ಪಾಣಾಜೆ ಸುಬೋಧ ಪ್ರೌಢಶಾಲಾ ವಾರ್ಷಿಕೋತ್ಸವ ಶಾಲೆಯ ಬೆಳವಣಿಗೆಗೆ ಹಿರಿಯ ವಿದ್ಯಾರ್ಥಿಗಳ ಸಹಕಾರ ಅಗತ್ಯ - ಅಬ್ದುಲ್ ರೆಹಮಾನ್.


ಪಾಣಾಜೆ: ಡಿ 6,ಪಾಣಾಜೆ ವಿದ್ಯಾವರ್ಧಕ ಸಂಘ, ಸುಬೋಧ ಪ್ರೌಢಶಾಲೆ, ಇವುಗಳ ಸಂಯುಕ್ತ ಆಶ್ರಯದಲ್ಲಿ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಉದ್ಯಮಿ ಉಪೇಂದ್ರ ಬಲ್ಯಾಯ ದೇವಸ್ಯ ಅವರ ಅಧ್ಯಕ್ಷತೆಯಲ್ಲಿ ಪ್ರೌಢಶಾಲಾ ವಾರ್ಷಿಕೋತ್ಸವವು ನಿನ್ನೆ ನಡೆಯಿತು.


 ಮುಖ್ಯ ಅತಿಥಿಗಳಾಗಿ ಆಗಮಿಸಿದ ಶಾಲೆಯ ಪ್ರಥಮ ಬ್ಯಾಚಿನ ಹಿರಿಯ ವಿದ್ಯಾರ್ಥಿ ಹಾಜಿ ಅಬ್ದುಲ್ ರೆಹಮಾನ್ ಅವರು 1970 ರಲ್ಲಿ ಪ್ರಥಮ ಬ್ಯಾಚಿನ ವಿದ್ಯಾರ್ಥಿಯಾಗಿ ತಾವು ಶಾಲೆಗೆ ದಾಖಲಾದ ಸಂದರ್ಭ, ಶಾಲೆಯನ್ನು ಸ್ಥಾಪಿಸಲು ಗಿಳಿಯಾಲು ಶ್ಯಾಮ ಭಟ್ ಹಾಗೂ ಊರವರು ಪಟ್ಟ ಶ್ರಮ, ಶಾಲೆಯ ಪ್ರಥಮ ಮುಖ್ಯ ಶಿಕ್ಷಕ ಪಿಲಿಂಗಲ್ಲು ಕೃಷ್ಣ ಭಟ್ ಹಾಗೂ ಹಾಗೂ ಅಧ್ಯಾಪಕರ ಸೇವಾ ಮನೋಭಾವ ಹಾಗೂ ಸಹಪಾಠಿಗಳನ್ನು ನೆನಪಿಸಿಕೊಂಡರು. 


ಶಾಲೆಯ ಅಭಿವೃದ್ಧಿಯಲ್ಲಿ ಹಿರಿಯ ವಿದ್ಯಾರ್ಥಿಗಳ ಪಾತ್ರ ದೊಡ್ಡದು, ಹತ್ತಿದ ಮೆಟ್ಟಲನ್ನು ಎಂದೂ ಮರೆಯಬಾರದು. ವಿದ್ಯಾರ್ಥಿಗಳು ಶಿಸ್ತನ್ನು ರೂಡಿಸಿಕೊಂಡು ಜೀವನದಲ್ಲಿ ಯಶಸ್ವಿಯಾಗಬೇಕು ಎಂದು ಮಕ್ಕಳಿಗೆ ಕರೆ ನೀಡಿದರು.
 ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಡಾ. ಹಾಜಿ ಎಸ್ ಅಬೂಬಕ್ಕರ್ ಹಾಗೂ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ರವೀಂದ್ರ ಭಂಡಾರಿ ಬೈಂಕ್ರೋಡು ಶುಭಾಶಂಸನೆ ಗೈದರು.


 ಇತ್ತೀಚೆಗೆ ತಾಲೂಕು ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಪಡೆದ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಡಾ. ಹಾಜಿ ಎಸ್ ಅಬೂಬಕ್ಕರ್ ಅವರನ್ನು ಶಾಲಾವತಿಯಿಂದ ಸನ್ಮಾನಿಸಲಾಯಿತು.


 *ಪ್ರತಿಭಾ ಪುರಸ್ಕಾರ* 2024-25ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇ 90ಕ್ಕಿಂತ ಜಾಸ್ತಿ ಅಂಕಗಳಿಸಿದ ವಿದ್ಯಾರ್ಥಿನಿಯರಾದ ಸುಶ್ಮಿತಾ, ತೃಪ್ತಿ, ಫಾತಿಮತ್ ಮಶ್ ರೂಫ ಹಾಗೂ ರಚನಾ ಡಿ ಎಸ್ ಇವರಿಗೆ ಆಡಳಿತ ಮಂಡಳಿ ಕಾರ್ಯದರ್ಶಿ ಹಾಗೂ ಸಂಚಾಲಕರಾದ ಗಿಳಿಯಾಲು ಮಹಾಬಲೇಶ್ವರ ಭಟ್ ಅವರು ಪ್ರತಿವರ್ಷ ತನ್ನ ವೈಯಕ್ತಿಕ ನೆಲೆಯಲ್ಲಿ ನೀಡುತ್ತಾ ಬಂದಂತೆ ಶಾಲು ಹೊದೆಸಿ ಫಲಪುಷ್ಪ ಬೆಳ್ಳಿ ಪದಕ ಹಾಗೂ ಸ್ಮರಣಿಕೆ ನೀಡಿ ಸನ್ಮಾನಿಸಿದರು. 


ಇದೇ ಸಂದರ್ಭದಲ್ಲಿ ಶಾಲಾ ಮುಖ್ಯ ಶಿಕ್ಷಕಿ ನಿರ್ಮಲ ಕೆ ಅವರು ಶಾಲೆಯಲ್ಲಿ ಅತ್ಯಧಿಕ ಅಂಕಗಳಿಸಿದ ಸುಶ್ಮಿತಾರನ್ನು ಚಿನ್ನದ ಪದಕ ನೀಡಿ ಗೌರವಿಸಿದರು. ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ವಿಜೇತರಾದ ಮಕ್ಕಳಿಗೆ ಅತಿಥಿಗಳು ದತ್ತಿ ನಿಧಿ ಹಾಗೂ ಬಹುಮಾನಗಳನ್ನು ವಿತರಿಸಿದರು. ಸಹ ಶಿಕ್ಷಕಿ ವಿನುತಾ ಕುಮಾರಿ, ಕವಿತಾ ಜಿ, ಪವಿತ್ರ ಕಡಂದೇಲು, ಕೀರ್ತಿ ಸುಬ್ರಹ್ಮಣ್ಯ ಹಾಗೂ ಪ್ರಜ್ಞ ಬಹುಮಾನ ವಿತರಣಾ ಕಾರ್ಯಕ್ರಮವನ್ನು ನಡೆಸಿಕೊಟ್ಟರು.


 ಶಾಲಾ ವಿದ್ಯಾರ್ಥಿನಿಯರಾದ ದೀಪಿಕಾ ಪಿ ಎಸ್, ವೈಶವಿ ಹಾಗೂ ಸಿಂಚನ ಎಸ್ ಪ್ರಾರ್ಥಿಸಿದರು. ಶಾಲಾ ಸಂಚಾಲಕ ಮಹಾಬಲೇಶ್ವರ ಭಟ್ ಗಿಳಿಯಾಲು ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು. ಶಾಲಾ ದೈಹಿಕ ಶಿಕ್ಷಣ ಶಿಕ್ಷಕರಾದ ಸುಧೀರ್ ಎಸ್ ಪಿ ಅವರು ಸಭಾ ಕಾರ್ಯಕ್ರಮವನ್ನು ಹಾಗೂ ಕವಿತಾ ಜಿ ಮತ್ತು ಪವಿತ್ರ ಕಡಂದೇಲು ಅವರು ಸಾಂಸ್ಕೃತಿಕ ಕಾರ್ಯಕ್ರಮವನ್ನು ನಿರೂಪಿಸಿದರು.



ಬೆಳಗ್ಗೆ ಪಾಣಾಜೆ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಉಪೇಂದ್ರ ಬಲ್ಯಾಯ ದೇವಸ್ಯ ಧ್ವಜಾರೋಹಣ ಮಾಡಿ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಆ ಮೇಲೆ ಚದ್ಮವೇಷ ಸ್ಪರ್ಧೆ ನಡೆಯಿತು. ಸಂಜೆ ಸಭಾ ಕಾರ್ಯಕ್ರಮದ ಬಳಿಕ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಹಿರಿಯ ವಿದ್ಯಾರ್ಥಿಗಳು ಹಾಗೂ ವಿದ್ಯಾಧಾನಿಗಳ ಸಹಕಾರದಿಂದ ಭೋಜನದ ವ್ಯವಸ್ಥೆ ಅಚ್ಚುಕಟ್ಟಾಗಿ ಮಾಡಲಾಗಿತ್ತು. ಶಿಕ್ಷಕೇತರ ಸಿಬ್ಬಂದಿ ವರ್ಗ, ಆಡಳಿತ ಮಂಡಳಿ ಸದಸ್ಯರು ಹಿರಿಯ ವಿದ್ಯಾರ್ಥಿಗಳು ಹೆತ್ತವರು, ಪೋಷಕರು ಅತ್ಯಧಿಕ ಸಂಖ್ಯೆಯಲ್ಲಿ ಹಾಜರಿದ್ದರು. ದೈಹಿಕ ಶಿಕ್ಷಣ ಶಿಕ್ಷಕರಾದ ಸುಧೀರ್ ಎಸ್ ಪಿ ಅವರು ಎಲ್ಲರ ಸಹಕಾರವನ್ನು ನೆನಪಿಸುತ್ತ ವಂದಿಸಿದರು
Next Post Previous Post