ಕೆಮ್ಮಾಯಿಯಲ್ಲಿ ಮೇ 10ಕ್ಕೆ ಆರ್‌.ಕೆ. ಸ್ಪೋರ್ಟ್ಸ್ ಅಂಡ್ ಆರ್ಟ್ಸ್ ಕ್ಲಬ್ ವತಿಯಿಂದ ವಿದ್ಯಾರ್ಥಿಗಳಿಗೆ ಬೃಹತ್ ಪುಸ್ತಕ ವಿತರಣಾ ಕಾರ್ಯಕ್ರಮ


ಪುತ್ತೂರು: ಕ್ರೀಡೆ, ಕಲೆ ಮತ್ತು ಸೇವಾ ಕಾರ್ಯಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ನಾಝಿಮ್ ಆರ್. ಕೆ ಕೆಮ್ಮಾಯಿ ಸಾರಥ್ಯದಲ್ಲಿ ಸ್ಥಾಪನೆಗೊಂಡು ಮುನ್ನಡೆಯುತ್ತಿರುವ ಆರ್‌.ಕೆ. ಸ್ಪೋರ್ಟ್ಸ್ ಅಂಡ್ ಆರ್ಟ್ಸ್ ಕ್ಲಬ್ ಪುತ್ತೂರು ವತಿಯಿಂದ 250ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ಮತ್ತು ಕಲಿಕಾ ಸಾಮಗ್ರಿಗಳ ವಿತರಣಾ ಕಾರ್ಯಕ್ರಮ ಮೇ 10ರಂದು ಬೆಳಗ್ಗೆ 10.30ಕ್ಕೆ ಕೆಮ್ಮಾಯಿ ಜಂಕ್ಷನ್‌ನಲ್ಲಿ ನಡೆಯಲಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಆಶೀರ್ ಕುಂತೂರ್ ತಿಳಿಸಿದ್ದಾರೆ.

ಸಂಸ್ಥೆಯ ಸಾರಥಿ ನಾಝಿಮ್ ಆರ್‌.ಕೆ. ಅವರ ಸಾನಿಧ್ಯದೊಂದಿಗೆ ಪುತ್ತೂರು ಪ್ರೆಸ್‌ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ  “ವಿದ್ಯೆಯ ಹಾದಿಗೆ ಪ್ರೇರಣೆಯ ಕೈ ಹಿಡಿತ” ಎಂಬ ಧ್ಯೇಯವಾಕ್ಯದೊಂದಿಗೆ ಕಾರ್ಯನಿರ್ವಹಿಸುತ್ತಿರುವ ನಮ್ಮ ಕ್ಲಬ್‌ಗೆ ಪುಸ್ತಕದ ಕೊರತೆಯಿಂದ ವಿದ್ಯಾರ್ಥಿಗಳ ಕನಸುಗಳು ನಿಲ್ಲಬಾರದು ಎಂಬ ದೃಢ ನಂಬಿಕೆ ಇದೆ. ಕಲಿಕೆ ಒಂದು ಹಕ್ಕು, ಅದು ಕೆಲವರಿಗೆ ಮಾತ್ರ ಸೀಮಿತವಾಗಿರಬಾರದು. ಬಡ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಅಗತ್ಯವಾದ ಪುಸ್ತಕ ಮತ್ತು ಕಲಿಕಾ ಸಾಮಗ್ರಿಗಳನ್ನು ಉಚಿತವಾಗಿ ವಿತರಿಸುವ ಮೂಲಕ ನಾವು ಅವರ ಜೊತೆಗಿದ್ದೇವೆ ಎಂಬ ಭರವಸೆ ನೀಡುತ್ತಿದ್ದೇವೆ ಎಂದರು.

ಆರ್‌.ಕೆ. ಸ್ಪೋರ್ಟ್ಸ್ ಅಂಡ್ ಆರ್ಟ್ಸ್ ಕ್ಲಬ್ ವತಿಯಿಂದ ಇದು ಮೂರನೇ ವರ್ಷದ ಪುಸ್ತಕ ವಿತರಣಾ ಕಾರ್ಯಕ್ರಮವಾಗಿದೆ. ಮೊದಲ ವರ್ಷದಲ್ಲಿ 80 ವಿದ್ಯಾರ್ಥಿಗಳಿಗೆ, ಎರಡನೇ ವರ್ಷದಲ್ಲಿ 100 ವಿದ್ಯಾರ್ಥಿಗಳಿಗೆ ಹಾಗೂ ಈ ಬಾರಿ 250ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಪುಸ್ತಕ ಮತ್ತು ಕಲಿಕಾ ಸಾಮಗ್ರಿಗಳನ್ನು ವಿತರಿಸಲಾಗುತ್ತಿದೆ.
ಈ ಕಾರ್ಯಕ್ರಮವನ್ನು ಏಪ್ರಿಲ್ 14ರಂದು ಕರ್ನಾಟಕ ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಅವರು ಪೋಸ್ಟರ್ ಬಿಡುಗಡೆಗೊಳಿಸಿ ಚಾಲನೆ ನೀಡಿದ್ದಾರೆ. ಮೇ 10ರಂದು ನಡೆಯುವ ಕಾರ್ಯಕ್ರಮದಲ್ಲಿ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ನಗರಸಭಾ ನಿಕಟಪೂರ್ವ ಅಧ್ಯಕ್ಷೆ ಲೀಲಾವತಿ ಅಣ್ಣುನಾಯ್ಕ್, ನಿಕಟಪೂರ್ವ ಸದಸ್ಯ ಸುಂದರ ಪೂಜಾರಿ ಬಡಾವು, ಮಾಜಿ ಶಾಸಕ ಮೊಯ್ದೀನ್ ಬಾವ, ಯು.ಟಿ. ಫರೀದ್, ಕಾನೂನು ಪ್ರಾಧಿಕಾರದ ಪ್ಯಾರಾ ಲೀಗಲ್ ವಾಲಿಯಂಟರ್ ಡಾ. ಹಾಜಿ ಎಸ್ ಅಬೂಬಕ್ಕರ್ ಆರ್ಲಪದವು, ಮತ್ತು ಹಲವು ಸಾಮಾಜಿಕ, ಶೈಕ್ಷಣಿಕ ಗಣ್ಯರು ಭಾಗವಹಿಸಲಿದ್ದಾರೆ.

ಈ ಕಾರ್ಯಕ್ರಮದ ಮೂಲಕ ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಸಹಕಾರ ನೀಡುವುದರ ಜೊತೆಗೆ, ಕ್ರೀಡೆ ಮತ್ತು ಕಲೆಯಲ್ಲಿ ಪ್ರತಿಭೆಗಳನ್ನು ಗುರುತಿಸಿ ಪೋಷಿಸುವ ನಿಟ್ಟಿನಲ್ಲೂ ಕ್ಲಬ್ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ. ಸಮಾಜದ ಎಲ್ಲಾ ವರ್ಗಗಳ ವಿದ್ಯಾರ್ಥಿಗಳು ಜೊತೆಯಾಗಿಸಿ ಪುಸ್ತಕ ಪಡೆಯುವ ಅವಕಾಶವನ್ನು ನೀಡಿದ್ದೇವೆ. ಆರ್. ಕೆ ಸ್ಪೋಟ್ಸ್ ಕ್ಲಬ್ ಸೇವಾ ಕಾರ್ಯವು ನಿರಂತರವಾಗಿರಲಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Post Previous Post