್ಪಿದ್ದಾರೆ. ಸ್ಥಳೀಯ ನಿವಾಸಿಯಾಗಿದ್ದ ಕಾರ್ ಚಾಲಕ ವಿಶ್ವಾಸ್ ಕೂಡ ಈ ಅಪಘಾತದಲ್ಲಿ ಜೀವ ಕಳೆದುಕೊಂಡಿದ್ದಾರೆ.
ಸ್ಥಳಕ್ಕೆ ಧಾವಿಸಿದ ರಕ್ಷಣಾ ಸಿಬ್ಬಂದಿ ಅಪಘಾತದ ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳೀಯ ಪೊಲೀಸರು ಮತ್ತು ರಕ್ಷಣಾ ಸಿಬ್ಬಂದಿ ಧಾವಿಸಿ ಕಾರ್ಯಾಚರಣೆ ಆರಂಭಿಸಿದ್ದಾರೆ. ಪ್ರಪಾತವು ಅತ್ಯಂತ ಆಳವಾಗಿರುವುದರಿಂದ ಶವಗಳನ್ನು ಹೊರತೆಗೆಯುವುದು ಸವಾಲಿನ ಕೆಲಸವಾಗಿತ್ತು. ಸದ್ಯದ ಮಾಹಿತಿ ಪ್ರಕಾರ, ಈಗಾಗಲೇ ಮೂರು ಶವಗಳನ್ನು ಪ್ರಪಾತದಿಂದ ಹೊರಗೆ ತೆಗೆಯಲಾಗಿದ್ದು, ಉಳಿದ ಶವಗಳ ಪತ್ತೆಗಾಗಿ ತೀವ್ರ ಹುಡುಕಾಟ ಮುಂದುವರಿದಿದೆ.
ಕುಟುಂಬಸ್ಥರಿಗೆ ಮಾಹಿತಿ ನೀಡಿದ ಪೊಲೀಸರು ಘಟನೆಗೆ ಸಂಬಂಧಿಸಿದಂತೆ ಹಿಮಾಚಲ ಪ್ರದೇಶದ ಪೊಲೀಸ್ ಅಧಿಕಾರಿಗಳು ಬೆಂಗಳೂರಿನಲ್ಲಿರುವ ಮೃತರ ಸಂಬಂಧಿಕರಿಗೆ ಈಗಾಗಲೇ ಅಧಿಕೃತವಾಗಿ ಮಾಹಿತಿ ಮುಟ್ಟಿಸಿದ್ದಾರೆ. ಅಪಘಾತದ ತೀವ್ರತೆಗೆ ಮೃತದೇಹಗಳು ನಜ್ಜುಗುಜ್ಜಾಗಿದ್ದು, ಸಂಬಂಧಿಕರು ಸ್ಥಳಕ್ಕೆ ಬಂದು ಶವಗಳನ್ನು ಅಧಿಕೃತವಾಗಿ ಗುರುತಿಸಿದ ಬಳಿಕವಷ್ಟೇ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಒಪ್ಪಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪೊಲೀಸರು ಈ ಘಟನೆಗೆ ತೀವ್ರ ಸಂತಾಪ ಸೂಚಿಸಿದ್ದಾರೆ.