ಪ್ರಧಾನಿ ಮೋದಿಯವರೆ ಬಂಗಾರ ಪೆಟ್ರೋಲ್ ಉಳಿತಾಯ ಇರಲಿ ಮೊದಲು ಕ್ರಿಕೆಟ್ ನಿಷೇಧಿಸಿ ದೇಶದ ಭದ್ರತೆ ಮತ್ತು ಯುವಕರ ಭವಿಷ್ಯ ರಕ್ಷಿಸಿ: ಇಬ್ರಾಹಿಂ ಗೊಳಿಕಟ್ಟೆ


ಪುತ್ತೂರು: ದೇಶದ ಸಮಗ್ರ ಅಭಿವೃದ್ಧಿ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ 'ಕ್ರಿಕೆಟ್' ಕ್ರೀಡೆಯನ್ನು ತಾತ್ಕಾಲಿಕವಾಗಿ ನಿಷೇಧಿಸುವಂತೆ ಒತ್ತಾಯಿಸಿ ಇಬ್ರಾಹಿಂ ಗೋಳಿಕಟ್ಟೆ ಎಂಬುವವರು ಪ್ರಧಾನಿ ನರೇಂದ್ರ ಮೋದಿ ಹಾಗೂ ಮಾಧ್ಯಮಗಳಿಗೆ ಮುಕ್ತ ಪತ್ರವೊಂದನ್ನು ಬರೆದಿದ್ದಾರೆ.
ಕ್ರಿಕೆಟ್ ಇಂದು ಕೇವಲ ಆಟವಾಗಿ ಉಳಿದಿಲ್ಲ, ಅದು ಜನರ ಅಮೂಲ್ಯ ಸಮಯ ಹಾಗೂ ದೇಶದ ಆರ್ಥಿಕತೆಯನ್ನು ನುಂಗುವ ಪಿಡುಗಾಗಿ ಮಾರ್ಪಟ್ಟಿದೆ. ಬಂಗಾರ, ಪೆಟ್ರೋಲ್ ಉಳಿತಾಯಕ್ಕಿಂತ ಮೊದಲು ಕ್ರಿಕೆಟ್ ನಿಷೇಧಿಸಿ ದೇಶದ ಭದ್ರತೆ ಮತ್ತು ಯುವಕರ ಭವಿಷ್ಯವನ್ನು ರಕ್ಷಿಸುವಂತೆ ಅವರು ತಮ್ಮ ಪತ್ರದಲ್ಲಿ ತೀವ್ರವಾಗಿ ಆಗ್ರಹಿಸಿದ್ದಾರೆ.

ಪತ್ರದಲ್ಲಿ ಉಲ್ಲೇಖಿಸಿರುವ ಪ್ರಮುಖ ಆಕ್ಷೇಪಣೆಗಳು:


1. ಅಮೂಲ್ಯ ಸಮಯದ ವ್ಯರ್ಥ ಹಾಗೂ ಕಿರಿಕಿರಿ: ಯುವ ಪೀಳಿಗೆ ಹಾಗೂ ನಿವೃತ್ತರಾದವರು ಗಂಟೆಗಟ್ಟಲೆ ಕಿಕ್ರೆಟ್ ನ್ನು ಟಿ.ವಿ ವೀಕ್ಷಣೆಯಲ್ಲಿ ಮುಳುಗುತ್ತಿದ್ದಾರೆ. ಪಂದ್ಯಗಳು ಮುಗಿದ ನಂತರ ರಸ್ತೆಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಅನಗತ್ಯ ಟೀಕೆ-ವಿವಾದಗಳನ್ನು ಮಾಡುತ್ತಾ ಸಮಯ ವ್ಯರ್ಥ ಮಾಡುತ್ತಿರುವುದು ಸಮಾಜದಲ್ಲಿ ಕಿರಿಕಿರಿ ಉಂಟುಮಾಡುತ್ತಿದೆ. ಅಲ್ಲದೇ ಕ್ರಿಕೆಟ್ ಆಟದಿಂದ ಅದೆಷ್ಟೋ ಯುವಕರು ಎರಡು ಗುಂಪುಗಳಾಗಿ ವೈರಿಗಳಾಗಿ ಜೀವ ಕಳೆದುಕೊಳ್ಳುವ ಪರಿಸ್ಥಿತಿ ಉಂಟಾಗಿದೆ.


2. ಟ್ರಾಫಿಕ್ ಜಾಮ್ ಹಾಗೂ ಸಾರ್ವಜನಿಕ ಅಡಚಣೆ: ದೊಡ್ಡ ಮಟ್ಟದ ಪಂದ್ಯಾವಳಿಗಳು ನಡೆದಾಗ ರಸ್ತೆಗಳಲ್ಲಿ ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡು, ಸಾರ್ವಜನಿಕರು ಹಾಗೂ ಉದ್ಯೋಗಿಗಳಿಗೆ ತೀವು ತೊಂದರೆಯಾಗುತ್ತಿದೆ. ಅಲ್ಲದೆ ಇಡೀ ದೇಶದ ಪೋಲೀಸ್ ಇಲಾಖೆಗೆ ಅನಗತ್ಯ ಕೆಲಸ ಕೊಟ್ಟು ಓವರ್ ಟೈಮ್ ಕೊಟ್ಟು ಸರಕಾರದ ಖಜಾನೆ ಖಾಲಿಯಾಗುತ್ತಿದೆ.


3. ಹಣದ ಅಪವ್ಯಯ ಮತ್ತು ವಿದೇಶಕ್ಕೆ ಹರಿಯುವ ಸಂಪತ್ತು: ನಮ್ಮ ದೇಶದ ಕೋಟ್ಯಂತರ ರೂಪಾಯಿ ಹಣ ಈ ಆಟದ ಹೆಸರಿನಲ್ಲಿ ವ್ಯರ್ಥವಾಗುತ್ತಿದೆ. ಅಲ್ಲದೆ, ವಿದೇಶಿ ಆಟಗಾರರು ಇಲ್ಲಿಗೆ ಬಂದು ನಮ್ಮ ದೇಶದ ಹಣವನ್ನು ದೊಡ್ಡ ಮಟ್ಟದಲ್ಲಿ ಕೊಂಡೊಯ್ಯುತ್ತಿದ್ದಾರೆ. ಇದು ನಮ್ಮ ಕಣ್ಣಮುಂದೆಯೇ ನಡೆಯುತ್ತಿದೆ. ನಾವು ಇಲ್ಲಿ ಗ್ಯಾಸ್, ಪೆಟ್ರೋಲ್ ಎಂದು ಒದ್ದಾಡುತ್ತಿದ್ದೇವೆ.


4. ಬೆಟ್ಟಿಂಗ್ ದಂಧೆ ಮತ್ತು ಕುಟುಂಬಗಳ ನಾಶ: ಕ್ರಿಕೆಟ್ ಹೆಸರಿನಲ್ಲಿ ನಡೆಯುವ ಅಕ್ರಮ ಬೆಟ್ಟಿಂಗ್ (ಜುಗಾರಿ) ದಂಧೆಗೆ ಬಿದ್ದು ನೂರಾರು ಯುವಕರು, ಬಡವರು ತಮ್ಮ ಮನೆ-ಮಠಗಳನ್ನು ಕಳೆದುಕೊಂಡು ಬೀದಿಗೆ ಬೀಳುತ್ತಿದ್ದಾರೆ.


ಕೆಲವೇ ಕೆಲವು ಪ್ರಭಾವಿ ವ್ಯಕ್ತಿಗಳು, ಕಾರ್ಪೊರೇಟ್ ಸಂಸ್ಥೆಗಳು, ಆಟಗಾರರು ಮತ್ತು ಟಿ.ವಿ ಮಾಧ್ಯಮಗಳು ಇದರಿಂದ ದೊಡ್ಡ ಮಟ್ಟದ ಲಾಭ ಮಾಡಿಕೊಳ್ಳುತ್ತಿರಬಹುದು. ಆದರೆ, ಸಾಮಾನ್ಯ ಜನರಿಗೆ ಮತ್ತು ದೇಶದ ಅಭಿವೃದ್ಧಿಗೆ ಇದರಿಂದ ಯಾವುದೇ ಲಾಭವಿಲ್ಲ. ಆದ್ದರಿಂದ, ನಮ್ಮ ದೇಶವು ಸಂಪೂರ್ಣವಾಗಿ ಅಭಿವೃದ್ಧಿ ಹೊಂದುವ ತನಕ ಕ್ರಿಕೆಟ್ ಅನ್ನು ತಾತ್ಕಾಲಿಕವಾಗಿ ಬ್ಯಾನ್ (ನಿಷೇಧ) ಮಾಡುವುದು ಅತ್ಯಂತ ಉತ್ತಮ ನಿರ್ಧಾರ ಪದ್ಧತಿಯಾಗಿದೆ. ಇದರಿಂದ ಜನರ ಸಮಯ ಉಳಿತಾಯವಾಗುತ್ತದೆ ಮತ್ತು ಹಣವೂ ಸದುಪಯೋಗವಾಗುತ್ತದೆ.


"ಕ್ರಿಕೆಟ್‌ನಿಂದ ಕೇವಲ ಪ್ರಭಾವಿ ವ್ಯಕ್ತಿಗಳು, ಕಾರ್ಪೊರೇಟ್ ಸಂಸ್ಥೆಗಳು, ಆಟಗಾರರು ಹಾಗೂ ಮಾಧ್ಯಮಗಳಿಗೆ ಮಾತ್ರ ದೊಡ್ಡ ಮಟ್ಟದ ಲಾಭವಾಗುತ್ತಿದೆ. ಇದರಿಂದ ಸಾಮಾನ್ಯ ಜನರಿಗೆ ಮತ್ತು ದೇಶದ ಅಭಿವೃದ್ಧಿಗೆ ಯಾವುದೇ ಪ್ರಯೋಜನವಿಲ್ಲ. ಆದ್ದರಿಂದ, ನಮ್ಮ ದೇಶವು ಸಂಪೂರ್ಣವಾಗಿ ಅಭಿವೃದ್ಧಿ ಹೊಂದುವ ತನಕ ಕ್ರಿಕೆಟ್ ಅನ್ನು ತಾತ್ಕಾಲಿಕವಾಗಿ ಬ್ಯಾನ್ (ನಿಷೇಧ) ಮಾಡುವುದು ಅತ್ಯಂತ ಉತ್ತಮ ನಿರ್ಧಾರ. ಇದರಿಂದ ಜನರ ಸಮಯ ಮತ್ತು ಹಣ ಎರಡೂ ಸದುಪಯೋಗವಾಗುತ್ತದೆ" ಎಂದು ಇಬ್ರಾಹಿಂ ಗೋಳಿಕಟ್ಟೆ ಅಭಿಪ್ರಾಯಪಟ್ಟಿದ್ದಾರೆ.

​ಈ ಗಂಭೀರ ವಿಷಯವನ್ನು ಮಾಧ್ಯಮಗಳು ಸಾರ್ವಜನಿಕ ಚರ್ಚೆಗೆ ಒಳಪಡಿಸಿ, ಸರ್ಕಾರದ ಗಮನ ಸೆಳೆಯುವಂತೆ ಅವರು ಪತ್ರದ ಮೂಲಕ ಮನವಿ ಮಾಡಿದ್ದಾರೆ.

Next Post Previous Post