ಪುತ್ತೂರು: ಮೇ 5ರಂದು KSRTC ಬಸ್ ನಿಲ್ದಾಣದಲ್ಲಿ ಸಾರ್ವಜನಿಕರಿಗೆ 'ಕನ್ನಡ ರಸಪ್ರಶ್ನೆ' ಮತ್ತು 'ಪುಸ್ತಕ ಬಹುಮಾನ


ಪುತ್ತೂರು: ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಪುತ್ತೂರು ತಾಲೂಕು ಘಟಕದ ವತಿಯಿಂದ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆಯ ಪ್ರಯುಕ್ತ ಒಂದು ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಬರುವ **ಮೇ 05, ಮಂಗಳವಾರದಂದು ಸಂಜೆ 4.00 ಗಂಟೆಗೆ ಪುತ್ತೂರಿನ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಸಂಚರಿಸುವ ಸಾರ್ವಜನಿಕರಿಗಾಗಿ "ಕನ್ನಡ ರಸಪ್ರಶ್ನೆ ಹಾಗೂ ಪುಸ್ತಕ ಬಹುಮಾನ" ಕಾರ್ಯಕ್ರಮ ಆಯೋಜನೆಯಾಗಿದೆ.
ಕಾರ್ಯಕ್ರಮದ ವಿಶೇಷತೆ:
ಸಾಮಾನ್ಯವಾಗಿ ಸಭಾಂಗಣಗಳಲ್ಲಿ ನಡೆಯುವ ಕಾರ್ಯಕ್ರಮಗಳಿಗಿಂತ ಭಿನ್ನವಾಗಿ, ಈ ಬಾರಿ ಜನಸಾಮಾನ್ಯರ ನಡುವೆ ಅಂದರೆ ಬಸ್ ನಿಲ್ದಾಣದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಬಸ್ ನಿಲ್ದಾಣದಲ್ಲಿ ಸಂಚರಿಸುವ ಸಾರ್ವಜನಿಕರಿಗೆ ಹಾಗೂ ಪ್ರಯಾಣಿಕರಿಗೆ ಸ್ಥಳದಲ್ಲೇ ಕನ್ನಡಕ್ಕೆ ಸಂಬಂಧಿಸಿದ ರಸಪ್ರಶ್ನೆಗಳನ್ನು ಕೇಳಲಾಗುವುದು. ಸರಿಯಾದ ಉತ್ತರ ನೀಡಿದವರಿಗೆ ಸ್ಥಳದಲ್ಲೇ ಪುಸ್ತಕಗಳನ್ನು ಬಹುಮಾನವಾಗಿ ನೀಡಿ ಪ್ರೋತ್ಸಾಹಿಸಲಾಗುವುದು.

ಕಾರ್ಯಕ್ರಮವನ್ನು ಪುತ್ತೂರು ಕೆ.ಎಸ್.ಆರ್.ಟಿ.ಸಿ ಮುಖ್ಯ ಪ್ರಬಂಧಕರಾದ ಶ್ರೀ ಸುಬ್ರಹ್ಮಣ್ಯ ಪ್ರಕಾಶ್ ಉದ್ಘಾಟಿಸಲಿದ್ದಾರೆ. ತಾಲೂಕು ಕ.ಸಾ.ಪ ಅಧ್ಯಕ್ಷರಾದ ಪುತ್ತೂರು ಉಮೇಶ್ ನಾಯಕ್ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಡಾ| ಹಾಜಿ ಎಸ್. ಅಬೂಬಕ್ಕರ್ ಆರ್ಲಪದವು (ಕಾರ್ಯಕಾರಿ ಸಮಿತಿ ಸದಸ್ಯರು, ಕ.ಸಾ.ಪ ಪುತ್ತೂರು) ಪಾಲ್ಗೊಳ್ಳಲಿದ್ದು, ಆಶಯ ನುಡಿಯನ್ನಡಲಿದ್ದಾರೆ, ರಂಗಕರ್ಮಿ ಶ್ರೀ ರಂಗಯ್ಯ ಬಲ್ಲಾಳ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ರಸಪ್ರಶ್ನೆ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ.

ಕನ್ನಡ ನಾಡು-ನುಡಿಯ ಬಗ್ಗೆ ಜಾಗೃತಿ ಮೂಡಿಸುವ ಈ ವಿಶೇಷ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಹಾಗೂ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಈ ಪ್ರಕಟಣೆಯ ಮೂಲಕ ವಿನಂತಿಸಿದ್ದಾರೆ.
Next Post Previous Post