BREAKING NEWS: ಕಾಂಗ್ರೆಸ್ ಹೈಕಮಾಂಡ್‌ನಿಂದ ಸಿದ್ದರಾಮಯ್ಯಗೆ ಮಹತ್ವದ ಜವಾಬ್ದಾರಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ (CWC) ಸದಸ್ಯರಾಗಿ ಆಯ್ಕೆ
ನವದೆಹಲಿ: ಕಾಂಗ್ರೆಸ್ ಪಕ್ಷದ ಉನ್ನತ ಮಟ್ಟದ ನಿರ್ಧಾರ ಕೈಗೊಳ್ಳುವ ಸಮಿತಿಯಾದ ಕಾಂಗ್ರೆಸ್ ವರ್ಕಿಂಗ್ ಕಮಿಟಿ (CWC)ಗೆ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸದಸ್ಯರಾಗಿ ನೇಮಕ ಮಾಡಲಾಗಿದೆ. ಈ ನೇಮಕಾತಿ ತಕ್ಷಣದಿಂದಲೇ ಜಾರಿಗೆ ಬಂದಿದೆ.
ಈ ಕುರಿತು ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅಧಿಕೃತ ಪ್ರಕಟಣೆ ಹೊರಡಿಸಿದ್ದಾರೆ. ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅನುಮೋದನೆಯೊಂದಿಗೆ ಈ ನೇಮಕಾತಿ ನಡೆದಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಪಕ್ಷದ ಅತ್ಯುನ್ನತ ನೀತಿ ನಿರ್ಧಾರ ವೇದಿಕೆಯಾಗಿದ್ದು, ದೇಶದ ಪ್ರಮುಖ ನಾಯಕರಿಗೆ ಮಾತ್ರ ಈ ಸಮಿತಿಯಲ್ಲಿ ಸ್ಥಾನ ದೊರೆಯುತ್ತದೆ. ಸಿದ್ದರಾಮಯ್ಯ ಅವರಿಗೆ ಈ ಜವಾಬ್ದಾರಿ ನೀಡಿರುವುದು ಅವರ ರಾಜಕೀಯ ಅನುಭವ ಮತ್ತು ಪಕ್ಷದೊಳಗಿನ ಪ್ರಭಾವಕ್ಕೆ ದೊರೆತ ಮಾನ್ಯತೆಯಾಗಿ ಪರಿಗಣಿಸಲಾಗಿದೆ.
ಇತ್ತೀಚಿನ ರಾಜಕೀಯ ಬೆಳವಣಿಗೆಗಳ ನಡುವೆ ನಡೆದಿರುವ ಈ ನೇಮಕಾತಿ ಕಾಂಗ್ರೆಸ್ ವಲಯದಲ್ಲಿ ವಿಶೇಷ ಮಹತ್ವ ಪಡೆದುಕೊಂಡಿದ್ದು, ಕರ್ನಾಟಕದ ನಾಯಕತ್ವಕ್ಕೆ ರಾಷ್ಟ್ರೀಯ ಮಟ್ಟದಲ್ಲಿ ಮತ್ತಷ್ಟು ಬಲ ದೊರೆತಂತಾಗಿದೆ.