BREAKING : ನಿರೀಕ್ಷಿತ ಖಾತೆ ಕೈತಪ್ಪಿದ್ದಕ್ಕೆ ಅಸಮಾಧಾನ: ಸಚಿವ ಸ್ಥಾನಕ್ಕೆ ರಾಮಲಿಂಗಾರೆಡ್ಡಿ | Ramalingareddy resigns
ಬೆಂಗಳೂರು: ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಸರ್ಕಾರಕ್ಕೆ ಆರಂಭದಲ್ಲೇ ದೊಡ್ಡ ಆಘಾತ ಎದುರಾಗಿದೆ. ನಿರೀಕ್ಷಿತ ಖಾತೆ ಕೈತಪ್ಪಿದ ಹಿನ್ನೆಲೆಯಲ್ಲಿ ತೀವ್ರ ಅಸಮಾಧಾನಗೊಂಡಿದ್ದ ಹಿರಿಯ ಕಾಂಗ್ರೆಸ್ ನಾಯಕ ರಾಮಲಿಂಗಾರೆಡ್ಡಿ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದಾರೆ. ಈ ಮೂಲಕ ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿದ್ದಾರೆ.
ಬೆಂಗಳೂರಿನಲ್ಲಿ ಇಂದು ತುರ್ತು ಸುದ್ದಿಗೋಷ್ಠಿ ಕರೆದು ಮಾತನಾಡಿದ ಅವರು, ತಮ್ಮ ರಾಜೀನಾಮೆ ನಿರ್ಧಾರವನ್ನು ಅಧಿಕೃತವಾಗಿ ಪ್ರಕಟಿಸಿದರು.
ಹಲವು ದಶಕಗಳ ರಾಜಕೀಯ ಅನುಭವ ಹೊಂದಿರುವ ರಾಮಲಿಂಗಾರೆಡ್ಡಿ ಅವರು ಸಚಿವ ಸಂಪುಟದಲ್ಲಿ 'ಬೆಂಗಳೂರು ನಗರಾಭಿವೃದ್ಧಿ' ಖಾತೆಯ ಮೇಲೆ ಕಣ್ಣಿಟ್ಟಿದ್ದರು. ಈ ಮಹತ್ವದ ಜವಾಬ್ದಾರಿ ತಮಗೇ ಒಲಿಯಲಿದೆ ಎಂಬ ಬಲವಾದ ವಿಶ್ವಾಸದಲ್ಲಿದ್ದರು. ಆದರೆ, ನಿನ್ನೆ ರಾತ್ರಿ ಪ್ರಕಟವಾದ ಖಾತೆ ಹಂಚಿಕೆ ಪಟ್ಟಿಯಲ್ಲಿ ಅವರಿಗೆ ಆ ಖಾತೆ ನೀಡಲಾಗಿರಲಿಲ್ಲ. ಇದರಿಂದ ತೀವ್ರ ಬೇಸರಗೊಂಡ ಅವರು, ಸಚಿವ ಸ್ಥಾನದಲ್ಲಿ ಮುಂದುವರಿಯದಿರಲು ನಿರ್ಧರಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ರಾಮಲಿಂಗಾರೆಡ್ಡಿ ಹೇಳಿದ್ದೇನು?
"ನಾನು ಮೊದಲಿನಿಂದಲೂ ಬೆಂಗಳೂರು ನಗರಾಭಿವೃದ್ಧಿ ಖಾತೆಯ ಜವಾಬ್ದಾರಿಯನ್ನು ನಿರೀಕ್ಷಿಸಿದ್ದೆ. ಈ ಬಗ್ಗೆ ಭರವಸೆಯೂ ಇತ್ತು. ಆದರೆ, ಆ ಖಾತೆ ಸಿಗದ ಕಾರಣ ಸಚಿವ ಸ್ಥಾನದಲ್ಲಿ ಮುಂದುವರಿಯಲು ನನ್ನ ಮನಸ್ಸಾಕ್ಷಿ ಒಪ್ಪುತ್ತಿಲ್ಲ. ಹಾಗಾಗಿ ಇಷ್ಟವಿಲ್ಲದೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಈ ನಿರ್ಧಾರ ಕೈಗೊಂಡಿದ್ದೇನೆ," ಎಂದು ಅವರು ಬಹಿರಂಗವಾಗಿಯೇ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ಎಂಟು ಬಾರಿಯ ಶಾಸಕರಾಗಿರುವ ರಾಮಲಿಂಗಾರೆಡ್ಡಿ ಅವರ ಈ ದಿಢೀರ್ ನಡೆ, ಕಾಂಗ್ರೆಸ್ ಪಾಳಯದಲ್ಲಿ ಹಾಗೂ ರಾಜ್ಯ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಪಕ್ಷದ ಹೈಕಮಾಂಡ್ ಹಾಗೂ ರಾಜ್ಯ ನಾಯಕರು ಈ ಬಿಕ್ಕಟ್ಟನ್ನು ಹೇಗೆ ಶಮನ ಮಾಡಲಿದ್ದಾರೆ ಕಾದುನೋಡಬೇಕಿದೆ.