ಕೇರಳ | CPI(M) ನಾಯಕಿ, ಕೊಯಿಲಾಂಡಿ ಶಾಸಕಿ ಕಾನತ್ತಿಲ್ ಜಮೀಲಾ ನಿಧನ


ಕೊಯಿಲಾಂಡಿ: ಕೇರಳದ ಸಿಪಿಐ(ಎಂ) ಶಾಸಕಿ ಮತ್ತು ಜನಪರ ನಿಲುವಿಗೆ ಹೆಸರಾಗಿದ್ದ ಕಾನತ್ತಿಲ್ ಜಮೀಲಾ (59) ಶನಿವಾರ ರಾತ್ರಿ ಕೋಝಿಕ್ಕೋಡ್‌ನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಕೆಲಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಪಡೆಯುತ್ತಿದ್ದರು. ತಲಕ್ಕುಳತ್ತೂರು ಮೂಲದ ಜಮೀಲಾ ಅವರು ಪತಿ ಕಾನತ್ತಿಲ್ ಅಬ್ದುರಹ್ಮಾನ್, ಮಗ ಐರೀಝ್ ಮತ್ತು ಮಗಳು ಅನೂಜ ಅವರನ್ನು ಅಗಲಿದ್ದಾರೆ.

1966ರ ಮೇ 5ರಂದು ಕುಟ್ಟಿಯಾಡಿಯಲ್ಲಿ ಜನಿಸಿದ ಜಮೀಲಾ, ಶಾಲಾ ಚುನಾವಣೆಯಿಂದಲೇ ರಾಜಕೀಯಕ್ಕೆ ಮೊದಲ ಹೆಜ್ಜೆ ಇಟ್ಟಿದ್ದರು. 1995ರಲ್ಲಿ ತಲಕ್ಕುಳತ್ತೂರು ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿ ಜಯಗಳಿಸಿದ ಅವರು, ಯಾವುದೇ ಪೂರ್ವ ಅನುಭವವಿಲ್ಲದಿದ್ದರೂ ಪಂಚಾಯತ್ ಅಧ್ಯಕ್ಷೆಯಾಗಿ ಪದಗ್ರಹಣ ಮಾಡಿ ಜನಪರ ಆಡಳಿತ ನೀಡಿದರು. ಸಾಕ್ಷರತಾ ಮಿಷನ್‌ ನಲ್ಲಿ ಕಾರ್ಯಕರ್ತೆ ಆಗಿಯೂ ಅವರು ಕೆಲಸ ಮಾಡಿದ್ದಾರೆ.

2000-05ರಲ್ಲಿ ಪಂಚಾಯತ್ ಕಲ್ಯಾಣ ಸ್ಥಾಯಿ ಸಮಿತಿ ಅಧ್ಯಕ್ಷೆ, 2005-10ರಲ್ಲಿ ಚೆಲನ್ನೂರ್ ಬ್ಲಾಕ್ ಪಂಚಾಯತ್ ಅಧ್ಯಕ್ಷೆ ಹಾಗೂ 2010ರಲ್ಲಿ ಕೋಝಿಕ್ಕೋಡ್ ಜಿಲ್ಲಾ ಪಂಚಾಯತ್ ಅಧ್ಯಕ್ಷೆಯಾಗಿ ಆಯ್ಕೆಯಾದರು. ಅವರ ಅವಧಿಯಲ್ಲಿ 'ಸ್ನೇಹಸ್ಪರ್ಶಂ' ಕಿಡ್ನಿ ರೋಗಿಗಳ ನೆರವಿನ ಯೋಜನೆ, ಮಹಿಳೆಯರಲ್ಲಿ ಕ್ಯಾನ್ಸರ್ ಪತ್ತೆಗೆ ವಿಶೇಷ ಕಾರ್ಯಕ್ರಮ, ಬೀದಿ ನಾಯಿಗಳ ಹಾವಳಿ ತಡೆಗಟ್ಟಲು ಕರುಣಾ ಪ್ರಾಣಿ ಪುನರ್ವಸತಿ ಯೋಜನೆ, ಶೂನ್ಯ ಭೂರಹಿತ ಮಿಷನ್ ಸೇರಿದಂತೆ ಅನೇಕ ಕಲ್ಯಾಣ ಯೋಜನೆಗಳು ಜಾರಿಗೊಂಡಿದ್ದವು ಎಂದು thehindu.com ವರದಿ ಮಾಡಿದೆ.

ಸಿಪಿಐ(ಎಂ) ಜಿಲ್ಲಾ ಸಮಿತಿ ಸದಸ್ಯೆ, ಅಖಿಲ ಭಾರತ ಪ್ರಜಾಸತ್ತಾತ್ಮಕ ಮಹಿಳಾ ಸಂಘದ ರಾಜ್ಯ ಉಪಾಧ್ಯಕ್ಷೆಯಾಗಿ ಜಮೀಲಾ ಮಹಿಳಾ ಸಬಲೀಕರಣಕ್ಕೆ ಸದಾ ಮುಂಚೂಣಿಯಲ್ಲಿ ಕಾರ್ಯನಿರ್ವಹಿಸಿದ್ದರು. 2020ರಲ್ಲಿ ಮತ್ತೆ ಜಿಲ್ಲಾ ಪಂಚಾಯತ್ ಅಧ್ಯಕ್ಷೆಯಾಗಿ ಆಯ್ಕೆಯಾದ ಅವರು, 2021ರ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ ನಂತರ ಹುದ್ದೆಗೆ ರಾಜೀನಾಮೆ ನೀಡಿದರು. ಕೊಯಿಲಾಂಡಿ ಕ್ಷೇತ್ರದಲ್ಲಿ ಯುಡಿಎಫ್‌ನ ಎನ್. ಸುಬ್ರಮಣಿಯನ್ ಅವರನ್ನು 8,472 ಮತಗಳ ಅಂತರದಲ್ಲಿ ಸೋಲಿಸಿದ್ದರು.

ಜಮೀಲಾ ಅವರ ನಿಧನಕ್ಕೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸಂತಾಪ ಸೂಚಿಸಿದ್ದಾರೆ. "ಜಮೀಲಾ ಅವರು ಬಾಲ್ಯದಲ್ಲೇ ಕಮ್ಯುನಿಸ್ಟ್ ಆದರ್ಶಗಳನ್ನು ಅಳವಡಿಸಿಕೊಂಡವರು. ಪಂಚಾಯತ್, ಬ್ಲಾಕ್, ಜಿಲ್ಲಾ ಮಟ್ಟದಲ್ಲಿ ಆಡಳಿತಗಾರ್ತಿಯಾಗಿ ಅವರು ತೋರಿದ ಶ್ರೇಷ್ಠತೆ ಜನಪ್ರಿಯತೆ ಗಳಿಸಿತ್ತು. ಮಹಿಳೆಯರ ಸಮಸ್ಯೆಗಳ ಬಗ್ಗೆ ಸದಾ ಸ್ಪಷ್ಟ ನಿಲುವು ಹೊಂದಿದ್ದರು," ಎಂದು ಸ್ಮರಿಸಿದರು.

ವಿಧಾನಸಭಾ ಸ್ಪೀಕರ್ ಎ.ಎನ್. ಶಂಸೀರ್, "ಜಮೀಲಾ ತಮ್ಮ ಕ್ಷೇತ್ರದ ಪ್ರಶ್ನೆಗಳು ಹಾಗೂ ಮಹಿಳಾ ಹಿತಾಸಕ್ತಿಯ ವಿಷಯಗಳನ್ನು ವಿಧಾನಸಭೆಯಲ್ಲಿ ಧೈರ್ಯವಾಗಿ ಪ್ರಸ್ತಾಪಿಸಿದ ನಾಯಕಿ," ಎಂದು ಸಂತಾಪ ಸೂಚಿಸಿದ್ದಾರೆ.


Next Post Previous Post