ಬಿಹಾರ ಫಲಿತಾಂಶಕ್ಕೆ ಕ್ಷಣಗಣನೆ - ಯಾರಿಗೆ ಮ್ಯಾಜಿಕ್ ನಂಬರ್ 122? Bihar Election
ಬಿಹಾರ ವಿಧಾನಸಭಾ ಚುನಾವಣೆಯ ಮೆಗಾ ಫಲಿತಾಂಶಕ್ಕೆ ಇನ್ನು ಕೆಲವು ಗಂಟೆಗಳಷ್ಟೇ ಬಾಕಿ ಇದೆ. 2025ರ ಜಿದ್ದಾಜಿದ್ದಿನ ಅಖಾಡ ಇದೀಗ ಅಂತಿಮ ಹಂತ ತಲುಪಿದೆ. ಈಗ ಉಳಿದಿರೋದು ಒಂದೇ. ನಾಳೆ ಯಾರು ಮ್ಯಾಜಿಕ್ ನಂಬರ್ 122 ತಲುಪುತ್ತಾರೆ ಅನ್ನೋದು.
ಈ ಬಾರಿ ಸಿಎಂ ನಿತೀಶ್ ಕುಮಾರ್ ನೇತೃತ್ವದ NDA ಮೈತ್ರಿಕೂಟ ಮತ್ತು RJDಯ ತೇಜಸ್ವಿ ಯಾದವ್ ಅವರ 'ಮಹಾಘಟಬಂಧನ್' ನಡುವೆ ನೇರ ಹಣಾಹಣಿ ಏರ್ಪಟ್ಟಿದೆ.
2 ಹಂತದ ಮತದಾನ ಮುಕ್ತಾಯದ ಬೆನ್ನಲ್ಲೇ ವಿವಿಧ ಸಂಸ್ಥೆಗಳ ಮತಗಟ್ಟೆ ಸಮೀಕ್ಷೆಗಳು ಹೊರ ಬಿದ್ದಿದೆ. ಬಹುತೇಕ ಸಮೀಕ್ಷೆಗಳು ಈ ಬಾರಿ ಬಿಹಾರದಲ್ಲಿ ಎನ್‌ಡಿಎ ಮೇಲುಗೈ ಸಾಧಿಸಲಿದೆ ಎಂದು ಹೇಳಿವೆ.
ಮೆಗಾ ಫಲಿತಾಂಶದ ಮುನ್ನ ದಿನ ಬಿಹಾರದಲ್ಲಿ ನಿತೀಶ್ ಬೆಂಬಲಿಗರ ಪೋಸ್ಟರ್‌ಗಳು ರಾರಾಜಿಸುತ್ತಿದೆ. ಟೈಗರ್ ಅಭಿ ಜಿಂದಾ ಹೇ ಎಂದು ನಿತೀಶ್ ಅಭಿಮಾನಿಗಳು ಘೋಷಣೆ ಕೂಗುತ್ತಿದ್ದಾರೆ. ಸಮೀಕ್ಷೆಗಳು ಏನೇ ಭವಿಷ್ಯ ಹೇಳಿದರೂ 9 ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರ ಅನುಭವವಿರುವ ನಿತೀಶ್ ಕುಮಾರ್ ಅವರು ಆಡಳಿತ ವಿರೋಧಿ ಅಲೆಯನ್ನು ಎದುರಿಸಿದ್ದಾರೆ. ಯುವ ನಾಯಕ ತೇಜಸ್ವಿ ಯಾದವ್ ಅವರು ನಿರುದ್ಯೋಗ ಮತ್ತು ಸಾಮಾಜಿಕ ನ್ಯಾಯದ ವಿಷಯಗಳನ್ನು ಮುಂದಿಟ್ಟುಕೊಂಡು ಪ್ರಬಲ ಪೈಪೋಟಿ ನೀಡಿದ್ದಾರೆ. ಇದರ ನಡುವೆ, ರಾಜಕೀಯ ತಂತ್ರಗಾರ ಪ್ರಶಾಂತ್ ಕಿಶೋರ್ ಅವರ 'ಜನ್ ಸುರಾಜ್' ಪಕ್ಷದ ಪ್ರವೇಶವು ಚುನಾವಣಾ ಕಣದಲ್ಲಿ ಹೊಸ ಕುತೂಹಲ ಸೃಷ್ಟಿಸಿದೆ. ಅಂತಿಮವಾಗಿ ಮತದಾರ ಯಾರ ಕೈ ಹಿಡಿಯಲಿದ್ದಾನೆ ಅನ್ನೋದು ಕುತೂಹಲ ಕೆರಳಿಸಿದೆ.